More

    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ಗೆ ಕಡಿವಾಣ ಹೇರಿದ ಭಾರತ

    ಮೆಲ್ಬೋರ್ನ್: ವೇಗಿ ಜಸ್‌ಪ್ರೀತ್ ಬುಮ್ರಾ (56ಕ್ಕೆ 4) ಹಾಗೂ ಸ್ಪಿನ್ನರ್ ಆರ್.ಅಶ್ವಿನ್ (35ಕ್ಕೆ 3) ಜೋಡಿಯ ಮಾರಕ ದಾಳಿ ನೆರವಿನಿಂದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೇ ಕದನದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹೇರಿತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 72.3 ಓವರ್‌ಗಳಲ್ಲಿ 195 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ ಆರಂಭಿಕ ಆಘಾತ ಎದುರಿಸಿದ್ದು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 36 ರನ್ ಪೇರಿಸಿದ್ದು, ಇನ್ನು 159 ರನ್ ಹಿನ್ನಡೆಯಲ್ಲಿದೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿ ಬಳಿ ಅಜಿಂಕ್ಯ ರಹಾನೆ ಕ್ಷಮೆಯಾಚಿಸಿದ್ದೇಕೆ..

    ಕೈಕೊಟ್ಟ ಮಯಾಂಕ್, ಭರವಸೆ ಮೂಡಿಸಿದ ಗಿಲ್
    ಆಸ್ಟ್ರೇಲಿಯಾ ತಂಡಕ್ಕೆ ಸಾಧಾರಣ ಮೊತ್ತಕ್ಕೆ ಕಡಿವಾಣ ಹೇರಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲೇ ವೇಗಿ ಮಿಚೆಲ್ ಸ್ಟಾರ್ಕ್ ಆಘಾತ ನೀಡಿದರು. ಕನ್ನಡಿಗ ಮಯಾಂಕ್ ಅಗರ್ವಾಲ್ 6 ಎಸೆತ ಎದುರಿಸಿದರೂ ರನ್ ಖಾತೆ ತೆರೆಯಲು ವಿಫಲರಾದರು. ಸ್ಟಾರ್ಕ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇದರೊಂದಿಗೆ ಆರಂಭದಲ್ಲೇ ಭಾರತ ಆಘಾತ ಕಂಡಿತು. ಬಳಿಕ ಶುಭಮಾನ್ ಗಿಲ್ (28*ರನ್, 38 ಎಸೆತ, 5 ಬೌಂಡರಿ) ಹಾಗೂ ಉಪನಾಯಕ ಚೇತೇಶ್ವರ್ ಪೂಜಾರ (7*ರನ್, 23 ಎಸೆತ, 1 ಬೌಂಡರಿ) ಜೋಡಿ ಮುರಿಯದ 2ನೇ ವಿಕೆಟ್‌ಗೆ 36 ರನ್ ಕಲೆಹಾಕಿತು. ಪದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಹೊಡೆತಗಳ ಮೂಲಕ ಗಿಲ್ ಗಮನಸೆಳೆದರು. ವೈಯಕ್ತಿಕ 4 ರನ್ ಗಳಿಸಿದ್ದ ವೇಳೆ ಗಿಲ್ ಜೀವದಾನ ಗಿಟ್ಟಿಸಿಕೊಂಡರು. ಕಮ್ಮಿನ್ಸ್ ಎಸೆತದಲ್ಲಿ ಸ್ಪಿಪ್‌ನಲ್ಲಿದ್ದ ಲಬುಶೇನ್ ಕೈಬಂದ ಕ್ಯಾಚ್ ಕೈಚೆಲ್ಲಿದರು.

    ಬುಮ್ರಾ-ಅಶ್ವಿನ್ ಮಾರಕ ದಾಳಿ
    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ಗೆ ಕಡಿವಾಣ ಹೇರಿದ ಭಾರತಆಸ್ಟ್ರೇಲಿಯಾ ತಂಡಕ್ಕೆ ಜಸ್‌ಪ್ರೀತ್ ಬುಮ್ರಾ ಹಾಗೂ ಆರ್.ಅಶ್ವಿನ್ ಜೋಡಿ ಆಘಾತ ನೀಡಿತು. ಜೋ ಬರ್ನ್ಸ್ 10 ಎಸೆತ ಎದುರಿಸಿದರೂ ಖಾತೆ ತೆರೆಯಲು ವಿಫಲರಾದರು. ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಆಸೀಸ್ ಪತನಕ್ಕೂ ಬುಮ್ರಾ ಮುನ್ನುಡಿ ಬರೆದರು. ಇದಾದ ಬಳಿಕ ಮ್ಯಾಥ್ಯೂ ವೇಡ್ (30) ಹಾಗೂ ಸ್ಟೀವನ್ ಸ್ಮಿತ್ (0) ಜೋಡಿಯನ್ನು ಅಶ್ವಿನ್ ಪೆವಿಲಿಯನ್‌ಗೆ ಅಟ್ಟಿದರು. 38 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಆಸೀಸ್ ಆರಂಭಿಕ ಆಘಾತ ಎದುರಿಸಿತು. ಈ ವೇಳೆ ಜತೆಯಾದ ಮಾರ್ನಸ್ ಲಬುಶೇನ್ (48ರನ್, 132 ಎಸೆತ, 4 ಬೌಂಡರಿ) ಹಾಗೂ ಟ್ರಾವಿಸ್ ಹೆಡ್ (38ರನ್, 92 ಎಸೆತ, 4 ಬೌಂಡರಿ) ಜೋಡಿ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿತು. ಈ ಜೋಡಿ 4ನೇ ವಿಕೆಟ್‌ಗೆ 86 ರನ್ ಪೇರಿಸಿದ್ದ ವೇಳೆ ಬುಮ್ರಾ ಆಘಾತ ನೀಡಿದರು.

    ಇದನ್ನೂ ಓದಿ: ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

    ಟ್ರಾವಿಡ್ ಹೆಡ್ ನಿರ್ಗಮನದ ಬೆನ್ನಲ್ಲೇ ಲಬುಶೇನ್ ಕೂಡ ಸಿರಾಜ್ ಎಸೆತದಲ್ಲಿ ಶುಭಮಾನ್ ಗಿಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಜತೆಗೆ ಟೆಸ್ಟ್ ಜೀವನದ ಮೊದಲ ಬಲಿ ಪಡೆದರು. ಇದರೊಂದಿಗೆ ಆಸೀಸ್ ತಂಡದ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ಕಂಡಿತು. ಭರವಸೆಯ ಕ್ಯಾಮೆರೊನ್ ಗ್ರೀನ್ (12), ಟೀಮ್ ಪೇನ್ (13), ಪ್ಯಾಟ್ ಕಮ್ಮಿನ್ಸ್ (9) ನಿರಾಸೆ ಅನುಭವಿಸಿದರು. ಬಾಲಂಗೋಚಿ ನಾಥನ್ ಲ್ಯಾನ್ (20ರನ್, 17 ಎಸೆತ, 2 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮಾಡಿದ ಲವಾಗಿ ತಂಡದ ಮೊತ್ತದ 190ರ ಗಡಿ ದಾಟಿತು.

    ಆಸ್ಟ್ರೇಲಿಯಾ: 72.3 ಓವರ್‌ಗಳಲ್ಲಿ 195 (ಮಾರ್ನಸ್ ಲಬುಶೇನ್ 48, ಟ್ರಾವಿಸ್ ಹೆಡ್ 38, ನಾಥನ್ ಲ್ಯಾನ್ 20, ಜಸ್‌ಪ್ರೀತ್ ಬುಮ್ರಾ 56ಕ್ಕೆ 4, ಆರ್.ಅಶ್ವಿನ್ 35ಕ್ಕೆ 3, ಮೊಹಮದ್ ಸಿರಾಜ್ 40ಕ್ಕೆ 2, ರವೀಂದ್ರ ಜಡೇಜಾ 15ಕ್ಕೆ 1). ಭಾರತ : 11 ಓವರ್‌ಗಳಲ್ಲಿ 1 ವಿಕೆಟ್‌ಗೆ 36 (ಶುಭಮಾನ್ ಗಿಲ್ 28*, ಮಿಚೆಲ್ ಸ್ಟಾರ್ಕ್ 14ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts