More

    1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶ್‌ಪಾಲ್ ಶರ್ಮ ಇನ್ನಿಲ್ಲ

    ನವದೆಹಲಿ: ಭಾರತೀಯ ಕ್ರಿಕೆಟ್ ದೆಸೆಯನ್ನೇ ಬದಲಿಸಿದ 1983ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಯಶ್‌ಪಾಲ್ ಶರ್ಮ (66 ವರ್ಷ) ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಮಧ್ಯಮ ಕ್ರಮಾಂಕದ ಬಿರುಸಿನ ಬ್ಯಾಟ್ಸ್‌ಮನ್ ಆಗಿದ್ದ ಯಶ್‌ಪಾಲ್, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮಂಗಳವಾರ ಬೆಳಗಿನ ವಾಕಿಂಗ್‌ನಿಂದ ವಾಪಸಾದ ಯಶ್‌ಪಾಲ್, ಮನೆಯಲ್ಲೇ ಕುಸಿದು ಬಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. 37 ಟೆಸ್ಟ್‌ಗಳಿಂದ 1,606 ರನ್ ಪೇರಿಸಿದ್ದ ಯಶ್‌ಪಾಲ್, 42 ಏಕದಿನ ಪಂದ್ಯಗಳಿಂದ 883 ರನ್ ಗಳಿಸಿದ್ದರು. 1983ರ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧದ ಸೆಮಿೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡ ಪ್ರಶಸ್ತಿ ಸುತ್ತಿಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯಶ್‌ಪಾಲ್ ಈ ಪಂದ್ಯದಲ್ಲಿ ಎದುರಿಸಿದ 115 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಒಳಗೊಂಡಂತೆ 61 ರನ್ ಪೇರಿಸಿದ್ದರು. ಲೀಗ್ ಹಂತದಲ್ಲಿ ವಿಂಡೀಸ್ (89) ಮತ್ತು ಆಸೀಸ್ (40) ವಿರುದ್ಧದ ಗೆಲುವಿನಲ್ಲೂ ಅವರು ಗರಿಷ್ಠ ಸ್ಕೋರರ್ ಆಗಿದ್ದರು.

    ಇದನ್ನೂ ಓದಿ:20ನೇ ಗ್ರಾಂಡ್ ಸ್ಲಾಂ ಗೆದ್ದ ನೊವಾಕ್ ಜೋಕೊವಿಕ್,

    ಬಹುಮುಖ ಪ್ರತಿಭೆ ಯಶ್‌ಪಾಲ್
    ಯಶ್‌ಪಾಲ್ ಶರ್ಮ ಕೇವಲ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರಲ್ಲ. ಆಯ್ಕೆ ಸಮಿತಿ ಸದಸ್ಯನಾಗಿ, ಅಂಪೈರ್, ಕೋಚ್, ವೀಕ್ಷಕವಿವರಣೆಕಾರ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಪಂಜಾಬ್, ಹರಿಯಾಣ ಹಾಗೂ ರೈಲ್ವೇಸ್ ತಂಡಗಳನ್ನು ಪ್ರತಿನಿಧಿಸಿದ್ದ ಯಶ್‌ಪಾಲ್, 160 ಪಂದ್ಯಗಳಿಂದ 21 ಶತಕ ಸೇರಿದಂತೆ 8,933 ರನ್ ಗಳಿಸಿದ್ದರು. ಅಜೇಯ 201 ರನ್ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು. ಮಹಿಳಾ ಏಕದಿನ ಕ್ರಿಕೆಟ್‌ನ 2 ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿರುವ ಯಶ್‌ಪಾಲ್, ಉತ್ತರ ಪ್ರದೇಶ ರಣಜಿ ತಂಡಕ್ಕೆ ಕೋಚ್ ಆಗಿದ್ದರು. 2004ರಿಂದ 2005 ಹಾಗೂ 2008ರಿಂದ 2011ರವರೆಗೆ 2 ಅವಧಿಗೆ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿದ್ದರು. 2011ರ ಏಕದಿನ ವಿಶ್ವಕಪ್ ವಿಜೇತ ಎಂಎಸ್ ಧೋನಿ ಬಳಗವನ್ನು ಆರಿಸಿದ ಆಯ್ಕೆ ಸಮಿತಿಯಲ್ಲಿದ್ದರು. ಅದಕ್ಕೆ ಮುನ್ನ 2004ರಲ್ಲಿ ಧೋನಿಯನ್ನು ಮೊದಲ ಬಾರಿ ಭಾರತ ತಂಡಕ್ಕೆ ಆರಿಸಿದ ಸಮಿತಿಯಲ್ಲೂ ಇದ್ದರು.

    ಇದನ್ನೂ ಓದಿ: ಟಿ20ಯಲ್ಲಿ ದ್ವಿಶತಕ ಸಿಡಿಸಿದ ದೆಹಲಿ ಬ್ಯಾಟ್ಸ್‌ಮನ್

    ಯಶ್‌ಪಾಲ್ ಕ್ರಿಕೆಟ್ ಸಾಧನೆ
    ಟೆಸ್ಟ್: 37, ಇನಿಂಗ್ಸ್: 59, ರನ್: 1606, ಶತಕ: 2, ಅರ್ಧಶತಕ: 9
    ಏಕದಿನ: 42, ಇನಿಂಗ್ಸ್: 40, ರನ್: 883, ಅರ್ಧಶತಕ: 4
    ಪ್ರಥಮ ದರ್ಜೆ: 160, ರನ್: 8933, ಶತಕ: 21, ಅರ್ಧಶತಕ: 46
    ಲಿಸ್ಟ್ ಎ: 74, ಇನಿಂಗ್ಸ್: 70, ರನ್: 1859, ಅರ್ಧಶತಕ: 12

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts