More

    ಸಹಕಾರ ಬಲವರ್ಧನೆಗೆ ಭಾರತ ಪ್ರತಿಪಾದನೆ; ಸಮಕಾಲೀನ ಸವಾಲು ಎದುರಿಸಲು ಮೋದಿ ಕರೆ

    ನವದೆಹಲಿ: ಭಯೋತ್ಪಾದನೆಯಂತಹ ಸಮಕಾಲೀನ ಸವಾಲುಗಳನ್ನು ಎದುರಿಸುವುದು ಮತ್ತು ಪರಸ್ಪರ ಸಹಕಾರ ಆಳಗೊಳಿಸುವ ಜತೆಗೆ ಡಿಜಿಟಲ್ ಅಭಿವೃದ್ಧಿ, ವ್ಯಾಪಾರ-ಆರ್ಥಿಕ ಕ್ಷೇತ್ರಗಳಲ್ಲಿ ಭಾರತ-ಆಸಿಯಾನ್ ಸಹಕಾರವನ್ನು ಬಲಪಡಿಸುವ 12 ಅಂಶಗಳ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ್ದಾರೆ. ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆದ 20ನೇ ಆಸಿಯಾನ್ – ಇಂಡಿಯಾ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

    ಆಸಿಯಾನ್​ನ ಪ್ರಧಾನ ಕಾರ್ಯದರ್ಶಿ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಡಾ. ಕಾವೊ ಕಿಮ್ ಹರ್ನ್ ಕೂಡ ಪಾಲ್ಗೊಂಡಿದ್ದ ಈ ಶೃಂಗಸಭೆಯಲ್ಲಿ ಕಡಲ ಸಹಕಾರ ಮತ್ತು ಆಹಾರ ಭದ್ರತೆ ಕುರಿತ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಸಭೆಯಲ್ಲಿ ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ಹಾದಿಯನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ಮೋದಿ ವ್ಯಾಪಕ ಚರ್ಚೆ ನಡೆಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ಹಂಚಿಕೊಂಡಿದೆ.

    ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆಸಿಯಾನ್ ಮಹತ್ವ ವನ್ನು ಪುನರುಚ್ಚರಿಸಿದ ಪ್ರಧಾನಿ, ಆಸಿಯಾನ್ – ಭಾರತ ಮುಕ್ತ ವ್ಯಾಪಾರ ಒಪ್ಪಂದದ (ಎಐಟಿಜಿಎ) ಪರಿಶೀಲನಾ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಸಂಪರ್ಕ, ಡಿಜಿಟಲ್ ರೂಪಾಂತರ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆ, ಸಮಕಾಲೀನ ಸವಾಲುಗಳನ್ನು ಎದುರಿಸುವುದು, ಜನರಿಂದ ಜನರ ಸಂಪರ್ಕ ಮತ್ತು ಕಾರ್ಯತಂತ್ರದ ಸಹಕಾರ ಗಾಢವಾಗಿಸುವ ಭಾರತ-ಆಸಿಯಾನ್ ಸಹಕಾರಕ್ಕೆ ಪೂರಕವಾದ 12 ಅಂಶಗಳ ಪ್ರಸ್ತಾವವನ್ನು ಪ್ರಧಾನಿ ಮುಂದಿಟ್ಟಿದ್ದಾರೆ.

    ಆಗ್ನೇಯ ಏಷ್ಯಾ-ಭಾರತ-ಪಶ್ಚಿಮ ಏಷ್ಯಾ-ಯುರೋಪ್ ಸಂರ್ಪಸುವ ಬಹು-ಮಾದರಿ ಸಂಪರ್ಕ ಮತ್ತು ಆರ್ಥಿಕ ಕಾರಿಡಾರ್ ಸ್ಥಾಪಿಸಲು ಭಾರತ ಕರೆ ನೀಡಿದ್ದು, ಆಸಿಯಾನ್ ಪಾಲುದಾರರೊಂದಿಗೆ ಭಾರತದ ಡಿಜಿಟಲ್ ಮೂಲಸೌಕರ್ಯಗಳನ್ನು ಹಂಚಿಕೊಳ್ಳಲು ಉದ್ದೇಶಿಸಲಾಗಿದೆ.

    ಚೀನಾಗೆ ಪರೋಕ್ಷ ಸಂದೇಶ

    ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ದೃಷ್ಟಿಯಿಂದ, ಸಭೆಯು ಆಸಿಯಾನ್-ಭಾರತದ ಸಂವಾದ ಸಂಬಂಧಗಳ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿದೆ. ಮಲೇಷ್ಯಾ, ವಿಯೆಟ್ನಾಂ ಮತ್ತು ಫಿಲಿಪೈನ್ಸ್​ನಂತಹ ಹಲವಾರು ಆಸಿಯಾನ್ ಸದಸ್ಯ ರಾಷ್ಟ್ರಗಳು ಸ್ಟಾ್ಯಂಡರ್ಡ್ ಮ್ಯಾಪ್ ಆಫ್ ಚೀನಾದ ಇತ್ತೀಚಿನ ಆವೃತ್ತಿಯಲ್ಲಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಪ್ರಾದೇಶಿಕ ಹಕ್ಕಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕೆಲ ದಿನಗಳ ನಂತರ ಪ್ರಧಾನಿ ಮೋದಿಯವರ ಈ ಪ್ರಸ್ತಾಪ ಬಂದಿದೆ. ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ಚೀನಾದ ಪ್ರದೇಶಗಳೆಂದು ತೋರಿಸುವ ಚೀನಾದ ಹೊಸ ನಕ್ಷೆಯನ್ನು ಭಾರತವೂ ತಿರಸ್ಕರಿಸಿದೆ

    ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಲಿಟರಿ ಸಕ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು ಪ್ರತಿಯೊಬ್ಬರ ಬದ್ಧತೆ ಜತೆ ಜಂಟಿ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು. ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಷಣ ಮಾಡಿದ ಅವರು, ದಕ್ಷಿಣ ಚೀನಾ ಸಮುದ್ರದ ನೀತಿ ಸಂಹಿತೆ ಪರಿಣಾಮಕಾರಿಯಾಗಿರಬೇಕು ಮತ್ತು ಯುಎನ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀಗೆ ಅನುಗುಣವಾಗಿರಬೇಕು ಎಂದು ಭಾರತ ನಂಬಿದೆ. ಇಂಡೋ- ಪೆಸಿಫಿಕ್​ನಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯ ಬಗ್ಗೆ ಈ ಪ್ರದೇಶದ ಎಲ್ಲಾ ದೇಶಗಳು ಆಸಕ್ತಿ ಹೊಂದಿವೆ ಎಂದು ಹೇಳಿದರು.

    g 20 summit delhi

    ಪೂರ್ವ ಏಷ್ಯಾ ಶೃಂಗಸಭೆಯು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಪ್ರಧಾನ ವೇದಿಕೆಯಾಗಿದೆ. 2005ರಲ್ಲಿ ಪ್ರಾರಂಭವಾದಾಗಿನಿಂದ, ಪೂರ್ವ ಏಷ್ಯಾದ ಕಾರ್ಯತಂತ್ರದ, ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ವಿಕಾಸದಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ಆಸಿಯಾನ್ ಸದಸ್ಯ ರಾಷ್ಟ್ರಗಳಲ್ಲದೆ, ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾರತ, ಚೀನಾ, ಜಪಾನ್, ರಿಪಬ್ಲಿಕ್ ಆಫ್ ಕೋರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ ಮತ್ತು ರಷ್ಯಾ ಸೇರಿವೆ. ‘ನಾನು ಮೊದಲೇ ಹೇಳಿದಂತೆ ಇದು ಯುದ್ಧ ಮಾಡುವ ಯುಗವಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಏಕೈಕ ಮಾರ್ಗವಾಗಿದೆ’ ಎಂದು ಮೋದಿ ಪುನರುಚ್ಚರಿದ್ದಾರೆ.

    ಜನೌಷಧಿ ಅನುಭವ ಹಂಚಿಕೆ

    ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಲಿರುವ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರಕ್ಕೆ ಸೇರಲು ಆಸಿಯಾನ್ ದೇಶಗಳನ್ನು ಮೋದಿ ಆಹ್ವಾನಿಸಿದ್ದು, ಪರಿಸರ ರಕ್ಷಣೆಗೆ ವೈಯಕ್ತಿಕ ಮತ್ತು ಸಮುದಾಯಗಳನ್ನು ಪ್ರೇರೇಪಿಸಲು ಭಾರತ-ನೇತೃತ್ವದ ಜಾಗತಿಕ ಸಾಮೂಹಿಕ ಚಳವಳಿಯಾದ ಮಿಷನ್ ಲೈಫ್​ನಲ್ಲಿ ಒಟ್ಟಾಗಿ ಕೆಲಸ ಮಾಡಲು ಸಲಹೆ ನೀಡಿದ್ದಾರೆ. ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸುವಲ್ಲಿ ಭಾರತದ ಅನುಭವವನ್ನು ಹಂಚಿಕೊಳ್ಳುವುದಾಗಿ ಪಿಎಂ ಹೇಳಿದ್ದಾರೆ.

    ದೆಹಲಿ ಈಗ ಮಧುವಣಗಿತ್ತಿ!

    ಭಾರತದಲ್ಲಿ ನಡೆಯುತ್ತಿರುವ ಮೊದಲ ಜಿ-20 ಸಭೆ ಇದಾಗಿದ್ದು, ಸ್ವಚ್ಛತೆ, ಚಿತ್ತಾಕರ್ಷಕ ಪೋಸ್ಟರ್, ವಿನ್ಯಾಸ, ಗೋಡೆ ಬರಹಗಳು ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು ದೆಹಲಿಯಾದ್ಯಂತ ಕಣ್ಮನ ಸೆಳೆಯುತ್ತಿವೆ. ದೆಹಲಿ ವಿಮಾನ ನಿಲ್ದಾಣದಿಂದ ಹಿಡಿದು ಭಾರತ್ ಮಂಟಪದವರೆಗಿನ ರಸ್ತೆಗಳನ್ನು ಮಧುವಣಗಿತ್ತಿಯಂತೆ ವಿನ್ಯಾಸಗೊಳಿಸಲಾಗಿದ್ದು, ದೆಹಲಿಯ ಚಹರೆ ಸಂಪೂರ್ಣ ಬದಲಾಗಿದೆ. 30ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು, ಐರೋಪ್ಯ ಒಕ್ಕೂಟ ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳ ಉನ್ನತಾಧಿಕಾರಿಗಳು, 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವ ಈ ಬಹುದೊಡ್ಡ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆ ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts