More

    ಕರೊನಾ ಓಡಿಸಲು ಪಂಚ ಚಿಕಿತ್ಸೆ

    ಕರೊನಾ ಓಡಿಸಲು ಪಂಚ ಚಿಕಿತ್ಸೆ

    ಚಿಕ್ಕಮಗಳೂರು: ಕರೊನಾ ನಿಗ್ರಹಿಸಲು ಆರೋಗ್ಯ ಇಲಾಖೆ ರೋಗಿಗಳಿಗೆ ಐದು ವಿಭಾಗಗಳಲ್ಲಿ ಚಿಕಿತ್ಸೆ ನೀಡುತ್ತಿದೆ. ಡಿಸಿಎಚ್(ಜಿಲ್ಲಾ ಕರೊನಾ ಆಸ್ಪತ್ರೆ), ಡಿಸಿಎಚ್​ಸಿ (ಜಿಲ್ಲಾ ಕರೊನಾ ಆಸ್ಪತ್ರೆ ಕೇರ್), ಸಿಸಿಸಿ (ಕರೊನಾ ಕೇರ್ ಸೆಂಟರ್), ಹೋಮ್ ಐಸೋಲೇಷನ್(ಸೋಂಕಿತರ ಮನೆಯಲ್ಲಿಯೇ ಚಿಕಿತ್ಸೆ) ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶುಶ್ರೂಷೆ ಕೊಡಲಾಗುತ್ತಿದೆ.

    ಪ್ರಾರಂಭದಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಚಿಕಿತ್ಸೆ ನೀಡಲು ನಗರದ ಜಿಲ್ಲಾ ಕರೊನಾ ಆಸ್ಪತ್ರೆಗೇ ದಾಖಲಿಸಲಾಗುತ್ತಿತ್ತು. ದಿನೇದಿನೆ ರೋಗಿಗಳ ಸಂಖ್ಯೆ ಹೆಚ್ಚಾಗಿ ಕರೊನಾ ಪ್ರಕರಣ 800ರ ಗಡಿ ಸಮೀಪಿಸಿದೆ. ಇನ್ನೊಂದೆಡೆ ಮರಣ ಹೊಂದುವವರ ಪ್ರಮಾಣವೂ ಹೆಚ್ಚುತ್ತಿರುವುದರಿಂದ ಚಿಕಿತ್ಸಾ ವಿಧಾನದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಸೋಂಕಿತರ ಆರೋಗ್ಯ ನೋಡಿಕೊಂಡು ಐದು ವಿಭಾಗಗಳಲ್ಲಿ ವಿಂಗಡಿಸಿ ಶುಶ್ರೂಷೆ ನೀಡಲಾಗುತ್ತಿದೆ.

    ಕರೊನಾ ಶಂಕಿತರ ಗಂಟಲು ದ್ರವದ ಮಾದರಿ ಮೊದಲ ಹಂತದಲ್ಲಿ ತಪಾಸಣೆ ನಡೆಸಿ ಸೋಂಕಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟ ತಾಲೂಕು, ಜಿಲ್ಲಾ ಕೇಂದ್ರದ ವೈದ್ಯರಿಂದ ತಪಾಸಣೆಗೆ ಒಳಪಡಿಸಲಾಗುತ್ತದೆ. ಅವರಿಗೆ ತೀವ್ರ ಉಸಿರಾಟದ ತೊಂದರೆ, ಹೃದಯ, ಕಿಡ್ನಿ ಮತ್ತಿತರ ಕಾಯಿಲೆ ಇದೆಯೇ ಎನ್ನುವ ಮಾಹಿತಿ ಪಡೆಯಲಾಗುತ್ತದೆ. ನಂತರ ಚಿಕಿತ್ಸಾ ಕೇಂದ್ರ ಯಾವುದೆನ್ನುವುದನ್ನು ನಿರ್ಧರಿಸಲಾಗುತ್ತದೆ.

    ಉಸಿರಾಟದ ಮಟ್ಟ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಹೇಗಿದೆ ಎಂಬ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಮ್ಲಜನಕ ಮಟ್ಟದ ಮಾಹಿತಿ ಕಲೆಹಾಕಿ ಅವರನ್ನು ಯಾವ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಬೇಕು ಎಂಬುದನ್ನೂ ಆರೋಗ್ಯ ಇಲಾಖೆಯೇ ನಿರ್ಧರಿಸುತ್ತಿದೆ. ಸೋಂಕಿತರೇ ಬೇಡಿಕೆ ಇಟ್ಟಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತಿದೆ.

    ಡಿಸಿಎಚ್, ಡಿಸಿಎಚ್​ಸಿಯಲ್ಲಿ ತೀವ್ರ ನಿಗಾ: ಡಿಸಿಎಚ್, ಡಿಸಿಎಚ್​ಸಿ ವಿಭಾಗದಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ನಿಗಾವಹಿಸುತ್ತಿದೆ. ಜಿಲ್ಲಾ ಕರೊನಾ ಆಸ್ಪತ್ರೆ, ಜಿಲ್ಲಾ ಕರೊನಾ ಆಸ್ಪತ್ರೆ ಕೇರ್ ಎಂದು ಕರೆಯಲ್ಪಡುವ ಆಸ್ಪತ್ರೆಯಲ್ಲಿ ಸೋಂಕಿತರ ಜತೆಗೆ ಬೇರೆ ಬೇರೆ ಕಾಯಿಲೆಗಳಿಂದ ಗಂಭೀರ ಸ್ಥಿತಿಯಲ್ಲಿರುವವರನ್ನೂ ದಾಖಲಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಪತ್ತೆಯಾಗುವ ಬಹುತೇಕ ಕರೊನಾ ಸೋಂಕಿತರಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ವಿರಳ ಇರುವುದರಿಂದ ಅವರಿಗೆ ಚಿಕಿತ್ಸೆ ನೀಡಿ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಆರೋಗ್ಯ ಇಲಾಖೆ ಲೆಕ್ಕಾಚಾರ. ಉಸಿರಾಟದ ರೇಟ್ 25ರಿಂದ 30, ಅಮ್ಲಜನಕ ರೇಟ್ 92 ಇರುವವರನ್ನು ಡಿಸಿಎಚ್​ಗೆ ದಾಖಲಿಸಲಾಗುತ್ತದೆ. ಉಸಿರಾಟದ ಪ್ರಮಾಣ 20ರಿಂದ 24 ಹಾಗೂ ಉಸಿರಾಟದ ತೊಂದರೆ ಪ್ರಮಾಣದ ಸೋಂಕಿತರನ್ನು ಡಿಸಿಎಚ್​ಸಿಗೆ ದಾಖಲಿಸಲಾಗುತ್ತಿದೆ.

    ಹೋಮ್ ಐಸೋಲೇಷನ್​ಗೆ ಒಳಪಡುವವರು: ಕರೊನಾ ದೃಢಪಟ್ಟ ಬಳಿಕ ಅವರು ಹೋಮ್ ಐಸೋಲೇಷನ್​ನಲ್ಲಿರಲು ಇಚ್ಛೆಪಟ್ಟರೆ ಅವರ ಚಿಕಿತ್ಸೆ ಬಗ್ಗೆ ಆರೋಗ್ಯ ಇಲಾಖೆಯೇ ನಿರ್ಧರಿಸುತ್ತದೆ. ಎ ಸಿಮ್ಟಮ್ ಅಥವಾ ಜ್ವರ, ಶೀತ, ಕೆಮ್ಮು ಯಾವುದೇ ಲಕ್ಷಣವಿಲ್ಲದೆ ಪಾಸಿಟಿವ್ ಬಂದಿರುವ ಪ್ರಕರಣಗಳನ್ನು ಹೋಮ್ ಐಸೋಲೇಷನ್​ಗೆ ಒಳಪಡಿಸಲಾಗುತ್ತಿದೆ. ಮೊದಲಿಗೆ ಸೋಂಕಿತರ ಮನೆಯನ್ನು ಆರೋಗ್ಯ ಸಿಬ್ಬಂದಿ ಪರಿಶೀಲಿಸಿ ಪ್ರತ್ಯೇಕ ಕೊಠಡಿ, ಶೌಚಗೃಹವಿದ್ದರೆ ಮಾತ್ರ ಅದಕ್ಕೆ ಅವಕಾಶ ನೀಡುತ್ತಾರೆ.

    ಈ ಪ್ರಕರಣಗಳಲ್ಲಿ ವೈದ್ಯರು ಸಲಹೆ ನೀಡಿದ ಸಮಯಕ್ಕೆ ಸರಿಯಾಗಿ ಉಸಿರಾಟದ ಮಾಹಿತಿ ನೀಡುತ್ತಿರಬೇಕು. ಊಟ, ಉಪಾಹಾರ ಸೇರಿ ಅವರನ್ನು ನೋಡಿಕೊಳ್ಳುವವರು ಅಂತರ ಕಾಯ್ದುಕೊಳ್ಳಬೇಕಿದ್ದು ಸೋಂಕಿತರು ಯಾವ ಕಾರಣಕ್ಕೂ ಹೊರಬಾರದಂತೆ ಸೂಚನೆ ನೀಡಲಾಗುತ್ತದೆ. ಸೋಂಕಿತರು ಇರುವ ಸ್ಥಳದ ಸೀಲ್​ಡೌನ್ ಜತೆಗೆ ಹೆಚ್ಚಿನ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

    ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅವಕಾಶ: ರೋಗಿಗಳು ಇಚ್ಛಿಸಿದರೆ ಮಾತ್ರ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಅಂಥವರಿಗೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಿಂದಲೇ ರೋಗಿಗಳನ್ನು ದಾಖಲಿಸಿಕೊಳ್ಳುವಂತೆ ಕಳಿಸಿದರೆ ಅದಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಕೊರತೆ ತಲೆದೋರಿ ಖಾಸಗಿ ಆಸ್ಪತ್ರೆಗಳಿಗೆ ಕಳಿಸಿಕೊಡುವ ಪ್ರಮೇಯ ಸದ್ಯ ಬರಲಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts