More

    ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಕದನ

    ಸೆಂಚುರಿಯನ್: ಪ್ರಸಕ್ತ ವರ್ಷದುದ್ದಕ್ಕೂ ಹಲವು ಏಳುಬೀಳುಗಳನ್ನು ಕಂಡಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸಮರಕ್ಕೆ ಸಜ್ಜಾಗಿದೆ. ಕ್ರಿಸ್ಮಸ್ ಸಂಭ್ರಮದ ಮರುದಿನ ಆರಂಭಗೊಳ್ಳುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಹಣಾಹಣಿ ಕುತೂಹಲ ಮೂಡಿಸಿದೆ. ಕಳೆದ ಒಂದು ತಿಂಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವೈಯಕ್ತಿಕವಾಗಿ ಈ ಸರಣಿ ಸತ್ವ ಪರೀಕ್ಷೆಯಾಗಿದೆ. ಏಕದಿನ ನಾಯಕತ್ವ ಬದಲಾವಣೆ ಕುರಿತಂತೆ ಬಹಿರಂಗವಾಗಿಯೇ ಬಿಸಿಸಿಐ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದರು. ಕಳೆದ ಎರಡು ವರ್ಷಗಳ ಶತಕದ ಬರ ನೀಗಿಸಿಕೊಳ್ಳುವುದರ ಜತೆಗೆ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಕೊಹ್ಲಿ ಪಾಲಿಗೆ ದೊಡ್ಡ ಸವಾಲಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಇದುವರೆಗೂ ಮರೀಚಿಕೆಯಾಗಿರುವ ಟೆಸ್ಟ್ ಸರಣಿ ಗೆಲುವಿಗೆ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ವೇದಿಕೆ ಸೃಷ್ಟಿಸಬೇಕಿದೆ.

    * ಹನ್ನೊಂದರ ಬಳಗದ ಆಯ್ಕೆಯೇ ಚಿಂತೆ
    ತವರು ನೆಲದಲ್ಲಿ ನ್ಯೂಜಿಲೆಂಡ್ ಎದುರು ಭರ್ಜರಿ ಯಶಸ್ಸು ಕಂಡಿರುವ ಭಾರತ ತಂಡಕ್ಕೆ ಹನ್ನೊಂದರ ಬಳಗದ ಆಯ್ಕೆಯೇ ದೊಡ್ಡ ಚಿಂತೆಯಾಗಿದೆ. ನ್ಯೂಜಿಲೆಂಡ್ ಎದುರು ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಶ್ರೇಯಸ್ ಅಯ್ಯರ್ ಸಹಜವಾಗಿಯೇ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿವೆ. ಕಳಪೆ ನಿರ್ವಹಣೆಯಿಂದಲೇ ಉಪನಾಯಕತ್ವ ಪಟ್ಟ ಕಳೆದುಕೊಂಡಿರುವ ಅಜಿಂಕ್ಯ ರಹಾನೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನ ಮೂಡಿಸಿದೆ. ಅಲ್ಲದೆ, ಇವರಿಬ್ಬರಿಗೆ ಹನುಮ ವಿಹಾರಿ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಮುಂಬೈನಲ್ಲಿ ನಡೆದ ಕಿವೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ರಹಾನೆಗೆ ಕೊಕ್ ನೀಡಲಾಗಿತ್ತು. ಉಪನಾಯಕ ಕೆಎಲ್ ರಾಹುಲ್ ಶುಕ್ರವಾರ ಹಂಚಿಕೊಂಡಿರುವ ಮಾಹಿತಿ ಅನ್ವಯ ಐವರು ಬೌಲರ್‌ಗಳಿಗೆ ಸ್ಥಾನ ಸಿಗುವುದು ಪಕ್ಕಾಗಿದೆ. ವೇಗಿಗಳಿಗೆ ಪಿಚ್ ನೆರವಾಗುವ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್‌ಗೆ ಮಣೆ ಹಾಕಬಹುದು. ಶಾರ್ದೂಲ್ ಅಗತ್ಯ ವೇಳೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರು.

    * ಭಾರತಕ್ಕೆ ವೇಗಿಗಳ ಸವಾಲು
    ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ಹಾಗೂ ಡುವಾನ್ನೆ ಒಲಿವೀರ್ ಒಳಗೊಂಡ ವೇಗಿಗಳ ಪಡೆ ಪ್ರವಾಸಿ ಭಾರತ ತಂಡಕ್ಕೆ ಆಘಾತ ನೀಡುವ ಸಾಮರ್ಥ್ಯ ಹೊಂದಿದೆ. ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡ ಅಪಾಯಕಾರಿಯಾದರೂ ಅಚ್ಚರಿಯಿಲ್ಲ. ರಬಾಡ ಹಾಗೂ ಒಲಿವೀರ್ ಜೋಡಿ ಭಾರತದ ಬ್ಯಾಟಿಂಗ್ ಪಡೆಗೆ ದೊಡ್ಡ ಸವಾಲಾಗಲಿದೆ. ಡೀನ್ ಎಲ್ಗರ್, ಕ್ವಿಂಟನ್ ಡಿಕಾಕ್, ಮಾರ್ಕ್ರಮ್ ಒಳಗೊಂಡ ಬ್ಯಾಟಿಂಗ್ ಪಡೆ ಭಾರತದ ಸವಾಲಾಗಿದೆ ಸಜ್ಜಾಗಿದೆ.

    * ಆತಿಥೇಯರ ಲಕ್ಕಿ ಮೈದಾನ
    ಸೆಂಚುರಿಯನ್ ಮೈದಾನ ಆತಿಥೇಯರ ಪಾಲಿಗೆ ಅದೃಷ್ಟದ ಮೈದಾನದವೂ ಹೌದು. 2014ರಿಂದ ದ.ಆಫ್ರಿಕಾ ತಂಡ ಈ ಮೈದಾನದಲ್ಲಿ ಸೋತಿಲ್ಲ, ಅಲ್ಲದೆ, ಇದುವರೆಗೂ ಭಾರತದ ವಿರುದ್ಧ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಕಂಡಿದೆ.

    ಟೀಮ್ ನ್ಯೂಸ್:
    ಭಾರತ:
    ಉಪನಾಯಕ ಕೆಎಲ್ ರಾಹುಲ್ ಹೇಳಿರುವಂತೆ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಹಾಗೂ ಹನುಮ ವಿಹಾರಿ ನಡುವೆ 5ನೇ ಕ್ರಮಾಂಕಕ್ಕೆ ಪೈಪೋಟಿ ಏರ್ಪಟ್ಟಿದೆ. ಮೊಹಮದ್ ಸಿರಾಜ್ ಅಥವಾ ಇಶಾಂತ್ ಶರ್ಮ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗಬಹುದು.
    ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ/ಶ್ರೇಯಸ್ ಅಯ್ಯರ್/ಹನುಮ ವಿಹಾರಿ, ರಿಷಭ್ ಪಂತ್ (ವಿಕೀ), ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್/ಇಶಾಂತ್ ಶರ್ಮ.

    ದಕ್ಷಿಣ ಆಫ್ರಿಕಾ
    ನಾಲ್ಕನೇ ವೇಗಿಯಾಗಿ ವಿಯಾನ್ ಮುಲ್ದರ್ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಮುಲ್ದರ್‌ಗೆ ಅವಕಾಶ ನೀಡಿದರೆ ಕೆಳಕ್ರಮಾಂಕದ ಬ್ಯಾಟಿಂಗ್‌ಗೂ ಕೊಂಚ ಬಲ ಸಿಗಲಿದೆ.
    ಸಂಭಾವ್ಯ ತಂಡ: ಡೀನ್ ಎಲ್ಗರ್ (ನಾಯಕ), ಏಡನ್ ಮಾರ್ಕ್ರಮ್, ಕೀಗನ್ ಪೀಟರ್‌ಸನ್, ರಾಸಿ ವ್ಯಾನ್ ಡರ್ ಡುಸೆನ್, ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೀ), ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಡುವಾನ್ನೆ ಒಲಿವೀರ್.

    * 4: ಚೇತೇಶ್ವರ ಪೂಜಾರ, ಪ್ರಸಕ್ತ ವರ್ಷ ಭಾರತದ ಪರ ವಿದೇಶಿ ನೆಲದಲ್ಲಿ ದಾಖಲಾಗಿರುವ 8 ಶತಕದಾಟದ ಪೈಕಿ ನಾಲ್ಕರಲ್ಲಿ ಜತೆಯಾಗಿದ್ದಾರೆ.

    * ಡೀನ್ ಎಲ್ಗರ್, ಕ್ವಿಂಟನ್ ಡಿ ಕಾಕ್ ಪ್ರಸಕ್ತ ದಕ್ಷಿಣ ಆಫ್ರಿಕಾ ಆಟಗಾರರ ಪೈಕಿ ತವರು ನೆಲದಲ್ಲಿ ಕಡೇ ಮೂರು ವರ್ಷಗಳಲ್ಲಿ ಶತಕ ಸಿಡಿಸಿದ ಆಟಗಾರರಾಗಿದ್ದಾರೆ.

    * ಮುಖಾಮುಖಿ: 39, ಭಾರತ: 14, ದ.ಆಫ್ರಿಕಾ: 15, ಡ್ರಾ: 10
    ಸೂಪರ್‌ಸ್ಪೋರ್ಟ್ ಪಾಕ್‌ನಲ್ಲಿ: 2, ಭಾರತ: 0, ದ.ಆಫ್ರಿಕಾ: 2
    ಕಡೇ 5 ಮುಖಾಮುಖಿ, ಭಾರತ: 4, ದ.ಆಫ್ರಿಕಾ: 1

    ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts