More

    ಇಂದು ಭಾರತ- ಇಂಗ್ಲೆಂಡ್ ಎರಡನೇ ಟಿ20 ಕದನ

    ಅಹಮದಾಬಾದ್: ಆರಂಭಿಕ ಹಿನ್ನಡೆಯಿಂದಲೇ ಸರಣಿ ಗೆಲುವಿಗೆ ಸೋಪಾನ ಕಟ್ಟುತ್ತಿರುವ ಭಾರತ ತಂಡ ಮತ್ತೊಮ್ಮೆ ಪುಟಿದೇಳಲು ಸಜ್ಜಾಗಿದೆ. ಆಸ್ಟ್ರೇಲಿಯಾ ಪ್ರವಾಸದಿಂದಲೂ ಆರಂಭಿಕ ಆಘಾತ ಕಂಡರೂ ಸರಣಿ ಗೆಲುವಿನ ಇತಿಹಾಸ ಹೊಂದಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 2ನೇ ಚುಟುಕು ಕ್ರಿಕೆಟ್ ಕದನಕ್ಕೆ ಸಜ್ಜಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಟೆಸ್ಟ್ ಸರಣಿಯಲ್ಲಿ ದಿಗ್ವಿಜಯ ಸಾಧಿಸಿದ್ದ ಭಾರತ, ಇದೀಗ ಅದೇ ನೆಲದಲ್ಲಿ ಚುಟುಕು ಕ್ರಿಕೆಟ್ ಸರಣಿಯಲ್ಲಿ ಆಂಗ್ಲರ ಪರಾಕ್ರಮಕ್ಕೆ ತಿರುಗೇಟು ನೀಡುವ ಉತ್ಸಾಹದಲ್ಲಿದೆ. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಪಟ್ಟ ಅಲಂಕರಿಸಿರುವ ಭಾರತ ತಂಡ ಟಿ20 ಕ್ರಿಕೆಟ್‌ನಲ್ಲೂ ನಂ.1 ಸ್ಥಾನಕ್ಕೇರುವ ಅವಕಾಶ ಉಳಿಸಿಕೊಳ್ಳಲಿದೆ.

    ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ವೈಫಲ್ಯದಿಂದ ಬೆಲೆಕಟ್ಟಿದ ಭಾರತ ತಂಡ ಸೋಲಿನಿಂದ ಪಾಠ ಕಲಿತಿದ್ದು, ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. 5 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಅನುಭವಿಸಿದ್ದು, ಭಾನುವಾರ ನಡೆಯಲಿರುವ ಎರಡನೇ ಕದನ ತಂಡದ ಪಾಲಿಗೆ ಮಹತ್ವ ಪಡೆದಿದೆ.

    * ಪುಟಿದೇಳುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ
    ಪಂದ್ಯದ ಫಲಿತಾಂಶದಲ್ಲಿ ಟಾಸ್ ಪ್ರಮುಖ ಪಾತ್ರವಹಿಸಿದರೂ ಭಾರತ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ವೈಫಲ್ಯ ಅನುಭವಿಸಿತ್ತು. ಅನುಭವಿ ರೋಹಿತ್ ಶರ್ಮ ಆರಂಭಿಕ ಎರಡು ಪಂದ್ಯಗಳಿಂದ ವಿಶ್ರಾಂತಿ ನಿಡಲಾಗಿದೆ. ಸತತ 6 ಟೆಸ್ಟ್ ಆಡಿರುವ ರೋಹಿತ್ ಶರ್ಮ, ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಸತತ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು. ಅಗ್ರಕ್ರಮಾಂಕದಲ್ಲಿ ರೋಹಿತ್ ಶರ್ಮ ಸೇವೆ ತಂಡಕ್ಕೆ ಅವಶ್ಯಕತೆಯಿದ್ದರೂ ಮುಂದಿನ ಪಂದ್ಯಗಳ ದೃಷ್ಟಿಯಿಂದ ವಿಶ್ರಾಂತಿ ನೀಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್ ನೀರಸ ನಿರ್ವಹಣೆಯಿಂದಾಗಿ ತಂಡ ಹಿನ್ನಡೆ ಅನುಭವಿಸಿತ್ತು. ಶ್ರೇಯಸ್ ಅಯ್ಯರ್ ಹೊರತುಪಡಿಸಿ ಬ್ಯಾಟ್ಸ್‌ಮನ್‌ಗಳು ನಿರಾಸೆ ಅನುಭವಿಸಿದ್ದರು. ಮುಂಬರುವ ಟಿ20 ವಿಶ್ವಕಪ್‌ಗೆ ತಂಡದ ಸಂಯೋಜನೆ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಪ್ರಮುಖ ಪಾತ್ರವಹಿಸಿದೆ.

    * ಗೆಲುವಿನ ವಿಶ್ವಾಸದಲ್ಲಿ ಪ್ರವಾಸಿಗರು
    ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಪ್ರವಾಸಿ ಇಂಗ್ಲೆಂಡ್ ತಂಡ ಚುಟುಕು ಕ್ರಿಕೆಟ್ ಸರಣಿಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಮೊದಲ ಪಂದ್ಯದಲ್ಲಿ ಸರ್ವಾಂಗೀಣ ನಿರ್ವಹಣೆ ಮೂಲಕ ಮೇಲುಗೈ ಸಾಧಿಸಿರುವ ಏವೊಯಿನ್ ಮಾರ್ಗನ್ ಬಳಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಭಾರತದಲ್ಲೇ ನಡೆಯಲಿರುವ ಚುಟುಕು ಕ್ರಿಕೆಟ್‌ಗೆ ತಯಾರಿ ಹಾಗೂ ತಂಡದ ಸಂಯೋಜನೆಗೆ ಇಂಗ್ಲೆಂಡ್ ಪಾಲಿಗೆ ಈ ಸರಣಿ ಪ್ರಮುಖವಾಗಿದೆ. ಪ್ರಶಸ್ತಿ ಗೆಲುವಿನ ಫೇವರಿಟ್ ಎನಿಸಿಕೊಂಡಿರುವ ಇಂಗ್ಲೆಂಡ್ ಟಿ20 ವಿಶ್ವಕಪ್ ಹಿತದೃಷ್ಟಿಯಿಂದಲೇ ತಂಡವನ್ನು ಸನ್ನದ್ಧಗೊಳಿಸುತ್ತಿದೆ. ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಬೇಂಚ್ ಸ್ಟ್ರೇಂತ್ ಸಿದ್ಧತೆಗೆ ಇಂಗ್ಲೆಂಡ್ ಮುಂದಾಗಿದೆ.

    ಟೀಮ್ ನ್ಯೂಸ್:
    * ಭಾರತ:
    ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಗೆ ಆರಂಭಿಕ ಎರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಇದರಿಂದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್, ಕನ್ನಡಿಗ ಕೆಎಲ್ ರಾಹುಲ್ ಜತೆಗೂಡಿ ಮತ್ತೊಮ್ಮೆ ಇನಿಂಗ್ಸ್ ಆರಂಭಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಕೆಲ ಆಟಗಾರರು ವಿಲರಾಗಿದ್ದರೂ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆಗಳಿವೆ. ಮೂವರು ಸ್ಪಿನ್ನರಿಗೆ ಅವಕಾಶ ನೀಡಿದರೆ ನವದೀಪ್ ಸೈನಿ ಮತ್ತೊಮ್ಮೆ ಹೊರಗುಳಿಯವುದು ಅನಿವಾರ್ಯ. ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

    * ಇಂಗ್ಲೆಂಡ್:
    ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ ವಿಶ್ವಾಸದಲ್ಲಿರುವ ಪ್ರವಾಸಿ ಇಂಗ್ಲೆಂಡ್ ಯಾವುದೇ ಬದಲಾವಣೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಎರಡನೇ ಸ್ಪಿನ್ನರ್‌ಗೆ ಅವಕಾಶ ನೀಡಿದರೆ, ಸ್ಯಾಮ್ ಕರ‌್ರನ್ ಬದಲಿಗೆ ಮೊಯಿನ್ ಅಲಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    * ಪಿಚ್ ರಿಪೋರ್ಟ್
    ಮೊಟೆರಾದಲ್ಲಿ ನಡೆಯುತ್ತಿರುವ ಎರಡನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಇದಾಗಿದೆ. ಶುಕ್ರವಾರ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡಿದ್ದರು. ಎರಡನೇ ಸರದಿಯಲ್ಲಿ ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ರನ್‌ಗಳಿಸಿದ್ದರು. ಪಂದ್ಯಕ್ಕೆ ಇಬ್ಬನಿ ಸಮಸ್ಯೆ ಕಾಡಲಿದ್ದು, ಟಾಸ್ ಪ್ರಮುಖ ಪಾತ್ರವಹಿಸಲಿದೆ.

    ಮುಖಾಮುಖಿ: 15, ಭಾರತ: 7, ಇಂಗ್ಲೆಂಡ್: 8.

    ಪಂದ್ಯ ಆರಂಭ: ರಾತ್ರಿ 7 ಗಂಟೆಗೆ
    ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts