More

    ಸೋಂಕು ದೃಢಪಡುತ್ತಿದ್ದಂತೆ ಕಾಲ್ಕಿತ್ತ ಯುವಕ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ತನಗೆ ಕರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಯುವಕನೊಬ್ಬ ಮನೆಯಿಂದ ಪರಾರಿಯಾದ ಘಟನೆ ಶನಿವಾರ ರಾತ್ರಿ ರಟ್ಟಿಹಳ್ಳಿ ತಾಲೂಕಿನ ಪರ್ವತಸಿದ್ದಗೇರಿ ಗ್ರಾಮದಲ್ಲಿ ನಡೆದಿದೆ.

    ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಇತ್ತೀಚೆಗೆ ತನ್ನೂರು ಪರ್ವತಸಿದ್ದಗೇರಿಗೆ ಮರಳಿದ್ದ. ಈತನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಶನಿವಾರ ವರದಿ ಪಾಸಿಟಿವ್ ಬಂದಿದೆ. ಈ ಕುರಿತು ಮೊಬೈಲ್​ಗೆ ಸಂದೇಶ ಬರುತ್ತಿದ್ದಂತೆ ಯುವಕ ಮನೆಯಿಂದ ಕಾಲ್ಕಿತ್ತಿದ್ದಾನೆ. ಭಾನುವಾರ ಬೆಳಗ್ಗೆ ಯುವಕನನ್ನು ಕರೆದುಕೊಂಡು ಬರಲು ಆಂಬುಲೆನ್ಸ್​ನೊಂದಿಗೆ ಆರೋಗ್ಯ ಸಿಬ್ಬಂದಿ ಮನೆಗೆ ಹೋದಾಗ ಈ ವಿಷಯ ತಿಳಿದಿದೆ.

    ಮನೆಯಿಂದ ಪರಾರಿಯಾದ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆ ಹಾಕುತ್ತಿದೆ. ಯುವಕನ ವಿರುದ್ಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗಾದರೂ ಆತನ ಸುಳಿವು ದೊರೆತರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಪಿಎಸ್​ಐ ಆರ್. ಆಶಾ ತಿಳಿಸಿದ್ದಾರೆ.

    ಕರೊನಾ ಸೋಂಕಿತ ಮನೆಯಿಂದ ಪರಾರಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆತ ಎಲ್ಲಿ ಹೋಗಿದ್ದಾನೆ, ಯಾರೊಂದಿಗೆ ಸಂಪರ್ಕ ಬೆಳೆಸಿ, ಇನ್ನೆಷ್ಟು ಜನರಿಗೆ ಸೋಂಕು ಹರಡಿಸುತ್ತಾನೋ ಎಂಬ ಚಿಂತೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಾಡತೊಡಗಿದೆ.

    ತಾಲೂಕಿನ ಇಬ್ಬರಿಗೆ ಸೋಂಕು: ಭಾನುವಾರ ತಾಲೂಕಿನ ತಿಪ್ಪಾಯಿಕೊಪ್ಪದ 33 ವರ್ಷದ ಹಾಗೂ ಪರ್ವತಸಿದ್ದಗೇರಿ ಗ್ರಾಮದ 29 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಿಪ್ಪಾಯಿಕೊಪ್ಪ ಗ್ರಾಮದ ಮಠದ ರಸ್ತೆಯನ್ನು ಸೀಲ್​ಡೌನ್ ಮಾಡಿ, ಪರ್ವತ ಸಿದ್ದಗೇರಿ ಗ್ರಾಮಕ್ಕೆ ಭೇಟಿ ನೀಡಿ ಕನ್ನಡ ಶಾಲೆಯ ರಸ್ತೆಯನ್ನು ಸೀಲ್​ಡೌನ್ ಮಾಡಲಾಗಿದೆ. ಇಬ್ಬರು ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸುತ್ತಿದ್ದಾರೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ *** ಜನರನ್ನು ಆರೋಗ್ಯ ಇಲಾಖೆ ವತಿಯಿಂದ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ತಿಳಿಸಿದ್ದಾರೆ.

    166ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ: ಹಾವೇರಿ ಜಿಲ್ಲೆಯಲ್ಲಿ ಭಾನುವಾರವೂ ಕರೊನಾ ರಣಕೇಕೆ ಮುಂದುವರಿದಿದೆ. ಖಾಸಗಿ ವೈದ್ಯ, ಬಾಣಂತಿ, ಪೊಲೀಸ್, ವಕೀಲ ಹಾಗೂ ಮೂವರು ಆಶಾ ಕಾರ್ಯಕರ್ತೆಯರು ಸೇರಿ 15 ಜನರಿಗೆ ಪಾಸಿಟಿವ್ ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 166ಕ್ಕೇರಿದೆ. 37 ಜನ ಗುಣವಾಗಿ ಬಿಡುಗಡೆಗೊಂಡಿದ್ದು, 127 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಹಾವೇರಿ ತಾಲೂಕಿನಲ್ಲಿ 5, ಹಾನಗಲ್ಲ 5, ಶಿಗ್ಗಾಂವಿ 3, ರಟ್ಟಿಹಳ್ಳಿಯಲ್ಲಿ 2 ಪ್ರಕರಣಗಳು ದೃಢಪಟ್ಟಿವೆ. ಹಾವೇರಿ ತಾಲೂಕಿನ ಕರ್ಜಗಿಯ 20 ವರ್ಷದ ಮಹಿಳೆಗೆ ಜು. 1ರಂದು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಹೆರಿಗೆಗೂ ಮುನ್ನ ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. 4ರಂದು ಪಾಸಿಟಿವ್ ವರದಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts