More

    ಕರೊನಾ ಸಮರ್ಥ ನಿರ್ವಹಣೆ: ಸಚಿವ ಕೋಟ ಸಂದೇಶ

    ಮಂಗಳೂರು: ಅನಿರೀಕ್ಷಿತವಾಗಿ ಬಂದೆರಗಿದ ಕರೊನಾ ಮಹಾಮಾರಿ ಆತಂಕ ಉಂಟು ಮಾಡಿದ್ದರೂ, ಸರ್ಕಾರ ಹಾಗೂ ಜಿಲ್ಲಾಡಳಿತ ಅದನ್ನು ಸವಾಲಾಗಿ ಸ್ವೀಕರಿಸಿ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
    ನಗರದ ನೆಹರು ಮೈದಾನದಲ್ಲಿ ಶನಿವಾರ ದ.ಕ ಜಿಲ್ಲಾ ಮಟ್ಟದ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
    ಜನತೆಯ ಆರೋಗ್ಯ ರಕ್ಷಣೆಯಲ್ಲಿ ರಾಜಿ ಮಾಡಿಕೊಳ್ಳದೆ ಉತ್ಕೃಷ್ಟ ಚಿಕಿತ್ಸೆಯನ್ನು ಕರೊನಾ ಸೋಂಕಿತರಿಗೆ ನೀಡಲಾಗುತ್ತಿದೆ. ಆತಂಕದ ನಡುವೆಯೂ ನೆಮ್ಮದಿ ಮೂಡಿಸುವಲ್ಲಿ ಸಫಲರಾಗಿದ್ದೇವೆ. ಲಾಕ್‌ಡೌನ್ ಸಂದರ್ಭದಲ್ಲೂ ನಾನಾ ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ್ದು, ಸಂಕಷ್ಟಕ್ಕೀಡಾದ ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು.

    ಪರೇಡ್ ವೀಕ್ಷಣೆ: ಧ್ವಜಾರೋಹಣಕ್ಕೆ ಮುನ್ನ ಸಚಿವರು ಪರೇಡ್ ದಂಡ ನಾಯಕ ಎಸಿಪಿ ಎಂ.ಎ.ಉಪಾಸೆಯವರ ನೇತೃತ್ವದಲ್ಲಿ ಪರೇಡ್ ವೀಕ್ಷಿಸಿದರು. ಡೊಂಗರಕೇರಿ ಕೆನರಾ ಪ್ರೌಢಶಾಲೆ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆ ಜತೆಗೆ ದೇಶಭಕ್ತಿ ಗೀತೆಗಳನ್ನು ಹಾಡಿದರು.

    ಕರೊನಾ ಸೇನಾನಿಗಳಿಗೆ ಸನ್ಮಾನ: ಕರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಾ, ಸ್ವತಃ ಕರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಮತ್ತೆ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೌರಕಾರ್ಮಿಕರು ಸೇರಿದಂತೆ 20 ಮಂದಿಯನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ಮಚ್ಚಿನ ಮುರಾರ್ಜಿ ದೇಸಾಯಿ ವಸತಿಯುತ ಶಾಲೆಯ ವಿದ್ಯಾರ್ಥಿ ಆಕಾಶ್ ಮಡಿವಾಳ ಹಿರೇಮಠ್ ಅತ್ಯಧಿಕ ಅಂಕ ಗಳಿಸಿರುವುದನ್ನು ಪರಿಗಣಿಸಿ ಸನ್ಮಾನಿಸಲಾಯಿತು.
    ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಪ್ರತಾಪ್‌ಸಿಂಹ ನಾಯಕ್, ಮೇಯರ್ ದಿವಾಕರ ಪಾಂಡೇಶ್ವರ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಪೊಲೀಸ್ ಆಯುಕ್ತ ಡಾ.ವಿಕಾಸ್ ಕುಮಾರ್ ವಿಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಮ್ ಆಮ್ಟೆ ಮತ್ತಿತರರಿದ್ದರು.

    ಮೀನುಗಾರಿಕೆಯಲ್ಲಿ ಪ್ರಥಮ ಗುರಿ: ದೇಶದಲ್ಲಿ ಆರನೇ ಸ್ಥಾನದಲ್ಲಿರುವ ರಾಜ್ಯದ ಮೀನುಗಾರಿಕೆ ಉತ್ಪಾದನೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಆಶಯವಿದೆ. ಈಗಿರುವ ಸ್ಥಿತಿಯಲ್ಲಿ ಕೆರೆ, ನದಿ, ಸರೋವರ ಮತ್ತು ಸಮುದ್ರಗಳಲ್ಲಿ ಮೀನು ಹಿಡಿದು ತರುವುದಷ್ಟೇ ಮೀನುಗಾರಿಕೆಗೆ ಸೀಮಿತವಾಗಿದೆ. ಕೇಂದ್ರ ಸರ್ಕಾರದ ಮತ್ಸೃ ಸಂಪದ ಯೋಜನೆಯಡಿ ಮೀನಿನ ಜಲಕೃಷಿಯನ್ನು ಆರಂಭಿಸುವ ದೂರಗಾಮಿ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ ಎಂದು ಸಚಿವರು ತಿಳಿಸಿದರು. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಹೆದ್ದಾರಿ, ರಸ್ತೆ, ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಹಲವು ದಶಕಗಳ ಬೇಡಿಕೆಯಾಗಿದ್ದ ಗುರುಪುರ ನೂತನ ಸೇತುವೆ ನಿಗದಿತ ಅವಧಿಗೆ ಮೊದಲೇ ಪೂರ್ಣಗೊಳಿಸಲಾಗಿದೆ. ಈಗ ಬಿ.ಸಿ.ರೋಡ್- ಪೂಂಜಾಲಕಟ್ಟೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಹುತೇಕ ಪ್ರಗತಿಯಲ್ಲಿದೆ. ಕಾರ್ಕಳ- ಮೂಡುಬಿದಿರೆ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts