More

    ಆಶ್ರಯ ಯೋಜನೆಗೆ ಅನರ್ಹರ ಆಯ್ಕೆ

    ಹಾವೇರಿ: ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಅವಧಿಯಲ್ಲಿ ಆಶ್ರಯ ಯೋಜನೆಯಡಿ 1,112 ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ. ತಲಾ 5 ರಿಂದ 25 ಸಾವಿರ ರೂ. ಲಂಚ ಪಡೆದು ಅನರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ನೆಹರು ಓಲೇಕಾರ ಆರೋಪಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ಫಲಾನುಭವಿಗಳನ್ನು ಕಾನೂನು ಬಾಹಿರವಾಗಿ ಶಾಸಕರು ಬದಲಾಯಿಸುತ್ತಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಮಾಡಿದ ಅವ್ಯವಹಾರ ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ. ದುಡ್ಡು ಕೊಟ್ಟವರಿಗೆ, ಬೇರೆ ಊರಿನವರಿಗೆ, ಈಗಾಗಲೇ ಮನೆ ಹೊಂದಿರುವ ಅನರ್ಹರಿಗೆ ಮನೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ನಾವು ಮನೆ ಮಾರಿಕೊಳ್ಳುತ್ತಿಲ್ಲ. ಅರ್ಹರಿಗೆ ಮನೆ ಸಿಗಬೇಕು ಎಂಬ ಕಾರಣಕ್ಕೆ ಈ ಹಿಂದೆ ತಯಾರಿಸಿದ್ದ ಫಲಾನುಭವಿಗಳ ಪಟ್ಟಿಯಲ್ಲಿನ ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ನೀಡಲಾಗುತ್ತಿದೆ. ಅದಕ್ಕಾಗಿ ಆಶ್ರಯ ಸಮಿತಿಯಿಂದ ಮನೆ ಮನೆ ಸಮೀಕ್ಷೆ ನಡೆಸಿ ಸೂರಿಲ್ಲದವರನ್ನು ಗುರುತಿಸಲಾಗಿದೆ ಎಂದರು.
    1,112 ಫಲಾನುಭವಿಗಳಲ್ಲಿ 700ಕ್ಕೂ ಹೆಚ್ಚು ಅನರ್ಹರನ್ನು ಆಯ್ಕೆ ಮಾಡಲಾಗಿತ್ತು. ಇಂತಹ ಗೋಲ್ಮಾಲ್ ನೋಡಿಯೂ ಸುಮ್ಮನಿರಲು ಸಾಧ್ಯವಿಲ್ಲ. ಅನರ್ಹರನ್ನು ಆಯ್ಕೆ ಮಾಡಿರುವುದನ್ನು ಬದಲಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೂ, ಮಾಜಿ ಸಚಿವ ಎಂ.ಬಿ. ಪಾಟೀಲ ಅವರು ಇದು ಕಾನೂನು ಉಲ್ಲಂಘನೆ ಎಂದು ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿ ಈ ರೀತಿ ಅನರ್ಹರನ್ನು ಆಯ್ಕೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ವಿಧಾನಸಭೆಯಲ್ಲಿ ನಾನೂ ಈ ಬಗ್ಗೆ ಕೇಳುತ್ತೇನೆ ಎಂದು ಓಲೇಕಾರ ಸವಾಲು ಹಾಕಿದರು.
    ಈ ಹಿಂದಿನ ಅರ್ಹ 300ಕ್ಕೂ ಅಧಿಕ ಫಲಾನುಭವಿಗಳನ್ನು ಪಟ್ಟಿಯಲ್ಲಿ ಇಟ್ಟುಕೊಳ್ಳಲಾಗಿದೆ. ಇನ್ನು ಎರಡ್ಮೂರು ದಿನದೊಳಗಾಗಿ ಅರ್ಹರ ಪಟ್ಟಿಯನ್ನು ನಗರಸಭೆ ನೋಟಿಸ್ ಬೋರ್ಡ್​ನಲ್ಲಿ ಪ್ರಕಟಿಸಲಾಗುವುದು. ಒಂದು ವೇಳೆ ಅದರಲ್ಲಿನ ಯಾವ ಫಲಾನುಭವಿಗಳ ಬಗ್ಗೆಯಾದರೂ ಆಕ್ಷೇಪಣೆ ಬಂದರೆ ಅವರನ್ನು ಕೈಬಿಟ್ಟು ಸೂಕ್ತ ಅರ್ಹರಿಗೆ ಅವಕಾಶ ನೀಡಲಾಗುವುದು ಎಂದರು.
    ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ವಿುಸಿಕೊಂಡಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತರು ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆಶ್ರಯ ಕಮಿಟಿ ವಿಚಾರದಲ್ಲೂ ಪ್ರಾದೇಶಿಕ ಆಯುಕ್ತರು ಸರ್ಕಾರದ ನಡಾವಳಿ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗುವುದು ಎಂದರು.
    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಜಗದೀಶ ಮಲಗೋಡ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಕಳಸೂರ, ಲಲಿತಾ ಗುಂಡೇನಹಳ್ಳಿ ಇತರರಿದ್ದರು.
    ಆಡಿಯೋ ಬಿಡುಗಡೆ
    ಆಶ್ರಯ ಮನೆಗೆ ಹಣ ಪಡೆದು ಆಯ್ಕೆ ಫಲಾನುಭವಿ ಮಾಡಿದ್ದಾರೆ ಎಂಬ ಆರೋಪ ಕುರಿತಂತೆ ನಗರಸಭೆ ಕಾಂಗ್ರೆಸ್ ಮಾಜಿ ಸದಸ್ಯರೊಬ್ಬರು ಫಲಾನುಭವಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಕಾಲ್ ರೆಕಾರ್ಡ್ ಅನ್ನು ಸುದ್ದಿಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ ಬಿಡುಗಡೆಗೊಳಿಸಿದರು.
    ಅದರಲ್ಲಿ ನಗರಸಭೆ ಮಾಜಿ ಸದಸ್ಯರೊಬ್ಬರಿಗೆ ಕರೆ ಮಾಡಿರುವ ವ್ಯಕ್ತಿ, ನಮ್ಮ ಮನೆ ವಿಷಯ ಏನಾತ್ರಿ ಎನ್ನುತ್ತಾರೆ. ಆಗ, ಸದಸ್ಯ, ಶಾಸಕರು ಪಟ್ಟಿ ಬದಲಾಯಿಸಲು ಮುಂದಾಗಿದ್ದಾರೆ. ಅದಕ್ಕೆ ಸ್ಟೇ ತರಲಾಗಿದೆ. ನಿಮಗೆ ಮನೆ ಸಿಗ್ತಾವು ತಡೀರಿ ಎಂದಿದ್ದಾರೆ. ಆಗ ವ್ಯಕ್ತಿ, ಈಗ ನಾವು ಸಂಕಷ್ಟದಲ್ಲಿದ್ದೇವೆ. ನಮ್ಮ ಹಣವನ್ನಾದರೂ ಮರಳಿ ಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ಸದಸ್ಯ, 5 ಸಾವಿರ ಕೊಟ್ಟವರೆ ಹೀಗೆ ಕೇಳಿದರೆ ಹೇಗೆ. 25 ಸಾವಿರ ರೂ. ಕೊಟ್ಟವರೂ ಸುಮ್ಮನಿದ್ದಾರೆ ತಡೀರಿ ಎಂದಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts