More

    ಇಂಗ್ಲೆಂಡ್ ಎದುರು ಫಾಲೋಆನ್ ಭೀತಿಯಲ್ಲಿ ಭಾರತ ತಂಡ

    ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯ ಹೀರೋ ರಿಷಭ್ ಪಂತ್ (91ರನ್, 88 ಎಸೆತ, 9 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಚೇತೇಶ್ವರ್ ಪೂಜಾರ (73ರನ್, 143 ಎಸೆತ, 11 ಬೌಂಡರಿ) ಅರ್ಧಶತಕದಾಟದ ನಡುವೆಯೂ ಆತಿಥೇಯ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಫಾಲೋಆನ್ ಭೀತಿಗೆ ಸಿಲುಕಿದೆ. ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 257 ರನ್‌ಗಳಿಸಿದ್ದು, ಫಾಲೋಆನ್ ಭೀತಿ ತಪ್ಪಿಸಿಕೊಳ್ಳಲು ಇನ್ನು 121 ರನ್‌ಗಳಿಸಬೇಕಿದ್ದು, ಇನಿಂಗ್ಸ್ ಮುನ್ನಡೆಗಾಗಿ 321 ರನ್ ಪೇರಿಸಬೇಕಿದೆ. ಇದಕ್ಕೂ ಮೊದಲು 5 ವಿಕೆಟ್ ಗೆ 555 ರನ್ ಗಳಿಂದ ದಿನದಾಟ ಮುಂದುವರಿಸಿದ ಇಂಗ್ಲೆಂಡ್ ತಂಡ 578 ರನ್ ಗಳಿಗೆ ಸರ್ವಪತನ ಕಂಡಿತು.

    * ಕೈಕೊಟ್ಟ ಅಗ್ರಕ್ರಮಾಂಕ
    ದಿನದ ಆರಂಭದಲ್ಲಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್‌ನ 4ನೇ ಓವರ್‌ನಲ್ಲೇ ರೋಹಿತ್ ಶರ್ಮ (6) ಜೋಫ್ರಾ ಆರ್ಚರ್ ಎಸೆತವನ್ನು ರಕ್ಷಣಾತ್ಮವಾಗಿ ಆಡಲು ಯತ್ನಿಸಿದಾಗ ಎಡ್ಜ್ ಆದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಸೇರಿತು. ಮೊದಲ ವಿಕೆಟ್‌ಗೆ ರೋಹಿತ್-ಶುಭಮಾನ್ ಗಿಲ್ 19 ರನ್ ಗಳಿಸಲಷ್ಟೇ ಶಕ್ತರಾದರು. ಮತ್ತೊಂದೆಡೆ, ಆಕರ್ಷಕ ಬೌಂಡರಿ ಸಿಡಿಸಿ ಕ್ರಿಸ್‌ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದ ಶುಭಮಾನ್ ಗಿಲ್ ಕೂಡ ಆರ್ಚರ್ ಎಸೆತದಲ್ಲಿ ಮಿಡ್‌ಆನ್‌ನಲ್ಲಿದ್ದ ಜೇಮ್ಸ್ ಆಂಡರ್‌ಸನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಬಳಿಕ ಪೂಜಾರಾ ಜತೆಯಾದ ನಾಯಕ ವಿರಾಟ್ ಕೊಹ್ಲಿಗೆ (11) ಡಾಮ್ ಬೆಸ್ ಆಘಾತ ನೀಡಿದರು. ತಮ್ಮ ಎರಡು ಓವರ್‌ಗಳ ಅಂತರದಲ್ಲಿ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆಗೆ (1) ಪೆವಿಲಿಯನ್ ದಾರಿ ತೋರಿದ ಬೆಸ್, ಭಾರತಕ್ಕೆ ಚೇತರಿಕೆ ಕಾಣಲು ಅವಕಾಶ ನೀಡಿದೆ ಶಾಕ್ ನೀಡಿದರು.

    * ಸಿಡಿದ ರಿಷಭ್ ಪಂತ್, ಪೂಜಾರ ಸಾಥ್
    ಆರ್ಚರ್-ಡಾಮ್ ಬೆಸ್ ಜೋಡಿ ನೀಡಿದ ಆಘಾತದಿಂದಾಗಿ ಭೋಜನ ವಿರಾಮಕ್ಕೂ ಮೊದಲೇ 4 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ತಂಡಕ್ಕೆ ರಿಷಭ್ ಪಂತ್ ಚೇತರಿಕೆ ನೀಡಿದರು. ಅಗ್ರಕ್ರಮಾಂಕದ ವೈಫಲ್ಯ ಹಾಗೂ ಇಂಗ್ಲೆಂಡ್ ಬೌಲರ್‌ಗಳ ಕರಾರುವಾಕ್ ದಾಳಿ ನಡುವೆಯೂ ರಿಷಭ್ ಪಂತ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಮತ್ತೊಂದು ತುದಿಯಲ್ಲಿ ಪೂಜಾರ ಕೂಡ ಪಂತ್‌ಗೆ ಸಾಥ್ ನೀಡಿದರು. ದಿನದಾಟದ ಎರಡನೇ ಅವಧಿ ಚಹಾವಿರಾಮದವರೆಗೂ ಈ ಜೋಡಿ ವಿಕೆಟ್ ಕಾಯ್ದುಕೊಂಡಿತು. ಆದರೆ,ಚಹಾ ವಿರಾಮದ ಬಳಿಕ ಡಾಮ್ ಬೆಸ್ ಮತ್ತೊಮ್ಮೆ ಭಾರತಕ್ಕೆ ವಿಲನ್ ಆದರು. ಈ ಜೋಡಿ 5ನೇ ವಿಕೆಟ್‌ಗೆ 119 ರನ್ ಜತೆಯಾಟವಾಡಿ ಇನಿಂಗ್ಸ್‌ಗೆ ಸುಧಾರಣೆ ನೀಡಿತು. ಪೂಜಾರ ನಿರ್ಗಮನದ ಬಳಿಕವೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಪಂತ್ ಓಟಕ್ಕೂ ಡಾಮ್ ಬೆಸ್ ಬ್ರೇಕ್ ಹಾಕಿದರು. ಸ್ಥಳೀಯ ಪ್ರತಿಭೆಗಳಾದ ವಾಷಿಂಗ್ಟನ್ ಸುಂದರ್ (33) ಹಾಗೂ ಆರ್.ಅಶ್ವಿನ್ (8) ಕ್ರೀಸ್‌ನಲ್ಲಿದ್ದಾರೆ.

    ಇಂಗ್ಲೆಂಡ್: 190.1 ಓವರ್‌ಗಳಲ್ಲಿ 578 (ಡಾಮ್ ಬೆಸ್ 34, ಜಸ್‌ಪ್ರೀತ್ ಬುಮ್ರಾ 84ಕ್ಕೆ 3, ಆರ್.ಅಶ್ವಿನ್ 146ಕ್ಕೆ 3, ಇಶಾಂತ್ ಶರ್ಮ 52ಕ್ಕೆ 2, ಶಾಬಾಜ್ ನದೀಂ 167ಕ್ಕೆ 2). ಭಾರತ : 74 ಓವರ್‌ಗಳಲ್ಲಿ 6 ವಿಕೆಟ್‌ಗೆ 257 (ಶುಭಮಾನ್ ಗಿಲ್ 29, ಚೇತೇಶ್ವರ್ ಪೂಜಾರ 73, ರಿಷಭ್ ಪಂತ್ 91, ವಾಷಿಂಗ್ಟನ್ ಸುಂದರ್ 33*, ಡಾಮ್ ಬೆಸ್ 55ಕ್ಕೆ 4, ಜೋಫ್ರಾ ಆರ್ಚರ್ 52ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts