More

    ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿ

    ಬೆಳಗಾವಿ : ಸರ್ಕಾರಿ ನೌಕರರು, ಪೊಲೀಸರಿಗೆ ಹಾಗೂ ಸಾಮಾನ್ಯ ಜನರಿಗೆ ಕರೊನಾ ಸೋಂಕು ದೃಢಪಟ್ಟರೆ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವುದು ಉತ್ತಮ ಎಂದು ಜಿಲ್ಲಾ ಉಸ್ತುವಾರಿ ಸಚಿವರ ರಮೇಶ ಜಾರಕಿಹೊಳಿ ಸಲಹೆ ನೀಡಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಕೋವಿಡ್-19, ಅತಿವೃಷ್ಟಿಗೆ ಸಂಬಂಧಿಸಿದಂತೆ ಕೈಗೊಂಡಿರುವ ತುರ್ತು ಕ್ರಮಗಳ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ಸೋಂಕಿತರಿಗೆ ಮನೆೆಯಲ್ಲೇ ಚಿಕಿತ್ಸೆ ನೀಡುವುದರಿಂದ ಒಳ್ಳೆಯ ಆಹಾರದ ಜತೆಗೆ ಕುಟುಂಬ ಸದಸ್ಯರಿಂದ ಧೈರ್ಯ ಸಿಗುತ್ತದೆ. ಇದರಿಂದ ಅವರಿಗೆ ಧೈರ್ಯ ಸಿಗುವುದರ ಜತೆಗೆ ಸೋಂಕಿತರು ಕರೊನಾದಿಂದ ಬೇಗ ಗುಣಮುಖರಾಗುತ್ತಾರೆ ಎಂದರು.

    ಡಿಸಿಗೆ ವರದಿ ನೀಡಿ: ಈಗಾಗಲೇ ಜಿಲ್ಲೆಯಲ್ಲಿ ಶೇ. 60ರಷ್ಟು ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕ್ರಿಯೆಗೆ ಉತ್ತಮ ಸ್ಪಂದನೆಯಿದೆ. ಆರೋಗ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಸರಿಯಾದ ಆಹಾರ, ವೈದ್ಯಕೀಯ ಸೌಲಭ್ಯ ನೀಡಬೇಕು. ಪ್ರತಿ ತಾಲೂಕಿಗಳಲ್ಲಿರುವ ಕೋವಿಡ್-19 ಸೆಂಟರ್‌ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

    ಇನ್ನೂ ಹೆಚ್ಚಿನ ಕೆಲಸ ಮಾಡಿ: ಪ್ರತಿ ಮೂರ್ನಾಲ್ಕು ವರ್ಷಗಳಲ್ಲಿ ಹೊಸ ಹೊಸ ರೋಗಗಳು ಹರಡುತ್ತಿವೆ. ಆದರೆ, ಕೋವಿಡ್-19 ಜನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ. ಹೀಗಾಗಿ ಆರೋಗ್ಯ ಇಲಾಖೆಯವರು ಜಾಗೃತರಾಗಿ ಕೆಲಸ ಮಾಡಬೇಕು. 15 ದಿನಗಳ ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಅನ್ಯ ಕಾಯಿಲೆ ಇರುವವರಿಗೂ ಚಿಕಿತ್ಸೆ ನೀಡವ ಬಗ್ಗೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಾವಿನ ಸಂಖ್ಯೆ ಕಡಿಮೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 700 ಬೆಡ್‌ಗಳಿದ್ದು, ಆಕ್ಸಿಜನ್ ವ್ಯವಸ್ಥೆ ಇದೆ. ಜಿಲ್ಲೆಗೆ 54 ವೆಂಟಿಲೇಟರ್ ಬಂದಿದ್ದು, ಅದರಲ್ಲಿ 20 ವೆಂಟಿಲೇಟರ್‌ನ್ನು ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಉಳಿದವುಗಳನ್ನು ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ ಸರಾಸರಿ ಗಮನಿಸಿದರೆ, ನಮ್ಮಲ್ಲಿ ಕಡಿಮೆ ಇದೆ. ವಿವಿಧ ರಾಜ್ಯಗಳಿಗೆ ಕೆಲಸಕ್ಕೆ ತೆರಳಿದ್ದ ವಲಸೆ ಕಾರ್ಮಿಕರು ಬಂದ ಬಳಿಕ ಗ್ರಾಮೀಣ ಭಾಗದಲ್ಲಿ ಸೋಂಕು ಹರಡಿದೆ. ನಗರಕ್ಕೆ ಹೋಲಿಸಿದರೆ ಸದ್ಯ ಗ್ರಾಮ ಮಟ್ಟದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ ಎಂದರು.

    ಶಿಶುಗಳಿಗೆ ನೆಗೆಟಿವ್: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ವಿ.ಮುನ್ಯಾಳ ಮಾತನಾಡಿ, ತಾಲೂಕು ಹಾಗೂ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಬಳಲುತ್ತಿದ್ದ 140 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಅಲ್ಲದೆ, ಜನಿಸಿದ ಶಿಶುಗಳಿಗೆ ಕೋವಿಡ್-19 ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

    ನಗರ ಪೋಲಿಸ್ ಆಯುಕ್ತ ಡಾ.ತ್ಯಾಗರಾಜನ, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಎಚ್.ವಿ.ದರ್ಶನ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಪ್ರವಾಹದಿಂದ 1,160 ಕೋಟಿ ರೂ. ನಷ್ಟ

    ನಿರಂತರ ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ 1,160 ಕೋಟಿ ರೂಪಾಯಿ ನಷ್ಟವಾಗಿದೆ. ಪ್ರವಾಹದಿಂದಿ ಈ ಬಾರಿ ಸಮಸ್ಯೆ ಆಗಿಲ್ಲ. ಆದರೂ, ರೈತರಿಗೆ ಬೆಳೆ ಪರಿಹಾರ ನೀಡಲು ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯದ ಮಟ್ಟಿಗೆ ಪ್ರವಾಹ ನಿಯಂತ್ರಣದಲ್ಲಿದೆ. ರೈತರಿಂದ ಬೆಳೆ ಸಮೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲಿ ಜಿಲ್ಲೆಯಲ್ಲಿ ಪ್ರವಾಹ ಸಮೀಕ್ಷೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts