More

    ಇಂದಿರಾ ಕ್ಯಾಂಟೀನ್‌ಗೆ ಬೀಳುತ್ತಿದೆ ಆಗಾಗ ಬೀಗ

    ಗುಂಡ್ಲುಪೇಟೆ: ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಪಟ್ಟಣದ ಇಂದಿರಾ ಕ್ಯಾಂಟೀನ್ ಬಾಗಿಲಿಗೆ ಆಗಾಗ ಬೀಗ ಬೀಳುತ್ತಿರುವುದು ಕೂಲಿ ಕಾರ್ಮಿಕರು ಹಾಗೂ ಬಡವರು ಊಟ, ತಿಂಡಿಗಾಗಿ ಪರದಾಡುವಂತಾಗಿದೆ.

    ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಚೇರಿ ಆವರಣದಲ್ಲಿ ಪ್ರಾರಂಭಿಸಿದ್ದ ಕ್ಯಾಂಟೀನ್ ಅಂದಿನಿಂದಲೂ ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳ ಹಸಿವು ನೀಗಿಸುತ್ತಿದೆ. ಕರೊನಾ ಸಂದರ್ಭದಲ್ಲಿ ಎಲ್ಲ ಹೋಟೆಲ್‌ಗಳು ಮುಚ್ಚಿದ್ದರೂ ಇಂದಿರಾ ಕ್ಯಾಂಟೀನ್ ಮಾತ್ರ ತೆರೆದು ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಕಾರ್ಯ ಮುಂದುವರಿಸಿತ್ತು.
    ಕೇವಲ 5 ರೂ.ಗೆ ಮೂರು ಹೊತ್ತು ತಲಾ 300 ಜನರಿಗೆ ಬೆಳಗಿನ ಉಪಾಹಾರ ಮಧ್ಯಾಹ್ನ ಹಾಗೂ ಸಂಜೆ ಊಟ ಸರಬರಾಜು ಮಾಡಲಾಗುತ್ತಿತ್ತು. ಬೆಳಗ್ಗೆ ಪೌರ ಕಾರ್ಮಿಕರು ಇಲ್ಲಿಯೇ ಉಪಾಹಾರ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

    ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಬಡವರ ಹಸಿವು ನೀಗಿಸುತ್ತಿದ್ದ ಕ್ಯಾಂಟೀನ್ ನಿರ್ವಹಣೆ ಪಡೆದ ಗುತ್ತಿಗೆದಾರ ಇದನ್ನು ಹಾಸನ ಮೂಲದ ವ್ಯಕ್ತಿಯೊಬ್ಬರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ 4-5 ಕಾರ್ಮಿಕರಿಗೆ ಕೆಲವು ತಿಂಗಳಿನಿಂದ ಸಂಬಳ ನೀಡದ ಪರಿಣಾಮ ಒಂದು ವಾರ ಕ್ಯಾಂಟೀನ್ ಮುಚ್ಚಿತ್ತು.

    ಈ ಬಗ್ಗೆ ಪುರಸಭೆ ಗುತ್ತಿಗೆ ರದ್ದುಗೊಳಿಸಿ ಬೇರೆಯವರಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದೆ. ಇತ್ತೀಚೆಗೆ ಕ್ಯಾಂಟೀನ್ ಕಾರ್ಯಾರಂಭ ಮಾಡಿದ್ದರೂ ಹಿಂದಿನಂತೆ ನಾನಾ ಬಗೆಯ ಆಹಾರ ನೀಡುವ ಬದಲು ಕೇವಲ ಬಾತ್, ಇಡ್ಲಿಗೆ ಮಾತ್ರ ಸೀಮಿತವಾಗಿದೆ. ಸ್ವಲ್ಪ ತಡವಾದರೂ ಟೋಕನ್ ಕೊಡದೆ ಹಿಂದಕ್ಕೆ ಕಳಿಸುತ್ತಿದ್ದಾರೆ. ಹಿಂದಿನಂತೆ ಗುಣಮಟ್ಟ ನಿರ್ವಹಣೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಡ ಹಾಗೂ ಕಾರ್ಮಿಕ ವರ್ಗದವರ ಹಸಿವು ನೀಗಿಸುತ್ತಿದ್ದ ಕ್ಯಾಂಟೀನ್ ಗುತ್ತಿಗೆ ಪಡೆದವರನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ಬೇರೆಯವರಿಗೆ ಗುತ್ತಿಗೆ ನೀಡುವಂತೆ ಕೋರಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts