More

    ಮೂರು ಗ್ರಾಮಗಳಲ್ಲಿ ಹರಡಿಲ್ಲ ಸೋಂಕು

    ರೋಣ: ತಾಲೂಕಿನ 52 ಗ್ರಾಮಗಳ ಪೈಕಿ 49 ಗ್ರಾಮಗಳಲ್ಲಿ ಕರೊನಾ ರಣಕೇಕೆ ಹಾಕುತ್ತಿದೆ. ಆದರೆ, ತಾಲೂಕಿನ ಹೊನ್ನಿಗನೂರ, ಯರೇಕುರಬನಾಳ ಹಾಗೂ ಗುಳಗುಂದಿ ಗ್ರಾಮಗಳಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಕಾರಣ ಈ ಮೂರು ಗ್ರಾಮಗಳ ಜನರು ಸರ್ಕಾರ ಸೂಚಿಸಿರುವ ನಿಯಮಗಳನ್ನು ತಪ್ಪದೆ ಪಾಲಿಸುತ್ತಿದ್ದಾರೆ.

    300 ಮನೆಗಳನ್ನು ಹೊಂದಿರುವ ಹೊನ್ನಿಗನೂರ ಗ್ರಾಮದ ಜನಸಂಖ್ಯೆ 1500 ಕ್ಕೂ ಹೆಚ್ಚು. ಎಲ್ಲ ಗ್ರಾಮಗಳಂತೆ ಇಕ್ಕಟ್ಟಾದ ಮನೆಗಳಿವೆ. ಆದರೆ, ಗ್ರಾಮಸ್ಥರು ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡಿದ್ದಾರೆ. ಎಲ್ಲರೂ ಸುರಕ್ಷಿತ ಅಂತರ ಕಾಪಾಡುತ್ತಾರೆ. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವುದಿಲ್ಲ.

    ಇಲ್ಲಿನ ಹೆಚ್ಚಿನ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ಬಹುತೇಕರು ತಮ್ಮ ಹೊಲದಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಬೆಳಗ್ಗೆ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋದರೆ ಸಂಜೆಯೇ ಮನೆಗೆ ಮರಳುತ್ತಾರೆ. ಸೋಂಕು ಈ ಗ್ರಾಮಕ್ಕೆ ಕಾಲಿಡದಿರಲು ಇದು ಪ್ರಮುಖ ಕಾರಣ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಕರೊನಾ ಸೋಂಕು ಎಲ್ಲೆಡೆ ನಿಯಂತ್ರಣಕ್ಕೆ ಬರುವವರೆಗೆ ಗ್ರಾಮಸ್ಥರು ಬೇರೆ ಊರಿಗೆ ಹೋಗುವುದು ಮತ್ತು ಬೇರೆ ಊರಿನ ಜನ ಗ್ರಾಮಕ್ಕೆ ಬರುವುದನ್ನು ನಿಷೇಧಿಸಲಾಗಿದೆ.

    ಹಿರೇಹಾಳ ಪಿಎಚ್​ಸಿ ವ್ಯಾಪ್ತಿಯ 12 ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ, ಹೊನ್ನಿಗನೂರ ಗ್ರಾಮದಲ್ಲಿ ಇಲ್ಲಿಯವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ. ಅಲ್ಲಿನ ಜನರು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳು ಇತರ ಗ್ರಾಮಗಳಿಗೆ ಮಾದರಿಯಾಗಿವೆ.

    | ಡಾ. ನಾಗರಾಜ, ಹಿರೇಹಾಳ ಪಿಎಚ್​ಸಿ ವೈದ್ಯ

    ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ

    300 ಮನೆ, 880 ಜನಸಂಖ್ಯೆಯನ್ನು ಹೊಂದಿರುವ ಗುಳಗುಂದಿ ಗ್ರಾಮದಲ್ಲಿ ಎರಡನೇ ಅಲೆಯಲ್ಲಿ ಒಂದೇ ಒಂದು ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಇಲ್ಲಿನ ಗ್ರಾಮಸ್ಥರು ಆರೋಗ್ಯ ಇಲಾಖೆಯವರು ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಕೆಮ್ಮು, ಮೈಕೈ ತಲೆ ನೋವು ಕಂಡ ತಕ್ಷಣ ಆರೋಗ್ಯ ಇಲಾಖೆಯನ್ನು ಸಂರ್ಪಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದರಿಂದ ಈ ಗ್ರಾಮದಲ್ಲಿ ಯಾರಿಗೂ ಕರೊನಾ ಸೋಂಕು ಕಾಣಿಸಿಕೊಂಡಿಲ್ಲ. ಅಲ್ಲದೆ, ಗ್ರಾಮದ ಬಹುತೇಕ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೊಳೆಆಲೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ರಂಗಪ್ಪ ಕುರಹಟ್ಟಿ ಹೇಳಿದರು.

    ಮನೆಯಿಂದ ಹೊರ ಬಂದರೆ, ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಾರೆ. ಎಲ್ಲರೂ ಏಕಕಾಲಕ್ಕೆ ಹೋಗಿ ದಿನಸಿ, ತರಕಾರಿ ತರುವುದಿಲ್ಲ. ವಾರಕ್ಕೊಮ್ಮೆ ಮನೆಯಲ್ಲಿನ ಒಬ್ಬರು ಮಾತ್ರ ದಿನಸಿ ಖರೀದಿಸಿ ಮರಳುತ್ತಾರೆ. ಸ್ನಾನ ಮಾಡಿದ ಬಳಿಕವೇ ಮನೆ ಪ್ರವೇಶಿಸುತ್ತಾರೆ.

    ಚಿಕ್ಕ-ಚೊಕ್ಕ ಗ್ರಾಮ

    50 ಮನೆಗಳನ್ನು ಹೊಂದಿರುವ ಯರೇಕುರಬನಾಳ ಗ್ರಾಮದಲ್ಲಿ ಸುಮಾರು 250 ಜನಸಂಖ್ಯೆಯಿದೆ. ಇದು ತಾಲೂಕಿನ ತಾಲೂಕಿನ ಅತ್ಯಂತ ಪುಟ್ಟ ಗ್ರಾಮ. ಯರೇಕುರಬನಾಳದಲ್ಲಿ ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಹೀಗಾಗಿ, ಕರೊನಾ ವೈರಸ್ ಮುಕ್ತ ಗ್ರಾಮ ಎಂದು ಹೆಸರು ಪಡೆದಿದೆ. ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್, ಕಾನೂನಿನ ಭಯ ಈ ಗ್ರಾಮದ ಜನರಲ್ಲಿ ಹೆಚ್ಚಿರುವುದರಿಂದ ಲಾಕ್​ಡೌನ್ ಸಂದರ್ಭದಲ್ಲಿ ಮನೆಬಿಟ್ಟು ಜನರು ಹೊರ ಬರುವುದಿಲ್ಲ ಎಂದು ಗ್ರಾಮದ ಯುವಕ ಶರಣಪ್ಪ ಓಲೇಕಾರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts