More

    ಭಾರತ ಮಹಿಳೆಯರಿಗೆ ಕಂಚಿನ ಪದಕ, ಜಪಾನ್‌ಗೆ ಏಷ್ಯಾಕಪ್ ಕಿರೀಟ

    ಮಸ್ಕತ್: ಭಾರತ ತಂಡ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಚೀನಾ ತಂಡವನ್ನು 2-0 ಗೋಲುಗಳಿಂದ ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು. ಕಳೆದ ಆವೃತ್ತಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದ್ದ ಭಾರತ ತಂಡ, ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ಮುಗ್ಗರಿಸುವ ಮೂಲಕ ಪ್ರಶಸ್ತಿ ಆಸೆ ಕೈಚೆಲ್ಲಿತ್ತು. ಇದೀಗ ಟೂರ್ನಿಯಲ್ಲಿ ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡಿತು. ಮೊದಲಾರ್ಧದಲ್ಲೇ 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಭಾರತ ತಂಡ, ಎರಡನೇ ಅವಧಿಯಾಟದಲ್ಲಿ ಗೋಲು ದಾಖಲಿಸಿ ಗೆಲುವಿನ ಅಂತರ ಹಿಗ್ಗಿಸಿಕೊಳ್ಳಲು ಶಕ್ತವಾಗಲಿಲ್ಲ.

    13ನೇ ನಿಮಿಷದಲ್ಲಿ ಶರ್ಮಿಳಾ ದೇವಿ, ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 1-0 ಮುನ್ನಡೆ ತಂದರು. ಎರಡನೇ ಕ್ವಾರ್ಟರ್‌ನಲ್ಲಿ ಅನುಭವಿ ಆಟಗಾರ್ತಿ ಗುರ್ಜಿತ್ ಕೌರ್ (19ನೇ ನಿಮಿಷ) ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿ ತಂಡದ ಗೋಲಿನ ಅಂತರ ಹಿಗ್ಗಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರ ಅಬ್ಬರಕ್ಕೆ ಚೀನಾ ಆಟಗಾರ್ತಿಯರು ಬ್ರೇಕ್ ಹಾಕಿದರು. ಕಡೇ ಹಂತದಲ್ಲಿ ಚೀನಾ ತಂಡಕ್ಕೆ ಕೇವಲ 2 ನಿಮಿಷಗಳ ಅಂತರದಲ್ಲಿ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ದಕ್ಕಿದರೂ ಭಾರತದ ಆಟಗಾರ್ತಿಯರು ತಡೆಗೋಡೆಯಾದರು. ಬುಧವಾರ ನಡೆದ ಸೆಮಿಫೈನಲ್ ಹೋರಾಟದಲ್ಲಿ ಭಾರತ ತಂಡ 2-3ರಿಂದ ಕೊರಿಯಾ ತಂಡಕ್ಕೆ ಶರಣಾಗಿತ್ತು.

    ಬಳಿಕ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜಪಾನ್ ತಂಡ 4-2 ರಿಂದ ಕೊರಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts