More

    ಬಹುತ್ ಬಡಿಯಾ ಎಂದರು ಪ್ರಧಾನಿ ಮೋದಿ!, ಗಣರಾಜ್ಯೋತ್ಸವ ಪರೇಡ್ ಅನುಭವ ಬಿಚ್ಚಿಟ್ಟ ಪಡುಬಿದ್ರಿಯ ರಂಜಿತ್ ಶರ್ಮ

    ಪಡುಬಿದ್ರಿ: ರಾಜ್ಯವನ್ನು ನಂ.1 ಆಗಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರತಿನಿಧಿಸಿದರೂ ಪ್ರತೀ ತರಬೇತಿಗಳು ಕ್ಲಿಷ್ಟವಾಗಿದ್ದವು. ಅಧಿಕಾರಿಗಳು ಶೌಚಗೃಹದಿಂದ ನಾವು ಮಲಗುವ ಬೆಡ್‌ವರೆಗೂ ಅವರ ಪತ್ತೇದಾರಿಕೆ ದೃಷ್ಟಿಯನ್ನಿಟ್ಟಿದ್ದರು ಎಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯವನ್ನು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಪ್ರತಿನಿಧಿಸಿದ್ದ ಉಡುಪಿ ಪಿಪಿಸಿ ಕಾಲೇಜು ವಿದ್ಯಾರ್ಥಿ ಪಡುಬಿದ್ರಿಯ ರಂಜಿತ್ ಪಿ.ಜೆ. ಶರ್ಮ ಅನುಭವ ಹಂಚಿಕೊಂಡರು.

    ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಪಡುಬಿದ್ರಿಯಲ್ಲಿ ಗುರುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಎದುರು ನಾಟ್ಯ ಅಥವಾ ಸಂಗೀತ ಧ್ವನಿಮುದ್ರಣ ಅವಕಾಶ ನನಗಿತ್ತು. ತಾನು ಭರತನಾಟ್ಯ ಪ್ರದರ್ಶಿಸಿ ಪ್ರಧಾನಿ ಅವರಿಂದ ‘ಬಹುತ್ ಬಡಿಯಾ’ ಎಂದು ಹೇಳಿಸಿಕೊಂಡೆ. ಕ್ರೀಡಾ ಸಚಿವ ಕಿರಣ್ ರಿಜಿಜು ಎದುರು ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಸಾದರಪಡಿಸಿದೆ. ಮುಂದಿನ ತಿಂಗಳು ರಾಜ್ಯಪಾಲರ ಚಹಾಕೂಟದಲ್ಲಿ ಭಾಗವಹಿಸಲಿದ್ದೇನೆ. ಈ ವರ್ಷದ ಅಕ್ಟೋಬರ್‌ನಲ್ಲಿ ಪ್ಯಾರಿಸ್ ಕೂಟದಲ್ಲಿ ಭಾಗವಹಿಸಲು ನಡೆಯುವ ಆಯ್ಕೆಯಲ್ಲಿಯೂ ತಾನೂ ಪಾಲ್ಗೊಳ್ಳಲಿರುವುದಾಗಿ ಅವರು ತಿಳಿಸಿದರು.

    ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಪಿ. ಬಿ. ಶುಭ ಹಾರೈಸಿದರು. ಬೆಂಗಳೂರಿನ ಹೋಟೆಲ್ ಉದ್ಯಮಿ ರವೀಂದ್ರ ಆಚಾರ್ಯ ರಂಜಿತ್‌ಗೆ ಶುಭ ಹಾರೈಸಿದರು. ಗ್ರಾಪಂ ನೂತನ ಸದಸ್ಯೆ ಸುಜಾತಾ ಆಚಾರ್ ಅಭಿನಂದನಾ ಭಾಷಣ ಮಾಡಿದರು.

    ತರಂಗಿಣಿ ಮಿತ್ರಮಂಡಳಿ ಅಧ್ಯಕ್ಷ ರಮಾಕಾಂತ ರಾವ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಸಂಸ್ಥೆಯ ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ರಘುಪತಿ ರಾವ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಸುರೇಶ್ ರಾವ್ ಸ್ವಾಗತಿಸಿದರು. ಶ್ರೀಧರ ಆಚಾರ್ಯ ನಿರೂಪಿಸಿದರು. ಚಂದ್ರಶೇಖರ ರಾವ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts