More

     ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ, ವಿಹಾರಿ ವಾಪಸ್,  ಕುಲದೀಪ್, ನವದೀಪ್ ಸೈನಿಗೆ ಕೊಕ್

    ನವದೆಹಲಿ: ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಬ್ಯಾಟ್ಸ್‌ಮನ್ ಹನುಮ ವಿಹಾರಿ ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ಎದುರು ನಡೆಯಲಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ (ಡಬ್ಲ್ಯುಟಿಸಿ) ಭಾರತ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಡಬ್ಲ್ಯುಟಿಸಿ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಶುಕ್ರವಾರ 20 ಸದಸ್ಯರ ಭಾರತ ತಂಡ ಪ್ರಕಟಿಸಲಾಯಿತು. ಐಪಿಎಲ್ ಆರಂಭಕ್ಕೂ ಮುನ್ನ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಯಾವುದೇ ಅಚ್ಚರಿ ಆಯ್ಕೆಗೆ ಮಣೆ ಹಾಕಿಲ್ಲ. ನಿರೀಕ್ಷೆಯಂತೆಯೇ ಕನ್ನಡಿಗ ಪ್ರಸಿದ್ಧ ಕೃಷ್ಣ ತಂಡದ ಮೀಸಲು ಆಟಗಾರರನಾಗಿ ಸ್ಥಾನ ಪಡೆದಿದ್ದಾರೆ. 20 ಸದಸ್ಯರ ತಂಡದ ಜತೆಗೆ 4 ಮೀಸಲು ಆಟಗಾರರನ್ನು ಪ್ರಕಟಿಸಲಾಗಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿ ವೇಳೆ ಜಡೇಜಾ ಹಾಗೂ ವಿಹಾರಿ ಗಾಯಗೊಂಡು ತವರಿಗೆ ವಾಪಸಾಗಿದ್ದರು. ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ವೇಗಿ ನವದೀಪ್ ಸೈನಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಇದಕ್ಕೂ ಮೊದಲು 30 ಸದಸ್ಯರ ತಂಡ ಪ್ರಕಟಿಸಲಾಗುವುದು ಎಂದು ಹೇಳಲಾಗಿತ್ತು.

    ಕಳೆದ ಐಪಿಎಲ್‌ನಲ್ಲಿ ಬೌಲಿಂಗ್ ಮಾಡದಿರುವ ಮತ್ತು ಬ್ಯಾಟಿಂಗ್‌ನಲ್ಲೂ ಲಯ ಕಳೆದುಕೊಂಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಆರಂಭಿಕ ಪೃಥ್ವಿ ಷಾಗೆ ಆಯ್ಕೆ ಸಮಿತಿ ಮಣೆ ಹಾಕಿಲ್ಲ. ಮೇ 30ರಂದು ಐಪಿಎಲ್ ಫೈನಲ್ ನಡೆದ ಬಳಿಕ ಜೂನ್ 2ರಂದು ಭಾರತ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸುವುದು ಬಿಸಿಸಿಐನ ಈ ಹಿಂದಿನ ಯೋಜನೆಯಾಗಿತ್ತು. ಆದರೆ ಇದೀಗ ಐಪಿಎಲ್ ಸ್ಥಗಿತಗೊಂಡಿರುವುದರಿಂದ, ಭಾರತ ತಂಡ ಬೇಗನೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.

    * ಫಿಟ್ ಆದರಷ್ಟೇ ರಾಹುಲ್, ಸಾಹಗೆ ಸ್ಥಾನ
    ಅಪೆಂಡಿಸೈಟಿಸ್‌ನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕೋವಿಡ್-19 ಸೋಂಕಿಗೆ ಒಳಗಾಗಿರುವ ವೃದ್ಧಿಮಾನ್ ಸಾಹ ಪೂರ್ಣ ಪ್ರಮಾಣದಲ್ಲಿ ಫಿಟ್ ಆದರಷ್ಟೇ ತಂಡದೊಂದಿಗೆ ತೆರಳಲಿದ್ದಾರೆ. ಐಪಿಎಲ್ ಮಧ್ಯದಲ್ಲಿಯೇ ಹೊಟ್ಟೆ ನೋವಿನಿಂದಾಗಿ ಕಡೇ ಪಂದ್ಯದಿಂದ ಹೊರಗುಳಿದಿದ್ದ ರಾಹುಲ್, ಮುಂಬೈಗೆ ಆಗಮಿಸಿ ಶಸಚಿಕಿತ್ಸೆಗೆ ಒಳಗಾಗಿದ್ದರು. ವಾರದೊಳಗೆ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಪಂಜಾಬ್ ತಂಡಕ್ಕೆ ತಿಳಿಸಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಆಡಿದ್ದ ವೃದ್ಧಿಮಾನ್ ಸಾಹಗೆ ಮೇ 4 ರಂದು ಕರೊನಾ ಸೋಂಕು ಕಾಣಿಸಿಕೊಂಡಿತ್ತು. ತವರು ಕೋಲ್ಕತಗೆ ತೆರಳದೆ ದೆಹಲಿಯಲ್ಲೇ 14 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಲಿದ್ದಾರೆ.

    * ಕುಲದೀಪ್, ಸೈನಿಗೆ ಕೊಕ್
    ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಲರಾಗಿದ್ದಾರೆ. ಇದುವರೆಗೂ ಆಡಿರುವ 7 ಟೆಸ್ಟ್ ಪಂದ್ಯಗಳ ಪೈಕಿ, ಕಡೇ 2 ವರ್ಷದಲ್ಲಿ ಏಕೈಕ ಪಂದ್ಯವಾಡಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ಎದುರಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಇದಕ್ಕೂ ಮೊದಲು 2019ರ ಜನವರಿಯಲ್ಲಿ ಕಡೇ ಬಾರಿಗೆ ಆಡಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಅಕ್ಷರ್ ಪಟೇಲ್, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜತೆ ಸ್ಥಾನ ಹಂಚಿಕೊಂಡಿದ್ದಾರೆ.

     ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ, ವಿಹಾರಿ ವಾಪಸ್,  ಕುಲದೀಪ್, ನವದೀಪ್ ಸೈನಿಗೆ ಕೊಕ್ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮ, ಶುಭಮಾನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್ (ವಿಕೀ), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮದ್ ಶಮಿ, ಮೊಹಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.
    ಕೆಎಲ್ ರಾಹುಲ್ ಹಾಗೂ ವೃದ್ಧಿಮಾನ್ ಸಾಹ (ಇಬ್ಬರೂ ಫಿಟ್ ಆದರೆ)
    * ಮೀಸಲು ಆಟಗಾರರು: ಅಭಿಮನ್ಯು ಈಶ್ವರನ್, ಪ್ರಸಿದ್ಧ ಕೃಷ್ಣ, ಅವೇಶ್ ಖಾನ್, ಅರ್ಜಾನ್ ನಾಗ್ವಾಸ್ವಾಲಾ

    * ಯಾವಾಗ ಪಂದ್ಯ
    ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯವೂ ಜೂನ್ 18 ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ. ಈ ಫೈನಲ್ ಪಂದ್ಯದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವೆ ಆಗಸ್ಟ್ 4 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ನಾಟ್ಟಿಂಗ್‌ಹ್ಯಾಂನಲ್ಲಿ ಮೊದಲ ಟೆಸ್ಟ್ ನಡೆದರೆ, ಲಾರ್ಡ್ಸ್ (ಆ.12-16), ಲೀಡ್ಸ್ (ಆ.25-29), ದ ಓವೆಲ್ (ಸೆ.2 -6) ಹಾಗೂ ಮ್ಯಾಂಚೆಸ್ಟರ್‌ನಲ್ಲಿ (ಸೆ.10-14) ಪಂದ್ಯಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts