More

    ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಅನ್ಯಾಯ

    ಹಾನಗಲ್ಲ: ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.

    ಪಟ್ಟಣದ ರಂಜನಿ ಚಿತ್ರಮಂದಿರದಿಂದ ಆರಂಭಗೊಂಡ ರೋಡ್ ಶೋ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಾಂಗ್ರೆಸ್ ಧ್ವಜ ಹಿಡಿದ ಕಾರ್ಯಕರ್ತರು ಜಯಘೋಷ ಮೊಳಗಿಸಿದರು. ಬದಲಾವಣೆಗೆ ಮತ ನೀಡಿ, ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು. ಗ್ರಾಮದೇವಿ ಪಾದಗಟ್ಟಿ ಹಾಗೂ ಅಮೀರ್ ಶಾವಲಿ ದರ್ಗಾಕ್ಕೆ ಭೇಟಿ ನೀಡಿ ಆನಂದಸ್ವಾಮಿ ಗಡ್ಡದೇವರಮಠ ಪ್ರಾರ್ಥನೆ ಸಲ್ಲಿಸಿದರು.

    ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಬಿಜೆಪಿಯ ಬಣ್ಣ ಕಳಚಿದೆ. ಬಿಜೆಪಿ ದೇಶದ ಉದ್ಯಮಿಗಳು, ಶ್ರೀಮಂತರಿಂದ ಸಾವಿರಾರು ಕೋಟಿ ರೂ. ಚುನಾವಣೆ ಬಾಂಡ್ ಮೂಲಕ ಕಿಕ್‌ಬ್ಯಾಕ್ ಪಡೆದಿರುವುದು ರುಜುವಾತಾಗಿದೆ. ದೇಶದ ಸಂಪತ್ತನ್ನು ಪಿತ್ರಾರ್ಜಿತ ಆಸ್ತಿಯಂತೆ ಬಿಜೆಪಿ ಮಾರಾಟ ಮಾಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕಕ್ಕೆ ಎಲ್ಲ ವಿಷಯಗಳಲ್ಲಿಯೂ ಮೋದಿ ಸರ್ಕಾರ ಅನ್ಯಾಯ ಮಾಡಿದೆ, ಮಾಡುತ್ತಿದೆ. ಬಡವರ ಖಾತೆಗೆ 15 ಲಕ್ಷ ರೂ. ಹಣ ಹಾಕಲಿಲ್ಲ, ರೈತರ ಆದಾಯ ಡಬಲ್ ಮಾಡಲಿಲ್ಲ, ತೆರಿಗೆ ಹಣ ನ್ಯಾಯಸಮ್ಮತವಾಗಿ ಹಂಚಿಕೆ ಮಾಡಲಿಲ್ಲ, ಬರ ಪರಿಹಾರ ಬಿಡುಗಡೆ ಮಾಡದೇ ಕರ್ನಾಟಕಕ್ಕೆ ಚೊಂಬು ಕೊಟ್ಟಿದೆ. ರಾಜ್ಯದ ಜನ ಬಿಜೆಪಿಗೂ ಚುನಾವಣೆಯಲ್ಲಿ ಚೊಂಬು ಕೊಡಲು ಸನ್ನದ್ಧರಾಗಿದ್ದಾರೆ ಎಂದರು.

    ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೋದಲ್ಲೆಲ್ಲ ಜನ ಪ್ರೀತಿ ತೋರುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ದಾಖಲೆ ಪ್ರಮಾಣದ ಜನ ಸುಡು ಬಿಸಿಲು ಲೆಕ್ಕಿಸದೇ ಆಗಮಿಸಿ ಹರಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದ ಅವರು ಕ್ಷೇತ್ರದ ವಿಕಾಸ, ಜನತೆಯ ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಡಿ ಎಂದರು.

    ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಒಂದೊಂದಾಗಿ ಸರ್ವೇಗಳು ಹೊರ ಬೀಳುತ್ತಿದ್ದು, ಬಿಜೆಪಿ ಸೋಲು ಖಚಿತ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳುತ್ತಿವೆ. 10 ವರ್ಷ ಅವಕಾಶ ಮಾಡಿಕೊಟ್ಟರೂ ಬಿಜೆಪಿಯು ಜನರ ಬದುಕು ಬದಲಿಸಲಿಲ್ಲ ಎನ್ನುವ ಆಕ್ರೋಶ ಎಲ್ಲೆಡೆ ಮನೆ ಮಾಡಿದೆ. ಬಿಜೆಪಿ ಉಳ್ಳವರ ಪರ ಎನ್ನುವುದು ಸಾಬೀತಾಗಿದೆ. ಶ್ರೀಮಂತರ ಸಾಲಮನ್ನಾ ಮಾಡುವ ಉತ್ಸಾಹವನ್ನು ರೈತರ ಸಾಲಮನ್ನಾ ಮಾಡಲು ಪ್ರದರ್ಶಿಸಲಿಲ್ಲ. ಬೆಲೆ ಹೆಚ್ಚಿಸಿ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ ಎಂದರು.

    ಶಿರಹಟ್ಟಿಯ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಯಾಸೀರಖಾನ್ ಪಠಾಣ, ಟಾಕನಗೌಡ ಪಾಟೀಲ, ಮತೀನ್ ಶಿರಬಡಗಿ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts