More

    ಕಿವೀಸ್​ಗೆ ಮತ್ತೆ ವಕ್ಕರಿಸಿದ ಸೂಪರ್​ ಓವರ್​ ಭೂತ: ಸುಲಭ ಗೆಲುವಿನ ಪಂದ್ಯವನ್ನು ಕೈಚೆಲ್ಲಿದ ನ್ಯೂಜಿಲೆಂಡ್​

    ವೆಲ್ಲಿಂಗ್ಟನ್​: ಸ್ಕೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಕೊಲಿನ್​ ಮನ್ರೋ(64) ಮತ್ತು ಟಿಮ್​ ಸೈಫರ್ಟ್​(57) ಅವರ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಇತರೆ ಆಟಗಾರರ ಅಸಮರ್ಪಕ ನಿರ್ವಹಣೆಯಿಂದ ಆತಿಥೇಯ ನ್ಯೂಜಿಲೆಂಡ್​, ಪ್ರವಾಸಿ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಎರಡನೇ ಬಾರಿಗೆ ಸೂಪರ್​ ಓವರ್​ ಎದುರಿಸಿ, ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿತು. ಈ ಮೂಲಕ ಟೀಮ್​ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದಿಂದ ಸರಣಿ ವೈಟ್​ವಾಷ್​ ಕಡೆ ಹೆಜ್ಜೆಹಾಕಿದೆ.

    ಟೀಮ್​ ಇಂಡಿಯಾ ನೀಡಿದ 166 ರನ್​ಗಳ ಗುರಿ ಬೆನ್ನತ್ತಿದ ಕಿವೀಸ್​ ಪಡೆ ಆರಂಭದಲ್ಲೇ ಮಾರ್ಟಿನ್​ ಗುಪ್ಟಿಲ್​(4) ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬಳಿಕ ಕೊಲಿನ್​ ಮನ್ರೋ ಜತೆಗೂಡಿದ ಟಿಮ್​ ಸೈಫರ್ಟ್​ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು. ಈ ವೇಳೆ 47 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​ ನೆರವಿನಿಂದ 64 ರನ್​ ಗಳಿಸಿದ್ದ ಮನ್ರೋ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಟಾಮ್​ ಬ್ರೂಷ್​ ಯಾವುದೇ ರನ್​ ಖಾತೆ ತೆರೆಯದೇ ಬಂದಷ್ಟೇ ವೇಗವಾಗಿ ಪೆವಲಿಯನ್​ ಸೇರಿದರು.

    ಇತ್ತ ಉತ್ತಮ ಆಟವಾಡುತ್ತಿದ್ದ ಟೀಮ್​ ಸೈಫರ್ಟ್​ 57 ರನ್​ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ರನೌಟ್​ ಆದರು. ಇದರ ಬೆನ್ನಲ್ಲೇ ರಾಸ್​ ಟೇಲರ್​​(24), ಡರೈಲ್​ ಮಿಚೆಲ್​(4) ಹಾಗೂ ಮಿಚೆಲ್​ ಸ್ಯಾಂಟ್ನರ್​(2) ರನ್​ ಗಳಿಸಿ ಔಟಾದರೆ, ಸ್ಕಾಟ್​ ಕುಗ್ಗಿಲಿಜಿನ್​ ರನ್​ ಖಾತೆ ತೆರೆಯದೇ ಅಜೇಯರಾಗಿ ಉಳಿದರು.

    ಅಂತಿಮವಾಗಿ ನ್ಯೂಜಿಲೆಂಡ್​ ಪಡೆ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 165 ರನ್​ ಕಲೆಹಾಕಿ ಭಾರತ ಕಲೆಹಾಕಿದ್ದ ಮೊತ್ತದ ಸಮಕ್ಕೆ ಬಂದು ನಿಂತಿತು. ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಬಳಿಕ ನಡೆದ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್​ ಮಾಡಿದ ಕಿವೀಸ್​ ಒಂದು ವಿಕೆಟ್​ ನಷ್ಟಕ್ಕೆ 14 ರನ್​ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಭಾರತ ಒಂದು ವಿಕೆಟ್​ ನಷ್ಟಕ್ಕೆ ಸುಲಭವಾಗಿ ಪಂದ್ಯವನ್ನು ಗೆದ್ದು ಬೀಗಿತು. ಈ ಹಿಂದಿನ ಮೂರನೇ ಪಂದ್ಯದಲ್ಲೂ ಸೂಪರ್​ ಓವರ್​ನಲ್ಲಿ ಕಿವೀಸ್​ ಪಡೆ ಸೋತು ಸರಣಿಯನ್ನು ಕೈಚೆಲ್ಲಿತು.

    ಟೀಮ್​ ಇಂಡಿಯಾ ಪರ ಜಸ್ಪ್ರಿತ್​ ಬೂಮ್ರಾ ಮತ್ತು ಯಜುವೇಂದ್ರ ಚಹಾಲ್​ ತಲಾ ಒಂದೊಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts