More

    ಮೊದಲ 5 ದಿನ… ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಹಿಮಾಚಲ ಪ್ರದೇಶದ ಕಾರ್ಮಿಕ ಹೇಳಿದ್ದಿಷ್ಟು….

    ಡೆಹ್ರಾಡೂನ್​: ಉತ್ತರಾಖಂಡದ ಸಿಲ್ಕ್​ಯಾರ ಸುರಂಗದಲ್ಲಿ ಸಿಲುಕ್ಕಿದ್ದ 41 ಕಾರ್ಮಿಕರನ್ನು ನಿನ್ನೆ (ನ.28) ರಾತ್ರಿ ಯಶಸ್ವಿಯಾಗಿ ಹೊರಗೆ ಕರೆತರಲಾಯಿತು. ಕಳೆದ 17 ದಿನಗಳಿಂದ ಕತ್ತಲೆ ಕೂಪದಲ್ಲಿ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬೆಳಕಿಗಾಗಿ ಪರಿತಪಿಸುತ್ತಾ, ನೆಚ್ಚಿನ ದೇವರಲ್ಲಿ ಇನ್ನೊಂದು ಅವಕಾಶಕ್ಕಾಗಿ ಬೇಡಿಕೊಳ್ಳುತ್ತಿದ್ದ ಕಾರ್ಮಿಕರಿಗೆ ದೇವರು ಮತ್ತೊಂದು ಅವಕಾಶ ನೀಡಿದ್ದು, ದೇಶದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಹೊರಬಂದ 41 ಕಾರ್ಮಿಕರಲ್ಲಿ ಒಬ್ಬರಾದ ವಿಶಾಲ್​ ಎಂಬುವರು ತಾವು ಅನುಭವಿಸಿದ ನೋವಿನ ಕ್ಷಣಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

    ಮೊದಲ ಐದು ದಿನ ಮಾತ್ರ ಅಕ್ಷರಶಃ ನರಕವಾಗಿತ್ತು. ಆದಾಗ್ಯೂ ನಮಗೆ ಸರಿಯಾದ ಆಹಾರ ಸಿಕ್ಕಿತು ಮತ್ತು ನಮ್ಮ ನಮ್ಮ ಸ್ಥೈರ್ಯ ಬಲವಾಗಿತ್ತು ಎಂದು ವಿಶಾಲ್​, ಸುರಂಗದಿಂದ ಹೊರ ಬಂದ ಬೆನ್ನಲ್ಲೇ ಇಂಡಿಯಾ ಟುಡೆಗೆ ತಿಳಿಸಿದರು. ಅಲ್ಲದೆ, ನಾನು ನನ್ನ ಕುಟುಂಬವನ್ನು ಭೇಟಿಯಾದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

    ನವೆಂಬರ್​ 12ರಂದು ವಿಶಾಲ್ ಮತ್ತು ಇತರ 40 ಕಾರ್ಮಿಕರು ಭೂಕುಸಿತದಿಂದಾಗಿ ಸಿಲ್ಕ್​ಯಾರ ಸುರಂಗದೊಳಗೆ ಸಿಲುಕಿದರು. ಇಡೀ ದೇಶ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ 41 ಕಾರ್ಮಿಕರು ಮಾತ್ರ ಕತ್ತಲೆ ಕೂಪದಲ್ಲಿ ಬದುಕಿಗಾಗಿ ಹವಣಿಸುತ್ತಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಮಿಕರ ಕುಟುಂಬದ ಮೇಲೂ ಕತ್ತಲೆ ಆವರಿಸಿ, ದೀಪಾವಳಿ ಬೆಳಕು ಮಂಕಾಗಿತ್ತು. ಆದರೆ, ನಿನ್ನೆ ಕಾರ್ಮಿಕರ ಕುಟುಂಬ ನಿಜವಾದ ದೀಪಾವಳಿಯನ್ನು ಆಚರಿಸಿದವು. ಅದರಲ್ಲಿ ವಿಶಾಲ್​ ಕುಟುಂಬವೂ ಒಂದು.

    ಅಂದಹಾಗೆ ವಿಶಾಲ್​, ಹಿಮಾಚಲ ಪ್ರದೇಶದ ಮಂಡಿ ಏರಿಯಾದ ನಿವಾಸಿ. ಯಶಸ್ವಿ ಕಾರ್ಯಾಚರಣೆಯೊಂದಿಗೆ ಮಗನನ್ನು ಸುರಕ್ಷಿತವಾಗಿ ಹೊರಗಡೆ ಕರೆತಂದಿದ್ದಕ್ಕೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳಿಗೆ ವಿಶಾಲ್​ ಅವರ ತಾಯಿ ಊರ್ಮಿಳಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಎರಡೂ ಸರ್ಕಾರಗಳ ಸ್ಪಂದನೆ ಬಗ್ಗೆ ನನಗೆ ತುಂಬಾ ಖುಷಿ ಇದೆ. ನನ್ನ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತೇನೆ ಎಂದು ವಿಶಾಲ್​ ತಾಯಿ ಹೇಳಿದರು.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಭಾರತೀಯ ಸೇನೆ, ಭೂಗತ ಸುರಂಗ ತಜ್ಞರು ಮತ್ತು ಇತರರನ್ನು ಒಳಗೊಂಡ 17 ದಿನಗಳ ನಿರಂತರ ರಕ್ಷಣಾ ಪ್ರಯತ್ನಗಳ ಬಳಿಕ ನಿನ್ನೆ ರಾತ್ರಿ ಎಲ್ಲ 41 ಕಾರ್ಮಿಕರನ್ನು ಸುರಂಗದಿಂದ ಹೊರಗಡೆ ಕರೆತರಲಾಯಿತು. ಕಾರ್ಮಿಕರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳ ಬಳಿ ಕರೆತರುತ್ತಿದ್ದಂತೆ ಜೋರಾಗಿ ಹರ್ಷೋದ್ಗಾರಗಳು ಮತ್ತು ಘೋಷಣೆಗಳು ಮೊಳಗಿದವು. ಅಲ್ಲದೆ, ಸ್ಥಳೀಯರು ಸಿಹಿಯನ್ನು ಹಂಚಿ ಸಂಭ್ರಮಿಸಿದರು. (ಏಜೆನ್ಸೀಸ್​)

    ಸಾವು ಗೆದ್ದ 41 ಕಾರ್ಮಿಕರು! 17 ದಿನದ ಬಳಿಕ ಸುರಂಗದಿಂದ ಹೊರಕ್ಕೆ, ಒಬ್ಬೊಬ್ಬರನ್ನು ಹೊರ ಕರೆತರುತ್ತಿರುವ NDRF

    ವರವಾಗಿ ಬಂದ ಮೂಷಿಕ ಪಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts