More

    ಭಯೋತ್ಪಾದಕರ ಎದೆಯಲ್ಲಿ ನಡುಕ! ಓಡಿ ಹೋದ ಉಗ್ರರನ್ನು ಸೆದೆಬಡಿಯಲು ಪಾಕಿಸ್ತಾನಕ್ಕೆ ನುಗ್ಗಲಿದೆ ಭಾರತ

    ನವದೆಹಲಿ: ದೇಶದಲ್ಲಿ ಭಯೋತ್ಪಾದಕ ಚಟುವಟಿಗಳನ್ನು ನಡೆಸಲು ಪ್ರಯತ್ನಿಸಿದ ಬಳಿಕ ಗಡಿ ದಾಟಿ ಓಡಿ ಹೋಗುವ ಉಗ್ರರನ್ನು ಸೆದೆಬಡಿಯಲು ಭಾರತ, ಪಾಕಿಸ್ತಾನದ ಒಳಗೆ ನುಗ್ಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಶುಕ್ರವಾರ (ಏಪ್ರಿಲ್​ 05) ಹೇಳಿದ್ದಾರೆ.

    ವಿದೇಶಿ ನೆಲದಲ್ಲಿ ವಾಸಿಸುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಯೋಜನೆಯ ಭಾಗವಾಗಿ 2020 ರಿಂದ ಪಾಕಿಸ್ತಾನದಲ್ಲಿ ಭಾರತ ಸರ್ಕಾರ 20 ಉಗ್ರರನ್ನು ಕೊಂದಿದೆ ಎಂದು ಬ್ರಿಟನ್‌ನ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ರಾಜನಾಥ್​ ಸಿಂಗ್​ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

    ಗಾರ್ಡಿಯನ್​ ಪತ್ರಿಕೆ ಮಾಡಿರುವ ವರದಿಯ ಕುರಿತು ಪ್ರತಿಕ್ರಿಯೆಗಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ಮಾಡಿದ ಮನವಿಗೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಲಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದೆ. ಇದೇ ವರದಿಯ ಬಗ್ಗೆ ಸುದ್ದಿ ಮಾಧ್ಯಮವೊಂದು ರಾಜನಾಥ್​ ಸಿಂಗ್​ರನ್ನು ಪ್ರಶ್ನೆ ಮಾಡಿದಾಗ, ಪಾಕಿಸ್ತಾನಕ್ಕೆ ಓಡಿ ಹೋದರೆ, ನಾವು ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಸೆದೆಬಡಿಯುತ್ತೇವೆ ಎಂದು ಹೇಳಿದ್ದಾರೆ.

    ಭಾರತವು ಸದಾ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತದೆ. ಆದರೆ, ಯಾರಾದರೂ ಭಾರತದ ಮೇಲೆ ಕೋಪದ ಕಣ್ಣುಗಳನ್ನು ಬೀರಿದರೆ, ಭಾರತಕ್ಕೆ ಬಂದು ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದರೆ, ನಾವು ಅವರನ್ನು ಬಿಡುವುದಿಲ್ಲ ಎಂದು ರಾಜನಾಥ್​ ಸಿಂಗ್​ ಎಚ್ಚರಿಕೆ ನೀಡಿದರು.

    ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಬೆಂಗಾವಲು ಪಡೆಯ ಮೇಲೆ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ತೀವ್ರ ಹದಗೆಟ್ಟಿದೆ. ಈ ವೇಳೆ ಪಾಕಿಸ್ತಾನದ ಭಯೋತ್ಪಾದಕ ನೆಲೆಯ ಒಳಗೆ ನುಗ್ಗಿ ಭಾರತವು ವೈಮಾನಿಕ ದಾಳಿ ನಡೆಸಿತ್ತು.

    ತನ್ನ ನೆಲದಲ್ಲಿ ತನ್ನಿಬ್ಬರು ನಾಗರಿಕರ ಹತ್ಯೆಗೂ ಭಾರತೀಯ ಏಜೆಂಟರಿಗೂ ಸಂಬಂಧವಿದೆ. ಇದಕ್ಕೆ ಸಂಬಂಧಿಸಿದ ಪುರಾವೆಗಳಿವೆ ಎಂದು ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಹೇಳಿತು. ಆದರೆ, ಭಾರತ ಇದನ್ನು ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಎಂದು ತಳ್ಳಿಹಾಕಿತು.

    ಭಾರತವು ಖಲಿಸ್ತಾನಿ ಭಯೋತ್ಪಾದಕರನ್ನು ಕೊಂದಿದೆ ಅಥವಾ ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಕೆನಡಾ ಮತ್ತು ಯುಎಸ್ ಆರೋಪಿಸಿದ ತಿಂಗಳುಗಳ ನಂತರ ಗಾರ್ಡಿಯನ್‌ನಲ್ಲಿ ವರದಿ ಬಂದಿದೆ. ಕಳೆದ ವರ್ಷ ಜೂನ್‌ನಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ ಸಿಖ್ ಪ್ರತ್ಯೇಕತಾವಾದಿ ನಾಯಕನ ಸಾವಿಗೆ ಭಾರತವೇ ಕಾರಣ ಎಂಬ ಆರೋಪವನ್ನು ಕೆನಡಾ ಸೆಪ್ಟೆಂಬರ್​ ತಿಂಗಳಲ್ಲಿ ಮಾಡಿದೆ. ಆದರೆ, ಭಾರತವು ಈ ಆರೋಪವನ್ನು “ಅಸಂಬದ್ಧ ಮತ್ತು ಪ್ರೇರಿತ” ಎಂದು ಹೇಳಿ ತಿರಸ್ಕರಿಸಿತು.

    ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲುವ ಭಾರತದ ಸಂಚನ್ನು ವಿಫಲಗೊಳಿಸಿದೆವು ಎಂದು ಕಳೆದ ನವೆಂಬರ್‌ನಲ್ಲಿ ಅಮೆರಿಕ ಸಹ ಹೇಳಿತು ಮತ್ತು ಹತ್ಯೆಯ ಯತ್ನವನ್ನು ಸಂಘಟಿಸಲು ಭಾರತದೊಂದಿಗೆ ಕೆಲಸ ಮಾಡಿದೆ ಎಂದು ಹೇಳಿಕೊಂಡ ವ್ಯಕ್ತಿಯ ವಿರುದ್ಧ ಆರೋಪಗಳನ್ನು ಘೋಷಿಸಿತು. ಈ ವಿಷಯಗಳ ಬಗ್ಗೆ ಭಾರತವು ಯಾವುದೇ ಮಾಹಿತಿಯನ್ನು ಪಡೆದರೂ ತನಿಖೆ ನಡೆಸುತ್ತದೆ ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. (ಏಜೆನ್ಸೀಸ್​)

    ಶಶಾಂಕ್​ ಹರಾಜು ವಿವಾದ: ಕೊನೆಗೂ ಮೌನ ಮುರಿದು ಭಾವುಕ ಮಾತುಗಳನ್ನಾಡಿದ ಪ್ರೀತಿ ಝಿಂಟಾ!

    ನಟಿ ರಮ್ಯಾ ಕೃಷ್ಣರನ್ನು ಪೋರ್ನ್​ ಸ್ಟಾರ್​ ಆಗಿ ತೋರಿಸಿದ ಚಿತ್ರವಿದು! ಒಟಿಟಿಯಲ್ಲಿ ಬಹಳ ಸದ್ದು ಮಾಡಿತ್ತು ಈ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts