More

    ವಾರ್ನರ್ ಗಾಯದಿಂದ ಅಲಭ್ಯ, ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ರಾಂತಿ

    ಸಿಡ್ನಿ: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಡೇವಿಡ್ ವಾರ್ನರ್ ಗಾಯದಿಂದಾಗಿ ಭಾರತ ವಿರುದ್ಧದ ಸೀಮಿತ ಓವರ್ ಸರಣಿಯ ಬಾಕಿ ಉಳಿದಿರುವ 4 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಅವರು ತೊಡೆಸಂದು ಗಾಯಕ್ಕೊಳಗಾಗಿದ್ದರು. ಇದೇ ವೇಳೆ, ಕಾರ್ಯದೊತ್ತಡದ ದೃಷ್ಟಿಯಿಂದ ಆಸೀಸ್ ತಂಡದ ಪ್ರಮುಖ ವೇಗಿ ಹಾಗೂ ಉಪನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಗೆ ಸೀಮಿತ ಓವರ್ ಸರಣಿಯ ಉಳಿದ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.

    ಮೊದಲೆರಡು ಏಕದಿನ ಪಂದ್ಯಗಳಲ್ಲಿ 69, 83 ರನ್ ಸಿಡಿಸಿ ಮಿಂಚಿದ್ದ ವಾರ್ನರ್, ಡಿಸೆಂಬರ್ 17ರಿಂದ ಭಾರತ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಗೆ ಫಿಟ್ ಆಗುವ ನಿರೀಕ್ಷೆ ಇದೆ. ಇದಕ್ಕಾಗಿ ಪುನಶ್ಚೇತನದಲ್ಲಿ ಪಾಲ್ಗೊಳ್ಳಲು ಅವರಿಗೆ 18 ದಿನಗಳ ಕಾಲಾವಕಾಶ ಲಭಿಸಿದೆ. ವಾರ್ನರ್ ಗುಣಮುಖರಾಗಲು 4-6 ವಾರಗಳ ವಿಶ್ರಾಂತಿ ಅಗತ್ಯ ಎಂದು ಹೇಳಲಾಗಿದ್ದು, ಡಿ. 26ರಿಂದ ನಡೆಯಲಿರುವ 2ನೇ ಟೆಸ್ಟ್ ವೇಳೆಗಷ್ಟೇ ಅವರು ಫಿಟ್ ಆಗುವ ಸಾಧ್ಯತೆ ಇದೆ.

    ‘ವಾರ್ನರ್ ಮತ್ತು ಕಮ್ಮಿನ್ಸ್ ಟೆಸ್ಟ್ ಸರಣಿಯ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ’ ಎಂದು ಆಸೀಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ. ಸೀಮಿತ ಓವರ್ ಸರಣಿಯಲ್ಲಿ ವಾರ್ನರ್ ಸ್ಥಾನವನ್ನು ಮತ್ತೋರ್ವ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಡಾರ್ಸಿ ಶಾರ್ಟ್ ತುಂಬಲಿದ್ದಾರೆ. ಶಾರ್ಟ್ ಕಳೆದೆರಡು ಬಿಗ್ ಬಾಷ್ ಲೀಗ್ ಆವೃತ್ತಿಗಳಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿದ್ದರು.

    ಭಾರತ-ಆಸೀಸ್ ನಡುವಿನ ಅಂತಿಮ ಏಕದಿನ ಪಂದ್ಯ ಬುಧವಾರ ನಡೆಯಲಿದ್ದು, ಬಳಿಕ ಶುಕ್ರವಾರದಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

    ಕಮ್ಮಿನ್ಸ್ ಕಳೆದ ಆಗಸ್ಟ್‌ನಿಂದ ನಿರಂತರ ಕ್ರಿಕೆಟ್ ಆಡುತ್ತ ಬಂದಿರುವ ಕಾರಣ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡ್ ಪ್ರವಾಸದ ಬಳಿಕ ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಎಲ್ಲ ಪಂದ್ಯಗಳಲ್ಲಿ ಆಡಿದ್ದ ಅವರು, ಭಾರತ ವಿರುದ್ಧ ಮೊದಲ ಏಕದಿನದಲ್ಲಿ ವಿಕೆಟ್ ಕಬಳಿಸಲು ವಿಫಲರಾಗಿದ್ದರೂ, 2ನೇ ಪಂದ್ಯದಲ್ಲಿ 67 ರನ್‌ಗೆ 3 ವಿಕೆಟ್ ಕಬಳಿಸಿ ಮಿಂಚಿದ್ದರು.

    ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ಯುವತಿಯ ಪ್ರೀತಿ ಗೆದ್ದವ ಬೆಂಗಳೂರಿಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts