More

    ಇಂದು ವಿಂಡೀಸ್ ವಿರುದ್ಧ ಅಂತಿಮ ಏಕದಿನ, ಕ್ಲೀನ್‌ಸ್ವೀಪ್ ತವಕದಲ್ಲಿ ಭಾರತ

    ಅಹಮದಾಬಾದ್: ರೋಹಿತ್ ಶರ್ಮ ಪೂರ್ಣಪ್ರಮಾಣದಲ್ಲಿ ಏಕದಿನ ತಂಡದ ಸಾರಥ್ಯ ವಹಿಸಿಕೊಂಡ ಬೆನ್ನಲ್ಲೇ ಸತತ 2 ಸುಲಭ ಜಯ ದಾಖಲಿಸಿ ಸರಣಿ ವಶಪಡಿಸಿಕೊಂಡಿರುವ ಭಾರತ, ಇದೀಗ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧನೆಯ ಹಂಬಲದಲ್ಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಭಾರತ ತಂಡ, ಕರೊನಾದಿಂದ ಚೇತರಿಸಿಕೊಂಡಿರುವ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ ಲಭ್ಯತೆಯ ಬಲವನ್ನೂ ಹೊಂದಿದೆ. ಕಳೆದ 20 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿ ಗೆಲ್ಲದ ನಿರಾಸೆ ಮುಂದುವರಿದಿರುವ ನಡುವೆ ವಿಂಡೀಸ್ ತಂಡ ವೈಟ್‌ವಾಷ್ ಮುಖಭಂಗ ತಪ್ಪಿಸಲು ಹೋರಾಡಲಿದೆ.

    ಮೊದಲ ಪಂದ್ಯದಲ್ಲಿ ಸರಾಗವಾಗಿ ಚೇಸಿಂಗ್ ಮಾಡಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿಯೂ ಅಮೋಘ ಬೌಲಿಂಗ್ ದಾಳಿಯಿಂದ ಅದನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಎರಡೂ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ದಿಢೀರ್ ಕುಸಿತವೊಂದೇ ಕಳವಳಕಾರಿಯಾಗಿತ್ತು. ಧವನ್ ಪುನರಾಗಮನದಿಂದ ಅದು ದೂರವಾಗುವ ನಿರೀಕ್ಷೆ ಇದೆ. ಮೊದಲೆರಡು ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸಿದ್ದ ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ನಿರೀಕ್ಷಿತ ನಿರ್ವಹಣೆ ತೋರಿರಲಿಲ್ಲ. ಪಂತ್ ಇನಿಂಗ್ಸ್ ಆರಂಭಿಸಿದ್ದು 2023ರ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ನಡೆಸಿದ ಪ್ರಯೋಗ ಮಾತ್ರ, ಕಾಯಂ ಆರಂಭಿಕರಾಗಿ ಮುಂದುವರಿಯುವುದಿಲ್ಲ ಎಂದು ನಾಯಕ ರೋಹಿತ್ ಶರ್ಮ ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಇದರ ಜತೆಯಲ್ಲೇ ಕನ್ನಡಿಗ ಕೆಎಲ್ ರಾಹುಲ್ ಏಕದಿನ ತಂಡದಲ್ಲಿನ್ನು ಮಧ್ಯಮ ಕ್ರಮಾಂಕದಲ್ಲೇ ಆಡಲಿದ್ದಾರೆ ಎಂಬುದು ಕೂಡ ಸ್ಪಷ್ಟವಾಗಿದೆ.

    ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಅವರಂಥ ಅನುಭವಿಗಳ ಗೈರಿನಲ್ಲಿ ದೊರೆತ ಅವಕಾಶವನ್ನು ಕನ್ನಡಿಗ ಪ್ರಸಿದ್ಧಕೃಷ್ಣ ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಕೂಡ ಅವರಿಗೆ ಸಮರ್ಥ ಸಾಥ್ ನೀಡಿದ್ದರೆ, ಸ್ಪಿನ್ ವಿಭಾಗದಲ್ಲಿ ಚಾಹಲ್-ವಾಷಿಂಗ್ಟನ್ ಜೋಡಿ ಗಮನಸೆಳೆದಿದೆ. ಮೊದಲೆರಡೂ ಪಂದ್ಯಗಳಲ್ಲಿ ಕ್ರಮವಾಗಿ 176 ಮತ್ತು 193 ರನ್‌ಗೆ ವಿಂಡೀಸ್ ತಂಡವನ್ನು ನಿಯಂತ್ರಿಸಿರುವುದು, ಅನುಭವಿ ವೇಗಿಗಳ ಗೈರಿನಲ್ಲಿ ಸದೃಢ ನಿರ್ವಹಣೆಯಾಗಿದೆ.

    ರೋಹಿತ್ ಶರ್ಮ ಅವರ ನಾಯಕತ್ವ ಶೈಲಿಗೆ ಈಗಾಗಲೆ ಮೆಚ್ಚುಗೆಗಳು ಬರಲಾರಂಭಿಸಿದ್ದು, 2 ಪಂದ್ಯಗಳಲ್ಲಿ ಡಿಆರ್‌ಎಸ್ ಮೂಲಕ 4 ಔಟ್ ತೀರ್ಪುಗಳನ್ನು ಪಡೆದಿರುವ ಅವರ ಜಾಣ್ಮೆಯ ನಿರ್ಧಾರಗಳೂ ಗಮನಸೆಳೆದಿವೆ. ದಿಗ್ಗಜ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ 2023ರ ತವರಿನ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಪ್ರಕ್ರಿಯೆ ಈಗಾಗಲೆ ಶುಭಾರಂಭ ಕಂಡಂತಿದೆ.

    ನೀಗುವುದೇ ಕೊಹ್ಲಿ ಶತಕದ ಬರ?
    ಮೊದಲೆರಡೂ ಪಂದ್ಯಗಳಲ್ಲಿ 20ರ ಗಡಿ ದಾಟದಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೊನೇ ಪಂದ್ಯದಲ್ಲಾದರೂ 71ನೇ ಅಂತಾರಾಷ್ಟ್ರೀಯ ಶತಕದ ಕೊರತೆ ನೀಗಿಸುವರೇ ಎಂಬ ಕುತೂಹಲವಿದೆ. 2019ರ ಆಗಸ್ಟ್‌ನಲ್ಲಿ ಪೋರ್ಟ್ ಆ್ ಸ್ಪೇನ್‌ನಲ್ಲಿ ವಿಂಡೀಸ್ ವಿರುದ್ಧವೇ ಅವರ ಕೊನೇ ಏಕದಿನ ಶತಕ ದಾಖಲಾಗಿತ್ತು. ಅನಂತರದ 20 ಏಕದಿನ ಇನಿಂಗ್ಸ್‌ಗಳಲ್ಲಿ 2 ಬಾರಿ 89 ರನ್ ಗಳಿಸಿದ್ದೇ ಗರಿಷ್ಠವಾಗಿದೆ. ಆದರೆ ಈ 20 ಇನಿಂಗ್ಸ್‌ಗಳಲ್ಲಿ 10 ಬಾರಿ ಅವರು 50 ಪ್ಲಸ್ ರನ್ ಗಳಿಸಿದ್ದಾರೆ ಎಂಬುದು ಗಮನಾರ್ಹ. ಹೀಗಾಗಿ ಶೀಘ್ರದಲ್ಲೇ ಶತಕವೊಂದು ದಾಖಲಾಗುವ ನಿರೀಕ್ಷೆ ಇದೆ.

    ಟೀಮ್ ನ್ಯೂಸ್:

    ಭಾರತ: ಶಿಖರ್ ಧವನ್ ಮರಳಲಿರುವುದರಿಂದ ಮತ್ತೊಮ್ಮೆ ಎಡಗೈ-ಬಲಗೈ ಆರಂಭಿಕ ಜೋಡಿಯೇ ಮುಂದುವರಿಯಲಿದೆ. ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಧವನ್‌ಗೆ ದೀಪಕ್ ಹೂಡಾ ಸ್ಥಾನ ಬಿಟ್ಟುಕೊಡಬಹುದು. ಶ್ರೇಯಸ್ ಅಯ್ಯರ್ ಕೂಡ ಕರೊನಾದಿಂದ ಗುಣಮುಖರಾಗಿದ್ದರೂ, ಕಣಕ್ಕಿಳಿಯುವುದು ಅನುಮಾನ. ಸ್ಪಿನ್ ವಿಭಾಗದಲ್ಲಿ ಚಾಹಲ್ ಅಥವಾ ವಾಷಿಂಗ್ಟನ್‌ಗೆ ವಿಶ್ರಾಂತಿ ನೀಡಿದರೆ ಕುಲದೀಪ್ ಯಾದವ್ ಅಥವಾ ರವಿ ಬಿಷ್ಣೋಯಿ ಆಡಬಹುದು. ಮೊಹಮದ್ ಸಿರಾಜ್ ಬದಲಿಗೆ ಯುವ ವೇಗಿ ಆವೇಶ್ ಖಾನ್ ಆಡುವ ಸಾಧ್ಯತೆ ಇದೆ.

    ವೆಸ್ಟ್ ಇಂಡೀಸ್: ಗಾಯದ ಸಮಸ್ಯೆಯಿಂದಾಗಿ 2ನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೈರಾನ್ ಪೊಲ್ಲಾರ್ಡ್ ಅಂತಿಮ ಪಂದ್ಯಕ್ಕೆ ಲಭ್ಯರಿರುವರೇ ಎಂಬುದನ್ನು ವಿಂಡೀಸ್ ತಂಡ ಸ್ಪಷ್ಟಪಡಿಸಿಲ್ಲ. ಬ್ಯಾಟಿಂಗ್ ವಿಭಾಗವೇ ತಂಡದ ದೊಡ್ಡ ತಲೆನೋವಾಗಿದೆ. ಬೌಲರ್‌ಗಳು ಸಂಘಟಿತವಾಗಿ ಉತ್ತಮ ನಿರ್ವಹಣೆ ತೋರಿರುವುದರಿಂದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ.

    *ಆರಂಭ: ಮಧ್ಯಾಹ್ನ 1.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    *11: ಕಳೆದ 17 ಏಕದಿನ ಪಂದ್ಯಗಳಲ್ಲಿ ವಿಂಡೀಸ್ ತಂಡ 11 ಬಾರಿ 50 ಓವರ್ ಪೂರ್ತಿ ಆಡಲು ವಿಫಲವಾಗಿದೆ.

    ಕರೊನಾ ಗೆದ್ದ ಋತುರಾಜ್
    ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕರೊನಾದಿಂದ ಗುಣಮುಖರಾಗಿದ್ದು, ಐಸೋಲೇಷನ್‌ನಿಂದ ಹೊರಬಂದಿದ್ದಾರೆ. ಆದರೆ ಅಂತಿಮ ಏಕದಿನದಲ್ಲಿ ಅವರಿಗೆ ಆಡುವ ಅವಕಾಶ ಲಭಿಸುವ ನಿರೀಕ್ಷೆ ಇಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡುವ ಅವಕಾಶ ಪಡೆಯದಿದ್ದ ಋತುರಾಜ್‌ಗೆ ತವರಿನ ಸರಣಿಯಲ್ಲಿ ಸ್ಥಾನ ನಿರೀಕ್ಷಿಸಲಾಗಿತ್ತು. ಆದರೆ ಸರಣಿಗೆ ಮುನ್ನ ಸೋಂಕಿತರಾದ ನಾಲ್ವರು ಆಟಗಾರರಲ್ಲಿ ಅವರೂ ಸೇರಿದ್ದು, ಅವಕಾಶದಿಂದ ವಂಚಿತರನ್ನಾಗಿ ಮಾಡಿತ್ತು. ವಿಂಡೀಸ್ ವಿರುದ್ಧ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆಯದಿರುವ ಅವರಿನ್ನು ತವರು ರಾಜ್ಯ ಮಹಾರಾಷ್ಟ್ರ ತಂಡಕ್ಕೆ ಮರಳಿ ರಣಜಿ ಟ್ರೋಫಿಯಲ್ಲಿ ಆಡುವ ನಿರೀಕ್ಷೆ ಇದೆ.

    *ಭಾರತ ಪರ ಪದಾರ್ಪಣೆ ಮಾಡಿ ವರ್ಷವಾಗುತ್ತ ಬಂದಿದ್ದರೂ, ಹೆಚ್ಚಿನ ಅವಕಾಶ ಲಭಿಸಿರಲಿಲ್ಲ. ಹೀಗಾಗಿ ಸಿಕ್ಕ ಅವಕಾಶದಲ್ಲಿ ಸ್ಥಿರ ನಿರ್ವಹಣೆ ತೋರುವ ಹಂಬಲದಲ್ಲಿದ್ದೆ. ನಾಯಕ ರೋಹಿತ್ ಶರ್ಮರಿಂದ ಮೆಚ್ಚುಗೆ ಪಡೆದಿದ್ದು ಖುಷಿ ನೀಡಿದೆ. ಮೊಟೆರಾ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ.
    | ಪ್ರಸಿದ್ಧ ಕೃಷ್ಣ

    *ಎಂಎಸ್ ಧೋನಿ ಅಥವಾ ವಿರಾಟ್ ಕೊಹ್ಲಿ ಅವರಿಂದ ಪದಾರ್ಪಣೆ ಪಂದ್ಯದ ಕ್ಯಾಪ್ ಪಡೆಯುವುದು ನನ್ನ ಬಾಲ್ಯದ ಕನಸಾಗಿತ್ತು. ಕೊಹ್ಲಿ ಅವರಿಂದ ಕ್ಯಾಪ್ ಪಡೆದಿದ್ದು ವಿಶೇಷ ಕ್ಷಣ. ಕೊಹ್ಲಿ, ರೋಹಿತ್, ದ್ರಾವಿಡ್ ಜತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು ಶ್ರೇಷ್ಠ ಅನುಭವ ನೀಡಿದೆ.
    | ದೀಪಕ್ ಹೂಡಾ

    ತಾಯ್ತನದ ಬಳಿಕ ಸ್ಕ್ವಾಷ್​ಗೆ ಮರಳಲು ಸಜ್ಜಾದ ದೀಪಿಕಾ ಪಲ್ಲಿಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts