More

    ಕೈಗಾರಿಕೆಗಳಿಗೆ ಎದುರಾಗಿದೆ ವಿದ್ಯುತ್ ಸಮಸ್ಯೆ

    ಹುಬ್ಬಳ್ಳಿ: ತಾರಿಹಾಳ ಹಾಗೂ ಗಾಮನಗಟ್ಟಿಯಲ್ಲಿರುವ ಕೈಗಾರಿಕೆಗಳು ನಿಯಮಿತವಾಗಿ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿವೆ. ಲೈನ್‌ಮನ್‌ಗಳ ಕೊರತೆಯಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

    ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶ 1ನೇ ಮತ್ತು 2ನೇ ಹಂತದಲ್ಲಿ 200ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಗಾಮನಗಟ್ಟಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 150ಕ್ಕೂ ಹೆಚ್ಚು ಉದ್ಯಮಗಳಿವೆ. 6 ರಿಂದ 8 ಕಿಲೋ ಮೀಟರ್ ವಿಸ್ತಾರವಾಗಿರುವ ಈ ಪ್ರದೇಶವು ಹೆಸ್ಕಾಂನ ಒಬ್ಬ ಸೆಕ್ಷನ್ ಆಫೀಸರ್ ವ್ಯಾಪ್ತಿಗೆ ಬರುತ್ತದೆ.

    ಇದೀಗ ಮಳೆಗಾಲದಲ್ಲಿ ನಿತ್ಯ ಒಂದಲ್ಲ ಒಂದು ಕಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಸಿಂಗಲ್ ಫೇಸ್ ಸಪ್ಲೈನಲ್ಲಿ ಕೈಗಾರಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ಸಂಜೆ ವೇಳೆ ವಿದ್ಯುತ್ ಸ್ಥಗಿತಗೊಂಡರೆ, ಸಾಕಷ್ಟು ಬಾರಿ ಒತ್ತಾಯ ಮಾಡಿದ ಮೇಲೆ ಮಾರನೇ ದಿನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸ್ಥಳೀಯ ಉದ್ಯಮಿ ಸಂತೋಷ ಕಾಟವೆ ದೂರಿದ್ದಾರೆ.

    ಗಾಳಿ-ಮಳೆಯಿಂದ ವಿದ್ಯುತ್ ತಂತಿ ಮಾರ್ಗದ ಮೇಲೆ ಮರ-ಗಿಡಗಳ ರೆಂಬೆ ಕೊಂಬೆಗಳು ಮುರಿದು ಬೀಳುವುದು ಸಾಮಾನ್ಯ. ಇಷ್ಟು ವಿಶಾಲವಾದ ಪ್ರದೇಶದಲ್ಲಿ ಮೂವರು ಲೈನ್‌ಮನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ತ್ವರಿತವಾಗಿ ಕಾರ್ಯನಿರ್ವಹಿಸಲು ಲೈನ್‌ಮನ್‌ಗಳಿಗೆ ವಾಹನದ ವ್ಯವಸ್ಥೆಯೂ ಇಲ್ಲ. ಪದೇ ಪದೆ ವಿದ್ಯುತ್ ಕಡಿತದಿಂದ ಕೈಗಾರಿಕೆಗಳು ಸಾಕಷ್ಟು ನಷ್ಟವನ್ನು ಎದುರಿಸುವಂತಾಗಿದೆ. ವಿದ್ಯುತ್ ತಂತಿ ಮಾರ್ಗಗಳ ಸೂಕ್ತ ನಿರ್ವಹಣೆಗೆ ಹೆಚ್ಚು ಲೈನ್‌ಮನ್‌ಗಳನ್ನು ನೇಮಿಸಿಕೊಳ್ಳಲು ಹೆಸ್ಕಾಂ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಲೈನ್‌ಮನ್‌ಗಳ ಕೊರತೆ ಇರುವುದು ನಿಜ. ಇದರ ನಡುವೆಯೂ ತಾರಿಹಾಳ ಮತ್ತು ಗಾಮನಗಟ್ಟಿ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts