More

    ಭಾರತಕ್ಕೆ ಸಾವಿರ ಒನ್‌ಡೇ ಸಂಭ್ರಮ, ವಿಂಡೀಸ್ ವಿರುದ್ಧದ ಮೊದಲ ಏಕದಿನದಲ್ಲಿ ಮೈಲಿಗಲ್ಲು

    ಬೆಂಗಳೂರು: ಭಾರತ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ೆಬ್ರವರಿ 6ರಿಂದ ಆಡಲಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ಹೊಸ ಇತಿಹಾಸವನ್ನು ರಚಿಸಲಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸಾವಿರ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಐತಿಹಾಸಿಕ ಸಾವಿರನೇ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

    1974ರ ಜುಲೈ 13ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಭಾರತ ತಂಡ 48 ವರ್ಷಗಳ ಬಳಿಕ ಸಾವಿರ ಪಂದ್ಯ ಆಡಿದ ಮೊದಲ ತಂಡ ಎನಿಸುತ್ತಿದೆ. 958 ಏಕದಿನ ಪಂದ್ಯವಾಡಿರುವ ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿದೆ. ಪಾಕಿಸ್ತಾನ (936), ಶ್ರೀಲಂಕಾ (870), ವೆಸ್ಟ್ ಇಂಡೀಸ್ (834), ನ್ಯೂಜಿಲೆಂಡ್ (775) ಮತ್ತು ಇಂಗ್ಲೆಂಡ್ (761) 700ಕ್ಕೂ ಅಧಿಕ ಪಂದ್ಯವಾಡಿರುವ ಇತರ ತಂಡಗಳು.

    ಭಾರತದ ಮೈಲಿಗಲ್ಲಿನ ಪಂದ್ಯದಲ್ಲಿ ನಾಯಕತ್ವ ವಹಿಸುವ ವಿಶೇಷ ಅವಕಾಶ ರೋಹಿತ್ ಶರ್ಮ ಅವರಿಗೆ ಒಲಿಯುತ್ತಿದೆ. ಈ ಮೂಲಕ ಅವರು ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕರಾಗಿ ಹೊಸ ಅಧ್ಯಾಯವನ್ನೂ ಆರಂಭಿಸಲಿದ್ದಾರೆ.

    2 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ
    ಈ ಸಾವಿರ ಏಕದಿನ ಪಂದ್ಯಗಳ ಹಾದಿಯಲ್ಲಿ ಭಾರತ 2 ವಿಶ್ವಕಪ್‌ಗಳನ್ನು ಒಲಿಸಿಕೊಂಡಿದೆ. 1983 ಮತ್ತು 2011ರಲ್ಲಿ ಭಾರತ ಏಕದಿನ ಕ್ರಿಕೆಟ್ ವಿಶ್ವ ಚಾಂಪಿಯನ್ ಪಟ್ಟವೇರಿತ್ತು. ಇನ್ನು ಮಿನಿ ವಿಶ್ವಕಪ್ ಖ್ಯಾತಿಯ ಐಸಿಸಿ ಏಕದಿನ ಟೂರ್ನಿಯಾದ ಚಾಂಪಿಯನ್ಸ್ ಟ್ರೋಫಿಯಲ್ಲೂ (2002ರಲ್ಲಿ ಜಂಟಿ, 2013) 2 ಬಾರಿ ಪ್ರಶಸ್ತಿ ಜಯಿಸಿದೆ.

    1974ರಲ್ಲಿ ಮೊದಲ ಪಂದ್ಯ
    1971ರಲ್ಲೇ ಏಕದಿನ ಕ್ರಿಕೆಟ್ ಜನ್ಮತಾಳಿದ್ದರೂ, ಭಾರತ ತಂಡ ಚೊಚ್ಚಲ ಏಕದಿನ ಪಂದ್ಯವಾಡಿದ್ದು 1974ರಲ್ಲಿ. ಜುಲೈ 13ರಂದು ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಆ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋತಿತ್ತು. ತಲಾ 55 ಓವರ್‌ಗಳ ಆ ಪಂದ್ಯದಲ್ಲಿ ಭಾರತ 53.5 ಓವರ್‌ಗಳಲ್ಲಿ 265 ರನ್‌ಗೆ ಆಲೌಟ್ ಆಗಿದ್ದರೆ, ಇಂಗ್ಲೆಂಡ್ 51.1 ಓವರ್‌ಗಳಲ್ಲಿ 6 ವಿಕೆಟ್‌ಗೆ 266 ರನ್ ಗಳಿಸಿ ಜಯಿಸಿತ್ತು. ಬ್ರಿಜೇಶ್ ಪಟೇಲ್ 82 ರನ್ ಗಳಿಸಿ ಮಿಂಚಿದ್ದರು. ಜಿಆರ್ ವಿಶ್ವನಾಥ್ (4) ಆ ಪಂದ್ಯದಲ್ಲಿ ಆಡಿದ್ದ ಮತ್ತೋರ್ವ ಕನ್ನಡಿಗ. ಅದು ಏಕದಿನ ಕ್ರಿಕೆಟ್ ಇತಿಹಾಸದ ಕೇವಲ 12ನೇ ಪಂದ್ಯವಾಗಿತ್ತು.

    ಏಕದಿನದಲ್ಲಿ ಭಾರತ
    ಪಂದ್ಯ: 999
    ಜಯ: 518
    ಸೋಲು: 431
    ಟೈ: 9
    ರದ್ದು: 41
    ಜಯದ ಸರಾಸರಿ: 54.54%

    200-800: ದಿಗ್ಗಜ ಸಚಿನ್ ತೆಂಡುಲ್ಕರ್ ಭಾರತ ತಂಡ ಆಡಿದ 200, 300, 400, 500, 600, 700 ಮತ್ತು 800ನೇ ಪಂದ್ಯಗಳಲ್ಲಿ ಆಡಿದ್ದರು ಎಂಬುದು ವಿಶೇಷ.

    26 ನಾಯಕರು, 242 ಆಟಗಾರರು
    ಈ ಸಾವಿರ ಏಕದಿನ ಪಂದ್ಯಗಳ ಹಾದಿಯಲ್ಲಿ ಭಾರತ ತಂಡವನ್ನು ಇದುವರೆಗೆ 26 ನಾಯಕರು ಮುನ್ನಡೆಸಿದ್ದಾರೆ. ಇತ್ತೀಚೆಗಿನ ವೆಂಕಟೇಶ್ ಅಯ್ಯರ್‌ವರೆಗೆ 242 ಆಟಗಾರರು ಭಾರತ ಪರ ಏಕದಿನ ಪಂದ್ಯ ಆಡಿದ್ದಾರೆ. ಎಂಎಸ್ ಧೋನಿ ಗರಿಷ್ಠ 200 ಪಂದ್ಯಗಳಲ್ಲಿ ಮುನ್ನಡೆಸಿ, ಗರಿಷ್ಠ 110 ಗೆಲುವು ಕಂಡಿದ್ದರೆ, ಸಚಿನ್ ತೆಂಡುಲ್ಕರ್ ಗರಿಷ್ಠ 463 ಪಂದ್ಯ ಆಡಿದ್ದಾರೆ. 23 ಆಟಗಾರರು ಇದುವರೆಗೆ ಭಾರತ ಪರ ಕೇವಲ 1 ಏಕದಿನವನ್ನಷ್ಟೇ ಆಡಿದ್ದಾರೆ.

    418 ಗರಿಷ್ಠ, 54 ಕನಿಷ್ಠ ಮೊತ್ತ
    2011ರಲ್ಲಿ ವಿಂಡೀಸ್ ವಿರುದ್ಧ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗೆ 418 ರನ್ ಗಳಿಸಿದ್ದು ಭಾರತದ ಗರಿಷ್ಠ ಮೊತ್ತವಾಗಿದೆ. ಒಟ್ಟು 5 ಬಾರಿ ಭಾರತ 400 ಪ್ಲಸ್ ಮೊತ್ತ ಪೇರಿಸಿದೆ. 2000ದಲ್ಲಿ ಶ್ರೀಲಂಕಾ ವಿರುದ್ಧ ಶಾರ್ಜಾದಲ್ಲಿ 26.3 ಓವರ್‌ಗಳಲ್ಲೇ 54 ರನ್‌ಗೆ ಆಲೌಟ್ ಆಗಿದ್ದು ಭಾರತದ ಕನಿಷ್ಠ ಮೊತ್ತ. ಒಟ್ಟು 7 ಬಾರಿ ಭಾರತ 100ರೊಳಗೆ ಆಲೌಟ್ ಆಗಿದೆ.

    ಸಚಿನ್, ಕುಂಬ್ಳೆ ರನ್-ವಿಕೆಟ್ ಸಾಧಕರು
    ಸಚಿನ್ ತೆಂಡುಲ್ಕರ್ 463 ಏಕದಿನಗಳಲ್ಲಿ 18,426 ರನ್ ಗಳಿಸಿದ್ದು, ಭಾರತ ಪರ ಗರಿಷ್ಠ ಮಾತ್ರವಲ್ಲದೆ ವಿಶ್ವದಾಖಲೆಯೂ ಆಗಿದೆ. ಇದರಲ್ಲಿ ಗರಿಷ್ಠ 49 ಶತಕ ಮತ್ತು 96 ಅರ್ಧಶತಕಗಳು ಸೇರಿವೆ. ಅನಿಲ್ ಕುಂಬ್ಳೆ 269 ಏಕದಿನಗಳಲ್ಲಿ 334 ವಿಕೆಟ್ ಕಬಳಿಸಿದ್ದು, ಭಾರತ ಪರ ಗರಿಷ್ಠ ವಿಕೆಟ್ ಸಾಧನೆಯಾಗಿದೆ.

    ರೋಹಿತ್ 3 ದ್ವಿಶತಕ ಸಾಧನೆ
    ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಇದುವರೆಗೆ ಒಟ್ಟು 5 ದ್ವಿಶತಕಗಳು ಸಿಡಿದಿವೆ. ಈ ಪೈಕಿ ಮೂರನ್ನು ರೋಹಿತ್ ಶರ್ಮ ಅವರೊಬ್ಬರೇ ಬಾರಿಸಿದ್ದಾರೆ. 2014ರಲ್ಲಿ ರೋಹಿತ್ ಕೋಲ್ಕತದಲ್ಲಿ ಲಂಕಾ ವಿರುದ್ಧ 264 ರನ್ ಸಿಡಿಸಿದ್ದು ಭಾರತ ಪರ ಗರಿಷ್ಠವಲ್ಲದೆ, ವಿಶ್ವದಾಖಲೆ ಗಳಿಕೆಯೂ ಆಗಿದೆ. ಸಚಿನ್ ತೆಂಡುಲ್ಕರ್ (200) ಮತ್ತು ವೀರೇಂದ್ರ ಸೆಹ್ವಾಗ್ (219) ಭಾರತದ ಮತ್ತಿಬ್ಬರು ದ್ವಿಶತಕ ಸಾಧಕರು.

    10 ಬೌಲರ್‌ಗಳಿಗೆ 6 ವಿಕೆಟ್ ಗೊಂಚಲು
    ಭಾರತ ಪರ ಇದುವರೆಗೆ 10 ಬೌಲರ್‌ಗಳು ಇನಿಂಗ್ಸ್ ಒಂದರಲ್ಲಿ ಗರಿಷ್ಠ 6 ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ ಆಶಿಶ್ ನೆಹ್ರಾ ಈ ಸಾಧನೆಯನ್ನು 2 ಬಾರಿ ಮಾಡಿದ್ದಾರೆ. ಕನ್ನಡಿಗ ಸ್ಟುವರ್ಟ್ ಬಿನ್ನಿ 2014ರಲ್ಲಿ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ 4.4 ಓವರ್‌ಗಳಲ್ಲಿ 2 ಮೇಡನ್ ಸಹಿತ 4 ರನ್‌ಗೆ 6 ವಿಕೆಟ್ ಕಬಳಿಸಿದ್ದು ಭಾರತ ಪರ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ಎನಿಸಿದೆ.

    ಧೋನಿ, ಅಜರ್ ಬೆಸ್ಟ್ ಕೀಪರ್, ಫೀಲ್ಡರ್
    ಭಾರತ ಪರ 347 ಏಕದಿನಗಳಲ್ಲಿ 318 ಕ್ಯಾಚ್, 120 ಸ್ಟಂಪಿಂಗ್ ಸಹಿತ 438 ಬಲಿ ಪಡೆದಿರುವ ಎಂಎಸ್ ಧೋನಿ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿದ್ದರೆ, ಮೊಹಮದ್ ಅಜರುದ್ದೀನ್ 334 ಏಕದಿನಗಳಲ್ಲಿ 156 ಕ್ಯಾಚ್ ಹಿಡಿದು ಅತ್ಯುತ್ತಮ ಫೀಲ್ಡರ್ ಎನಿಸಿದ್ದಾರೆ.

    ದೊಡ್ಡ-ಸಣ್ಣ ಗೆಲುವುಗಳು
    2007ರಲ್ಲಿ ಬರ್ಮುಡಾ ವಿರುದ್ಧ 257 ರನ್‌ಗಳಿಂದ ಜಯಿಸಿದ್ದು ಭಾರತದ ಬೃಹತ್ ಗೆಲುವೆನಿಸಿದೆ. 6 ಬಾರಿ 10 ವಿಕೆಟ್‌ಗಳಿಂದ ಜಯಿಸಿದೆ. ಇನ್ನು ಭಾರತ 4 ಬಾರಿ ಕನಿಷ್ಠ 1 ರನ್ ಮತ್ತು 3 ಬಾರಿ ಕನಿಷ್ಠ 1 ವಿಕೆಟ್‌ಗಳಿಂದ ಜಯಿಸಿದೆ. 2001ರಲ್ಲಿ ಕೀನ್ಯಾ ವಿರುದ್ಧ 91 ರನ್ ಸವಾಲನ್ನು 11.3 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿ ಗರಿಷ್ಠ 231 ಎಸೆತ ಉಳಿಸಿ ಗೆದ್ದಿತ್ತು.

    *518: ಭಾರತ ಇದುವರೆಗೆ 518 ಜಯ ಕಂಡಿದ್ದರೂ, ಏಕದಿನದಲ್ಲಿ ಗರಿಷ್ಠ ಗೆಲುವು ಕಂಡ ದಾಖಲೆ ಆಸ್ಟ್ರೇಲಿಯಾ (581) ತಂಡದ್ದಾಗಿದೆ. ಭಾರತ 2ನೇ ಸ್ಥಾನದಲ್ಲಿದೆ.

    *431: ಭಾರತ ಇದುವರೆಗೆ 431 ಪಂದ್ಯ ಸೋತಿದ್ದು, ಏಕದಿನದಲ್ಲಿ ಶ್ರೀಲಂಕಾ (432) ನಂತರ ಗರಿಷ್ಠ ಸೋಲು ಕಂಡಿದೆ.

    ಆಸ್ಟ್ರೇಲಿಯನ್ ಓಪನ್ ಗೆದ್ದ ನಡಾಲ್; ಸ್ಪೇನ್ ದಿಗ್ಗಜನಿಗೆ 21ನೇ ಗ್ರಾಂಡ್ ಸ್ಲಾಂ ಕಿರೀಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts