More

    ಮಕ್ಕಳ ಚುಚ್ಚುಮದ್ದಿಗೂ ನಿರ್ಬಂಧ

    ಶ್ರವಣ್‌ಕುಮಾರ್ ನಾಳ, ಪುತ್ತೂರು

    ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನೀಡಲಾಗುವ ಆ್ಯಂಟಿಬಯಾಟಿಕ್ ಚುಚ್ಚುಮದ್ದು ನೀಡುವುದನ್ನು ಕರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ ಅಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಶಿಾರಸು ಮಾಡುತ್ತಿರುವುದು, ಹಣ ಸುಲಿಗೆಯ ಹೊಸ ದಾರಿ ತೆರೆದುಕೊಂಡಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
    ಮಗು ಹುಟ್ಟಿದ 24 ಗಂಟೆಯೊಳಗೆ ಬಿಸಿಜಿ (0.05 ಎಂಎಲ್), ಹೆಪಟೈಟ್ ಬಿ (0.5 ಎಂಎಲ್) ಆಸ್ಪತ್ರೆಯಲ್ಲೇ ನೀಡಲಾಗುತ್ತಿದೆ. ಬಳಿಕ ವಿವಿಧ ಹಂತಗಳಲ್ಲಿ ಆ್ಯಂಟಿಮೈಕ್ರೋ ಬ್ಯಾಕ್ಟೀರಿಯಾ, ಪೆಪ್ಟೀರಿಯಾ ಹಾಗೂ ಇತರೆ ಲಸಿಕೆ ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಇವುಗಳು ಉಚಿತ. ಲಾಕ್‌ಡೌನ್ ಇದ್ದರೂ ಚುಚ್ಚುಮದ್ದಿಗಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಆದರೆ ಅಲ್ಲಿನ ವೈದ್ಯರು ಸಮೀಪದ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಶಿಫಾರಸು ಮಾಡುತ್ತಿದ್ದಾರೆ.

    ದುಬಾರಿ ಮೊತ್ತ
    15 ದಿನದ ಹಸುಗೂಸಿಗೆ ಒಪಿವಿ ಸಿಂಗಲ್ ಡ್ರಾಪ್, 6ರಿಂದ 14 ವಾರದ ಮಗುವಿಗೆ ಪೆಂಟಾವಾಲೆಂಟ್ 1.2.3(0.5ಎಂಲ್)ಚುಚ್ಚುಮದ್ದು, 9 ತಿಂಗಳ ಮಗುವಿಗೆ ಮಿಸೆಲ್ಸ್(0.5ಎಂಲ್), 14 ತಿಂಗಳ ಮಗುವಿಗೆ ಒಪಿವಿ ಡಬಲ್ ಡ್ರಾಪ್ ಮತ್ತು ಮೊದಲ ಹಂತದ ಡಿಪಿಟಿ ಚುಚ್ಚುಮದ್ದು, 5 ವರ್ಷದ ಮಗುವಿಗೆ 2ನೇ ಹಂತದ ಡಿಪಿಟಿ ಚುಚ್ಚುಮದ್ದು ನೀಡುವುದು ಅಗತ್ಯ. ಈ ಲಸಿಕೆ ಹಾಗೂ ಚುಚ್ಚುಮದ್ದುಗಳಿಗೆ ಗರಿಷ್ಠ ಬೆಲೆ 200-250 ರೂ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚುಚ್ಚುಮದ್ದು ನೀಡುವುದು ಸ್ಥಗಿತವಾಗಿದ್ದರಿಂದ ಖಾಸಗಿಯಲ್ಲಿ ಮನಬಂದಂತೆ ಹಣ ಪಡೆಯಲಾಗುತ್ತಿದೆ. ಕೆಲವು ಕಡೆಗಳಲ್ಲಿ 2 ಸಾವಿರ ರೂ.ನಷ್ಟು ಹಣ ಪಡೆಯಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

    ಉಡುಪಿಯಲ್ಲಿ ಹಸುಗೂಸುಗಳಿಗೆ ವ್ಯಾಕ್ಸಿನ್ ನಿಲ್ಲಿಸಿಲ್ಲ
    ಉಡುಪಿ ಜಿಲ್ಲೆಯಲ್ಲಿ ಐದು ವರ್ಷವರೆಗಿನ ಮಕ್ಕಳಿಗೆ ನೀಡಲಾಗುವ ವಿವಿಧ ರೀತಿಯ ಚುಚ್ಚುಮದ್ದುಗಳನ್ನು ನೀಡಲಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಹುಟ್ಟಿದ ಮಕ್ಕಳಿಗೆ, ಗರ್ಭಿಣಿಯರಿಗೆ ಮಾತ್ರ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಹಸುಗೂಸುಗಳಿಗೆ ನೀಡುವ ಅಗತ್ಯ ಚುಚ್ಚುಮದ್ದು ಇದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸದ್ಯಕ್ಕೆ ಹಸುಗೂಸುಗಳಿಗೆ ಚುಚ್ಚುಮದ್ದು ನೀಡುತ್ತಿಲ್ಲ. ಸರ್ಕಾರದ ಆದೇಶ ಬಂದ ಕೂಡಲೇ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚುಚ್ಚುಮದ್ದು ನೀಡುವ ಕೆಲಸ ಪುನಾರಂಭವಾಗಲಿದೆ.
    ಡಾ.ರಾಮಚಂದ್ರ ಬಾಯರಿ,
    ಆರೋಗ್ಯ ಅಧಿಕಾರಿ, ದ.ಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts