More

    ಮಹಿಳಾ ಏಕದಿನ ವಿಶ್ವಕಪ್ ; ಭಾರತಕ್ಕೆ ಇಂದು ಪ್ರಬಲ ಆಸೀಸ್ ಎದುರಾಳಿ

    ಆಕ್ಲೆಂಡ್: ಗೆಲುವು-ಸೋಲುಗಳನ್ನು ಸಮನಾಗಿ ಸ್ವೀಕರಿಸಿರುವ ಭಾರತ ತಂಡ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತನ್ನ ನಿರ್ಣಾಯಕ ಹಣಾಹಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಶನಿವಾರ ಎದುರಿಸಲಿದೆ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ತಲಾ 2 ಸೋಲು, ಗೆಲುವು ಕಂಡಿರುವ ಭಾರತ ತಂಡದ ಉಪಾಂತ್ಯದ ಆಸೆಗೆ ಬಲ ತುಂಬಲು ಆಸೀಸ್ ಎದುರು ಗೆಲುವು ಅಗತ್ಯವಾಗಿದೆ. ಹಿಂದಿನ 2017ರ ಆವೃತ್ತಿಯ ಸೆಮೀಸ್‌ನಲ್ಲಿ ಭಾರತ ತಂಡ ಆಸೀಸ್ ತಂಡವನ್ನೇ ಮಣಿಸಿ ಫೈನಲ್‌ಗೇರಿತ್ತು. 5 ವರ್ಷಗಳ ಹಿಂದಿನ ಗೆಲುವೇ ಮಿಥಾಲಿ ಪಡೆಗೆ ಸ್ಫೂರ್ತಿಯಾಗಲಿದೆ. ಹಿಂದಿನ ಹಣಾಹಣಿಯಲ್ಲಿ ಇಂಗ್ಲೆಂಡ್‌ಗೆ ಶರಣಾಗಿದ್ದ ಭಾರತ ತಂಡ ಗೆಲುವಿನ ಹಳಿಗೇರುವ ಛಲದಲ್ಲಿದೆ.

    *ಬ್ಯಾಟಿಂಗ್ ವಿಭಾಗದ ಚಿಂತೆ
    ಭಾರತ ತಂಡದ ಪಾಲಿಗೆ ಮೂರು ಲೀಗ್ ಪಂದ್ಯಗಳಷ್ಟೇ ಉಳಿದಿದ್ದು, ಮೂರು ವಿಭಾಗಗಳಿಂದಲೂ ಉತ್ತಮ ನಿರ್ವಹಣೆಯ ಅಗತ್ಯವಿದೆ. ಸದ್ಯ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರುವ ಮಿಥಾಲಿ ರಾಜ್ ಪಡೆ ಸೆಮೀಸ್ ಪ್ರವೇಶಿಸುವ ಅವಕಾಶ ಹೊಂದಿದೆ. ಬ್ಯಾಟಿಂಗ್ ವಿಭಾಗದ ನೀರಸ ನಿರ್ವಹಣೆಯೇ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಇಂಗ್ಲೆಂಡ್ ಎದುರು ಭಾರತ ಕೇವಲ 134 ರನ್‌ಗಳಿಗೆ ಮುಗ್ಗರಿಸಿತ್ತು. ಹಿಂದಿನ ಪಂದ್ಯದಲ್ಲಿ ಮಾಡಿದ ಎಡವಟ್ಟುಗಳಿಂದ ಪಾಠ ಕಲಿತಿರುವ ಭಾರತ ತಂಡ ಪುಟಿದೇಳಬೇಕಿದೆ. ವೆಸ್ಟ್ ಇಂಡೀಸ್ ಎದುರು ಭರ್ಜರಿ ಶತಕ ಸಿಡಿಸಿದ್ದ ಹರ್ಮಾನ್‌ಪ್ರೀತ್ ಕೌರ್, ಸ್ಮತಿ ಮಂದನಾ ಜೋಡಿ ಮತ್ತೆ ಸ್ಫೋಟಿಸಬೇಕಿದೆ. ಇವರಿಗೆ ನಾಯಕಿ ಮಿಥಾಲಿ ರಾಜ್, ಆಲ್ರೌಂಡರ್ ದೀಪ್ತಿ ಶರ್ಮ ಸಾಥ್ ನೀಡಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (8 ವಿಕೆಟ್) ಭಾರತ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಬೌಲರ್ ಎನಿಸಿದ್ದಾರೆ. ಪೂಜಾ ವಸಾಕರ್, ಮೇಘಾ ಸಿಂಗ್, ಅನುಭವಿ ಜೂಲನ್ ಗೋಸ್ವಾಮಿ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ಪಡೆಗೆ ಬ್ಯಾಟರ್‌ಗಳಿಂದ ಅಗತ್ಯ ಸಾಥ್ ಬೇಕಿದೆ.

    *ಆತ್ಮವಿಶ್ವಾಸದಲ್ಲಿ ಆಸೀಸ್
    ಸತತ 4 ಗೆಲುವು ದಾಖಲಿಸಿ ಟೂರ್ನಿಯಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿರುವ ಆಸ್ಟ್ರೇಲಿಯಾ ತಂಡ ಆತ್ಮವಿಶ್ವಾಸದಲ್ಲಿದೆ. ಭಾರತ ವಿರುದ್ಧ ಜಯ ದಾಖಲಿಸಿದರೆ ಮೆಗ್ ಲ್ಯಾನಿಂಗ್ ಸಾರಥ್ಯದ ಪಡೆ ಸೆಮೀಸ್ ಹಂತವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಸರ್ವಾಂಗೀಣ ನಿರ್ವಹಣೆ ಮೂಲಕ ಗಮನಸೆಳೆಯುತ್ತಿರುವ ಆಸೀಸ್ ಪಡೆ, 2017ರ ಸೆಮೀಸ್‌ನಲ್ಲಿ ಭಾರತದ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆರಂಭಿಕ ಬ್ಯಾಟುಗಾರ್ತಿ ರಚೀಲ್ ಹೇನ್ಸ್ (227ರನ್, 92 ಸರಾಸರಿ) ಭರ್ಜರಿ ಫಾರ್ಮ್‌ನಲ್ಲಿದ್ದರೆ, ಸಂಘಟಿತ ಹೋರಾಟವೇ ತಂಡದ ಶಕ್ತಿಯಾಗಿದೆ.

    ಮುಖಾಮುಖಿ: 49
    ಭಾರತ: 10
    ಆಸ್ಟ್ರೇಲಿಯಾ: 39

    ಪಂದ್ಯ ಆರಂಭ: ಬೆಳಗ್ಗೆ 6.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts