More

    ಇಂದು ಭಾರತ-ಪಾಕ್ ಕಿರಿಯರ ಸೆಮಿಫೈನಲ್ ಹಣಾಹಣಿ: ಸತತ 3ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿ ಪ್ರಿಯಂ ಗಾರ್ಗ್ ಪಡೆ | ಕುತೂಹಲ ಕೆರಳಿಸಿದ ಕಾದಾಟ

    ಪಾಟ್​ಚೇಫ್​ಸ್ಟ್ರೋಮ್ (ದಕ್ಷಿಣ ಆಫ್ರಿಕಾ): ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ಮಂಗಳವಾರ ಸಾಂಪ್ರದಾಯಿಕ ಎದುರಾಳಿ ಹಾಗೂ 2 ಬಾರಿಯ ಚಾಂಪಿಯನ್ ಪಾಕಿಸ್ತಾನ ತಂಡದ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದೆ. ಸತತ 3ನೇ ಬಾರಿ ಫೈನಲ್​ಗೇರುವ ಹಂಬಲದಲ್ಲಿರುವ ಭಾರತ ತಂಡ ಮತ್ತೊಂದು ಭರ್ಜರಿ ನಿರ್ವಹಣೆ ತೋರಲು ಸಜ್ಜಾಗಿದೆ.

    ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಅಜೇಯವಾಗಿ ಉಪಾಂತ್ಯಕ್ಕೇರಿವೆ. ಭಾರತ ತಂಡ ಕ್ವಾರ್ಟರ್​ಫೈನಲ್​ನಲ್ಲಿ 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿದ್ದರೆ, ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧ ಸುಲಭ ಗೆಲುವು ದಾಖಲಿಸಿತ್ತು.

    ಟೂರ್ನಿಯ ಒಟ್ಟಾರೆ ಇತಿಹಾಸ ಪಾಕ್ ಪರವಿದ್ದರೂ, ಇತ್ತೀಚೆಗಿನ ದಿನಗಳಲ್ಲಿ ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿದ ಇತಿಹಾಸ ಭಾರತದ ಕಿರಿಯರದ್ದಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಫೈನಲ್​ನಲ್ಲಿ ನಡೆದ ಕೊನೆಯ ಮುಖಾಮುಖಿಯಲ್ಲೂ ಭಾರತ ತಂಡ ಗೆಲುವು ದಾಖಲಿಸಿತ್ತು. ಕಳೆದ 2018ರ ಆವೃತ್ತಿಯ ವಿಶ್ವಕಪ್​ನಲ್ಲೂ ಸೆಮಿಫೈನಲ್​ನಲ್ಲಿ ಮುಖಾಮುಖಿ ಆದಾಗ, ಭಾರತ ತಂಡ ಪಾಕಿಸ್ತಾನ ವಿರುದ್ಧ 203 ರನ್​ಗಳ ಭಾರಿ ಅಂತರದಿಂದ ಜಯಿಸಿತ್ತು.

    ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಪ್ರಮುಖ ಆಧಾರಸ್ತಂಭವಾಗಿದ್ದಾರೆ. ನಾಯಕ ಪ್ರಿಯಂ ಗಾರ್ಗ್, ದಿವ್ಯಾಂಶ್ ಸಕ್ಸೇನಾ, ಧ್ರುವ ಜುರೆಲ್ ಅವರಿಂದ ಉತ್ತಮ ಬೆಂಬಲ ಸಿಗಬೇಕಾಗಿದೆ. ಬೌಲಿಂಗ್​ನಲ್ಲೂ ವೇಗಿ ಕಾರ್ತಿಕ್ ತ್ಯಾಗಿ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ತಂಡಕ್ಕೆ ಬಲ ತುಂಬಿದ್ದಾರೆ. ಕರ್ನಾಟಕ ಮೂಲದ ಅಥರ್ವ ಅಂಕೋಲ್ಕರ್ ಆಲ್ರೌಂಡರ್ ನಿರ್ವಹಣೆಯೊಂದಿಗೆ ಗಮನ ಸೆಳೆದಿದ್ದಾರೆ. ಪಾಕಿಸ್ತಾನ ತಂಡ ಕೂಡ ಕೆಲ ಪ್ರತಿಭಾನ್ವಿತ ಆಟಗಾರರಿಂದ ಕೂಡಿದ್ದು, ಪಂದ್ಯ ಕುತೂಹಲ ಕೆರಳಿಸಿದೆ.

    ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರೋಹೈಲ್ ನಜೀರ್ ಸಾರಥ್ಯದ ಪಾಕ್ ತಂಡಕ್ಕೆ ವೇಗಿಗಳಾದ ಅಬ್ಬಾಸ್ ಅಫ್ರಿದಿ, ಮೊಹಮದ್ ಆಮಿರ್ ಖಾನ್ ಮತ್ತು ತಾಹಿರ್ ಹುಸೇನ್ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಮೊಹಮದ್ ಹುರೈರಾ, ಮೊಹಮದ್ ಹ್ಯಾರಿಸ್, ಖಾಸಿಮ್ ಅಕ್ರಮ್ ಗಮನ ಸೆಳೆಯುತ್ತಿದ್ದಾರೆ.

    ಮಳೆ ಭೀತಿ: ಕಿರಿಯರ ವಿಶ್ವಕಪ್​ನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿಯೂ ಇದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದರೆ, ಅದಕ್ಕೆ ಅರ್ಧಗಂಟೆ ಮುನ್ನವೇ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಧ್ಯಾಹ್ನ 3 ಗಂಟೆಯವರೆಗೂ ಮಳೆ ಬರುವ ಸಾಧ್ಯತೆ ಇದೆ.

    ಪಿಚ್ ರಿಪೋರ್ಟ್: ಸೆನ್​ವೆಸ್ ಪಾರ್ಕ್ ಸ್ಪರ್ಧಾತ್ಮಕ ಪಿಚ್ ಹೊಂದಿದ್ದು, ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 230ರ ಗಡಿ ದಾಟುವಲ್ಲಿ ಸಫಲವಾಗಿದೆ. ಇಲ್ಲಿ ಚೇಸಿಂಗ್ ಭಾರಿ ಸವಾಲಾಗಿ ಕಾಡಿದೆ. ಆದರೆ ಮಳೆ ಬರುವ ಸಾಧ್ಯತೆ ಇರುವುದರಿಂದ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಹೊಸ ಚೆಂಡು ಹೆಚ್ಚು ಸ್ವಿಂಗ್ ಆಗುವ ನಿರೀಕ್ಷೆ ಇರುವುದು ಕೂಡ ಬೌಲಿಂಗ್ ಆಯ್ಕೆಗೆ ಪ್ರೇರೇಪಿಸಬಹುದು.

    ಕಿರಿಯರ ವಿಶ್ವಕಪ್​ನಲ್ಲಿ ಉಭಯ ತಂಡಗಳು ಇದುವರೆಗೆ 9 ಬಾರಿ ಮುಖಾಮುಖಿ ಆಗಿದ್ದು, ಪಾಕಿಸ್ತಾನ 5 ಮತ್ತು ಭಾರತ 4ರಲ್ಲಿ ಜಯಿಸಿದೆ. ಕೊನೇ 3 ಮುಖಾಮುಖಿಯಲ್ಲಿ ಭಾರತವೇ ಗೆದ್ದಿದೆ. ಇದು ಭಾರಿ ಒತ್ತಡವಿರುವ ಪಂದ್ಯ. ವಿಶ್ವದೆಲ್ಲೆಡೆ ಪಂದ್ಯದ ಬಗ್ಗೆ ತೀವ್ರ ಕುತೂಹಲವಿದೆ. ನಾವಿದನ್ನು ಸಾಮಾನ್ಯ ಪಂದ್ಯದಂತೆ ಆಡುವೆವು ಮತ್ತು ಉತ್ತಮ ನಿರ್ವಹಣೆ ತೋರಲು ಪ್ರಯತ್ನಿಸುವೆವು.
    | ಮೊಹಮದ್ ಹುರೈರಾ ಪಾಕ್ ಬ್ಯಾಟ್ಸ್​ಮನ್

    -ಪಿಟಿಐ/ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts