More

    ಲಾಕ್‌ಡೌನ್ ನಡುವೆಯೂ ವಿವಾಹಕ್ಕೆ ಸಜ್ಜಾದ ಕ್ರೀಡಾತಾರೆಯರು!

    ರಾಂಚಿ: ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಒಲಿಂಪಿಯನ್ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಲಾಕ್‌ಡೌನ್ ನಡುವೆಯೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪೂರ್ವನಿಗದಿಯಂತೆಯೇ ಜೂನ್ 30ರಂದು ವಿವಾಹವಾಗುತ್ತಿರುವುದಾಗಿ ದೀಪಿಕಾ-ಅತನು ಜೋಡಿ ತಿಳಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ವಿವಾಹದಲ್ಲಿ ಗರಿಷ್ಠ 50 ಮಂದಿ ಮಾತ್ರ ಪಾಲ್ಗೊಳ್ಳಲಿದ್ದು, ಆಯ್ದ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

    ಇದನ್ನೂ ಓದಿ:

    ಲಾಕ್‌ಡೌನ್ ನಡುವೆಯೂ ವಿವಾಹಕ್ಕೆ ಸಜ್ಜಾದ ಕ್ರೀಡಾತಾರೆಯರು!

    ಕರೊನಾ ಹಾವಳಿಯ ನಡುವೆಯೂ ವಿವಾಹ ಸಮಾರಂಭ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ 28 ವರ್ಷದ ಅತನು ದಾಸ್, ಎರಡು ವರ್ಷಗಳ ಹಿಂದೆಯೇ ನಮ್ಮ ನಿಶ್ಚಿತಾರ್ಥ ನಡೆದಿದೆ. ಹೀಗಾಗಿ ವಿವಾಹವನ್ನು ಇನ್ನಷ್ಟು ಮುಂದೂಡುವುದು ಬೇಡ ಎಂದು ನಿರ್ಧರಿಸಿದ್ದೇವೆ ಎಂದಿದ್ದಾರೆ. ವಿವಾಹವನ್ನು ಮುಂದೂಡುವಂತೆ ಅವರಿಗೆ ಸಂಬಂಧಿಕರಿಂದ ಒತ್ತಡಗಳೂ ಬಂದಿದ್ದವಂತೆ. ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗುವುದು. ಅತಿಥಿಗಳೆಲ್ಲರೂ ಪ್ರತಿ ಅರ್ಧಗಂಟೆಗೊಮ್ಮೆ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಧು-ವರರೂ ಮಾಸ್ಕ್ ಧರಿಸುತ್ತೇವೆ. ಆದರೆ ಫೋಟೋ ತೆಗೆದುಕೊಳ್ಳುವ ಸಮಯ ಬಂದಾಗ ಮಾಸ್ಕ್ ಸರಿಸುತ್ತೇವೆ ಎಂದು ಅತನು ದಾಸ್ ನಗುತ್ತ ಹೇಳಿದ್ದಾರೆ.

    ಕಳೆದ ವರ್ಷವೇ ವಿವಾಹವಾಗಬೇಕಿತ್ತು

    ಲಾಕ್‌ಡೌನ್ ನಡುವೆಯೂ ವಿವಾಹಕ್ಕೆ ಸಜ್ಜಾದ ಕ್ರೀಡಾತಾರೆಯರು!

    2018ರ ಡಿಸೆಂಬರ್‌ನಲ್ಲಿ ರಾಂಚಿಯಲ್ಲಿ ದೀಪಿಕಾ-ಅತನು ನಿಶ್ಚಿತಾರ್ಥ ನಡೆದಿತ್ತು ಮತ್ತು 2019ರಲ್ಲೇ ವಿವಾಹವಾಗುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ 26 ವರ್ಷದ ದೀಪಿಕಾ ಅವರನ್ನೊಳಗೊಂಡ ಆರ್ಚರಿ ತಂಡ ಅಷ್ಟರೊಳಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಲು ವಿಲವಾಗಿತ್ತು. ಹೀಗಾಗಿ ಒಲಿಂಪಿಕ್ಸ್ ಅರ್ಹತೆಯತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ ವಿವಾಹವನ್ನು 2020ಕ್ಕೆ ಮುಂದೂಡಲಾಗಿತ್ತು. ಆಗಿನ ಯೋಜನೆಯ ಪ್ರಕಾರ, ಟೋಕಿಯೊ ಒಲಿಂಪಿಕ್ಸ್ ಮುಗಿದ ಬೆನ್ನಲ್ಲೇ ಆಗಸ್ಟ್‌ನಲ್ಲಿ ವಿವಾಹವಾಗಲು ನಿರ್ಧರಿಸಲಾಗಿತ್ತು. ಆದರೆ ಒಲಿಂಪಿಕ್ಸ್ ಮುಂದೂಡಿಕೆಯಿಂದಾಗಿ ಜೂನ್ ಅಂತ್ಯಕ್ಕೆ ವಿವಾಹ ನಿಗದಿಪಡಿಸಲಾಗಿತ್ತು. ನವೆಂಬರ್‌ನಲ್ಲೂ ವಿವಾಹಕ್ಕೆ ಮುಹೂರ್ತವಿದ್ದರೂ, ಆ ವೇಳೆಗೆ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುವ ನಿರೀಕ್ಷೆ ಇರುವುದರಿಂದಾಗಿ ಜೂನ್‌ನಲ್ಲೇ ವಿವಾಹ ಮುಗಿಸಿಬಿಡಲು ನಿರ್ಧರಿಸಲಾಗಿದೆ.

    ಮಾಜಿ ವಿಶ್ವ ನಂ. 1 ಹಾಗೂ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ವಿಜೇತೆಯಾಗಿರುವ ಜಾರ್ಖಂಡ್‌ನ ಆಟೋ ಚಾಲಕನ ಪುತ್ರಿ ದೀಪಿಕಾ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು. ವಿಶ್ವಕಪ್ ಫೈನಲ್ಸ್‌ನಲ್ಲಿ ಅವರು 3 ಬೆಳ್ಳಿ ಮತ್ತು 1 ಕಂಚಿನ ಪದಕದ ಒಡತಿಯೂ ಆಗಿದ್ದಾರೆ. ಕೋಲ್ಕತ ಮೂಲದ ಅತನು 17ನೇ ರ‌್ಯಾಂಕ್ ಹೊಂದಿದ್ದಾರೆ. ಪುರುಷರ ರಿಕರ್ವ್ ತಂಡ ವಿಭಾಗದಲ್ಲಿ ಮಿಂಚಿದ್ದು, ಕಳೆದ ವರ್ಷವೇ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.

    ದೀಪಿಕಾ ಡಿಂಪಲ್‌ಗೆ ಅತನು ಬೋಲ್ಡ್!

    ಲಾಕ್‌ಡೌನ್ ನಡುವೆಯೂ ವಿವಾಹಕ್ಕೆ ಸಜ್ಜಾದ ಕ್ರೀಡಾತಾರೆಯರು!

    ದೀಪಿಕಾ-ಅತನು ಕೆಲ ವರ್ಷಗಳ ಹಿಂದೆ ಕೋಲ್ಕತದ ಸಾಯ್ ಕೇಂದ್ರದ ರಾಷ್ಟ್ರೀಯ ಶಿಬಿರದಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಆಪ್ತರಾದ ಅವರ ಸ್ನೇಹ ಕೆಲ ಸಮಯದಲ್ಲೇ ಪ್ರೀತಿಗೆ ತಿರುಗಿತ್ತು. 2017ರಲ್ಲಿ ಇಬ್ಬರೂ ತಮ್ಮ ಪ್ರೀತಿಯನ್ನು ಹೆತ್ತವರಿಗೆ ತಿಳಿಸಿ ಅವರಿಂದ ಒಪ್ಪಿಗೆ ಪಡೆದಿದ್ದರು. ‘ಇಬ್ಬರಿಗೂ ಆರ್ಚರಿ ಮೊದಲ ಲವ್ ಆಗಿದ್ದ ಕಾರಣ ಸಹಜವಾಗಿ ಪರಸ್ಪರ ಅರ್ಥಮಾಡಿಕೊಳ್ಳಲು ಸುಲಭವಾಯಿತು’ ಎಂದಿರುವ ಅತನು, ದೀಪಿಕಾ ಸರಳತೆ ಮೆಚ್ಚಿದ್ದೇನೆ ಮತ್ತು ಆಕೆಯ ಕೆನ್ನೆಗುಳಿ ಇಷ್ಟಪಟ್ಟಿದ್ದೇನೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts