More

    ಇಂದು ಭಾರತ-ಕಿವೀಸ್ ನಿರ್ಣಾಯಕ ಹಣಾಹಣಿ

    ದುಬೈ: ಏಕದಿನ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಸೋಲನುಭವಿಸಿ ಮುಖಭಂಗಕ್ಕೀಡಾಗಿರುವ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ತನ್ನ ನಿರ್ಣಾಯಕ ಸಮರದಲ್ಲಿ ಭಾನುವಾರ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಮೊದಲ ಪಂದ್ಯಗಳಲ್ಲಿ ಪಾಕ್ ಎದುರು ಸೋಲನುಭವಿಸಿದ್ದು, ಸೆಮೀಸ್ ಹಂತಕ್ಕೇರುವ ದೃಷ್ಟಿಯಿಂದ ಎರಡು ತಂಡಗಳಿಗೂ ಈ ಪಂದ್ಯ ‘ಕ್ವಾರ್ಟಫೈನಲ್’ ಹಣಾಹಣಿಯಂತಿದೆ. ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಇದುವರೆಗೂ ನ್ಯೂಜಿಲೆಂಡ್ ಎದುರು ಗೆದ್ದಿಲ್ಲ, ಅಲ್ಲದೆ, ಕಳೆದ 18 ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ತಂಡಕ್ಕೆ ಶರಣಾಗುತ್ತಾ ಬಂದಿರುವ ಭಾರತ ತಂಡ ಗೆಲುವಿನ ಬರ ಎದುರಿಸುತ್ತಿದೆ. ಇದೀಗ ಮಹತ್ವದ ಪಂದ್ಯದಲ್ಲಿ ಗೆಲುವಿನೊಂದಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ವಿರಾಟ್ ಕೊಹ್ಲಿ ಬಳಗಕ್ಕೆ ದಕ್ಕಿದೆ.

    * ಪುಟಿದೇಳುವ ವಿಶ್ವಾಸದಲ್ಲಿ ಕೊಹ್ಲಿ ಪಡೆ
    ಪಾಕಿಸ್ತಾನ ಎದುರು ನಿಸ್ತೇಜ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ 10 ವಿಕೆಟ್‌ಗಳಿಂದ ಶರಣಾಗಿದ್ದ ಭಾರತ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. ಅನುಭವಿ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್‌ರಂಥ ಬಲಿಷ್ಠ ಬೌಲರ್‌ಗಳನ್ನು ಬ್ಯಾಟರ್‌ಗಳು ಸಮರ್ಥವಾಗಿ ಎದುರಿಸಬೇಕಿದೆ. ಕೆಎಲ್ ರಾಹುಲ್, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಹಿಂದಿನ ವೈಫಲ್ಯ ಮರೆತು ಪ್ರತಿಹೋರಾಟ ತೋರಬೇಕಿದೆ. ಬೌಲರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಬ್ಯಾಟರ್‌ಗಳು ಸ್ಫೋಟಿಸಬೇಕಿದೆ. ಪಾಕ್ ಎದುರು ಏಕೈಕ ವಿಕೆಟ್ ಕಬಳಿಸಲು ವಿಫಲವಾಗಿದ್ದ ಭಾರತದ ಬೌಲರ್‌ಗಳು ಲಯಕ್ಕೆ ಮರಳಬೇಕಿದೆ. ಪಾಕ್ ಎದುರು ಸೋಲಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕವಾಗಿ ಟ್ರೋಲ್‌ಗೆ ಒಳಗಾಗಿದ್ದ ಮೊಹಮದ್ ಶಮಿಗೆ ವೈಯಕ್ತಿಕವಾಗಿ ಈ ಪಂದ್ಯ ಪ್ರತಿಷ್ಠೆಯಾಗಿದೆ. ಜಸ್‌ಪ್ರೀತ್ ಬುಮ್ರಾ ಲಯದಲ್ಲಿದ್ದರೆ, ಭುವನೇಶ್ವರ್ ಕುಮಾರ್ ನಿರೀಕ್ಷಿತ ನಿರ್ವಹಣೆ ತೋರುತ್ತಿಲ್ಲ. ಬ್ಯಾಟಿಂಗ್‌ಗೂ ಹೆಚ್ಚು ಒತ್ತು ನೀಡಿದರೆ ಶಾರ್ದೂಲ್ ಠಾಕೂರ್ ಕಣಕ್ಕಿಳಿಯಬಹುದು.

    * ಕಿವೀಸ್‌ಗೆ ಗಾಯದ ಹೊಡೆತ
    ಕಿವೀಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗುಪ್ಟಿಲ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಪ್ರಮುಖ ಬ್ಯಾಟರ್‌ಗಳು ಅಲಭ್ಯರಾದರೆ ಬೌಲಿಂಗ್ ಪಡೆ ಮೇಲೆ ಒತ್ತಡ ಹೆಚ್ಚಾಗಲಿದೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಆಡಂ ಮಿಲ್ನೆ, ಕೈಲ್ ಜೇಮಿಸನ್ ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆಯೇ ತಂಡದ ಶಕ್ತಿಯಾಗಿದೆ. ನ್ಯೂಜಿಲೆಂಡ್ ತಂಡ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡದ ಎದುರು ಮೇಲುಗೈ ಸಾಧಿಸಿದ ವಿಶ್ವಾಸದಲ್ಲಿದೆ.

    ಟೀಮ್ ನ್ಯೂಸ್:
    ಭಾರತ:
    ಪಾಕಿಸ್ತಾನ ವಿರುದ್ಧ ಆಡಿದ ಬಳಗವೇ ಬಹುತೇಕ ಕಣಕ್ಕಿಳಿಯಲಿದೆ. ಲಯ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಅವಕಾಶ ಲಭಿಸಲಿದೆ. ದುಬಾರಿಯಾಗುತ್ತಿರುವ ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಅವಕಾಶ ನೀಡಿದರೆ ಆರ್.ಅಶ್ವಿನ್ ಮತ್ತೊಮ್ಮೆ ಹೊರಗುಳಿಯಲಿದ್ದಾರೆ.

    ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ.

    ನ್ಯೂಜಿಲೆಂಡ್:
    ಕೇನ್ ವಿಲಿಯಮ್ಸನ್, ಮಾರ್ಟಿನ್ ಗುಪ್ಟಿಲ್ ಫಿಟ್ ಆದರೆ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ. ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಇದೀಗ ಆಡಂ ಮಿಲ್ನೆ ಕೂಡ ಆಯ್ಕೆಗೆ ಲಭ್ಯರಾಗಿದ್ದಾರೆ. ಟಿಮ್ ಸೌಥಿ ಬದಲಿಗೆ ಮಿಲ್ನೆ ಆಡಬಹುದು.
    ಸಂಭಾವ್ಯ ತಂಡ: ಮಾರ್ಟಿನ್ ಗುಪ್ಟಿಲ್, ಡಾರ್ಲಿ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಾಮ್, ಟಿಮ್ ಸೀರ್ಟ್ (ವಿಕೀ), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ/ಆಡಂ ಮಿಲ್ನೆ, ಇಶ್ ಸೋಧಿ, ಟ್ರೆಂಟ್ ಬೌಲ್ಟ್.

    ಪಂದ್ಯ ಆರಂಭ: ರಾತ್ರಿ 7.30
    ಟಿ20 ವಿಶ್ವಕಪ್‌ನಲ್ಲಿ: 2, ಭಾರತ : 0, ನ್ಯೂಜಿಲೆಂಡ್: 2
    ಮುಖಾಮುಖಿ: 16, ಭಾರತ: 8, ನ್ಯೂಜಿಲೆಂಡ್: 8
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts