More

    ವಿಂಡೀಸ್ ವಿರುದ್ಧ ಅಂತಿಮ ಏಕದಿನದಲ್ಲೂ ಸುಲಭ ಜಯ, ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

    ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ 96 ರನ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯೊಂದರಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದ ಐತಿಹಾಸಿಕ ಸಾಧನೆ ದಾಖಲಿಸಿತು. ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತಕ್ಕೆ ಇದು ಸತತ 6ನೇ ಗೆಲುವಾಗಿದೆ. ಈ ಮುನ್ನ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲೂ ಭಾರತ 3-0 ಕ್ಲೀನ್‌ಸ್ವೀಪ್ ಸಾಧಿಸಿತ್ತು. ಇದಲ್ಲದೆ ರೋಹಿತ್ ಗೈರಲ್ಲಿ ಆಡಿದ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಎದುರಿಸಿದ ಬಳಿಕ 2023ರ ತವರಿನ ಏಕದಿನ ವಿಶ್ವಕಪ್‌ಗೆ ಭಾರತದ ಸಿದ್ಧತೆಯೂ ಸರಿಯಾದ ದಿಕ್ಕಿನಲ್ಲಿ ಸಾಗಿದೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಆಗ ಆಸರೆಯಾದ ಶ್ರೇಯಸ್ ಅಯ್ಯರ್ (80 ರನ್, 111 ಎಸೆತ, 9 ಬೌಂಡರಿ) ಮತ್ತು ರಿಷಭ್ ಪಂತ್ (56 ರನ್, 54 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನಡುವೆ ಭಾರತ ಇನಿಂಗ್ಸ್‌ನ ಕೊನೇ ಎಸೆತದಲ್ಲಿ 265 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್, 37.1 ಓವರ್‌ಗಳಲ್ಲಿ 169 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

    ಶ್ರೇಯಸ್-ಪಂತ್ ಆಸರೆ
    ನಾಯಕ ರೋಹಿತ್ ಶರ್ಮ (13), ವಿರಾಟ್ ಕೊಹ್ಲಿ (0), ಶಿಖರ್ ಧವನ್ (10) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದ ಭಾರತಕ್ಕೆ ಶ್ರೇಯಸ್ ಅಯ್ಯರ್-ರಿಷಭ್ ಪಂತ್ ಜೋಡಿ 4ನೇ ವಿಕೆಟ್‌ಗೆ 110 ರನ್ ಸೇರಿಸಿ ಆಸರೆಯಾಯಿತು. ಕೊನೆಯಲ್ಲಿ ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ (33) ಮತ್ತು ದೀಪಕ್ ಚಹರ್ (38) ತಂಡದ ಮೊತ್ತವನ್ನು 260ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ವಿಂಡೀಸ್‌ಗೆ ಸ್ಪೀಡ್ ಬ್ರೇಕ್
    ವೇಗಿಗಳಾದ ದೀಪಕ್ ಚಹರ್ (41ಕ್ಕೆ 2), ಮೊಹಮದ್ ಸಿರಾಜ್ (29ಕ್ಕೆ 3) ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ (27ಕ್ಕೆ 3) ದಾಳಿಗೆ ವಿಂಡೀಸ್ ತತ್ತರಿಸಿತು. 82 ರನ್‌ಗೆ 7 ವಿಕೆಟ್ ಕಳೆದುಕೊಂಡು ಕುಸಿದ ವಿಂಡೀಸ್, ಅಲ್ಜಾರಿ ಜೋಸ್ೆ (29) ಮತ್ತು ಒಡೇನ್ ಸ್ಮಿತ್ (36) ಪರಿಶ್ರಮದಿಂದ ಸೋಲಿತ ಅಂತರ ತಗ್ಗಿಸಿಕೊಂಡಿತು. ಸ್ಪಿನ್ನರ್ ಕುಲದೀಪ್ ಯಾದವ್ (51ಕ್ಕೆ 2) ಉತ್ತಮ ಪುನರಾಗಮನ ಕಂಡರು.

    ಭಾರತ 4 ಬದಲಾವಣೆ
    ಅಂತಿಮ ಏಕದಿನದಲ್ಲಿ ಭಾರತ 4 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಕೆಎಲ್ ರಾಹುಲ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಾಹಲ್ ಬದಲಿಗೆ ಶಿಖರ್ ಧವನ್, ಶ್ರೇಯಸ್ ಅಯ್ಯರ್, ದೀಪಕ್ ಚಹರ್ ಮತ್ತು ಕುಲದೀಪ್ ಯಾದವ್ ಕಣಕ್ಕಿಳಿದರು. ವಿಂಡೀಸ್ ಪರ ಅಕೀಲ್ ಹೊಸೀನ್ ಬದಲಿಗೆ ಹೇಡನ್ ವಾಲ್ಶ್ ಆಡಿದರು.

    ನಾಳೆ-ನಾಡಿದ್ದು ಐಪಿಎಲ್ ಆಟಗಾರರ ಹರಾಜು; ಯಾರು ದುಬಾರಿ? ಹೇಗಿದೆ ಲೆಕ್ಕಾಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts