More

    ಕಳ್ಳತನ ತಡೆಯದ ಪೊಲೀಸರು

    ಇಂಡಿ: ಪೊಲೀಸ್ ಇಲಾಖೆಯವರು ಸಾರ್ವಜನಿಕರ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಭೆಗೆ ಬಂದರೆ ನಾನು ಪ್ರಶ್ನೆ ಮಾಡುತ್ತೇನೆಂಬ ಭಯದಿಂದಲೇ ಅವರು ಸಭೆಗೆ ಬಂದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಹಮ್ಮಿಕೊಂಡ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ನಾಲ್ಕೂ ರಸ್ತೆಗಿಳಿದು ಸಾರ್ವಜನಿಕರಿಗೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ನಗರದಲ್ಲಿ 15 ದಿನದಲ್ಲಿ 13 ಕಳ್ಳತನ ಪ್ರಕರಣಗಳು ನಡೆದಿವೆ. ಪೊಲೀಸರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಮುಂದಿನ ಅಧಿವೇಶನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.

    ಅಧಿಕಾರಿಗಳ ಪರವಾಗಿ ಸಿಬ್ಬಂದಿ ಸಭೆಗೆ ಆಗಮಿಸಿದ್ದನ್ನು ಗಮನಿಸಿದ ಶಾಸಕರು, ಅಧಿಕಾರಿಗಳು ಮಾತ್ರ ಸಭೆಯಲ್ಲಿರಿ, ಸಿಬ್ಬಂದಿ ಇದ್ದರೆ ಹೊರ ಹೋಗಿ ಎಂದು ತಾಕೀತು ಮಾಡಿದರು.

    ರಾಷ್ಟ್ರೀಯ ಹೆದ್ದಾರಿ ಪಕ್ಕದ ಢಾಬಾಗಳಲ್ಲಿ ಅಫೀಮು, ಗಾಂಜಾ ದಂಧೆ ನಡೆಯುತ್ತಿದ್ದು, ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ. ತಾಲೂಕಿನ ಎರಡ್ಮೂರು ಕಡೆ ಸಾರಾಯಿ ತಯಾರಿಸಲಾಗುತ್ತಿದೆ ಎಂಬ ಸುದ್ದಿ ಇದ್ದು, ಅಬಕಾರಿ ಅಧಿಕಾರಿಗಳು ಕೂಡಲೇ ತಡೆಗಟ್ಟಬೇಕೆಂದು ಸೂಚಿಸಿದರು.

    ನ್ಯಾಯಾಲಯದಲ್ಲಿ ಎನ್‌ಜಿಟಿ ಇತ್ಯರ್ಥವಾಗಿದ್ದು, ಮುಂದೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ಈಗಾಗಲೇ ನ್ಯಾಯಾಲಯದಲ್ಲಿ ತೀರ್ಪು ಹೊರಬಿದ್ದಿದ್ದು ಮೇಲಧಿಕಾರಿಗಳು ಭೀಮಾನದಿ ಪಾತ್ರದಲ್ಲಿ ನಾಲ್ಕೈದು ಸ್ಥಳ ಗುರುತಿಸಿ ಅಲ್ಲಿಂದ ಮರಳು ಸಾಗಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿ ಹೇಳುತ್ತಿದ್ದಂತೆ, ಮರಳು ಸಾಗಣೆಯಿಂದ ರಸ್ತೆಗಳೆಲ್ಲ ಹದಗೆಡುತ್ತಿವೆ. ನಮ್ಮ ತಾಲೂಕಿನ ಮರಳಿನಿಂದ ಬರುವ ಟ್ಯಾಕ್ಸ್ ತಾಲೂಕಿನಲ್ಲೇ ಖರ್ಚಾಗುವಂತೆ ಕ್ರಮ ವಹಿಸಿ ಅದರಿಂದಲೇ ರಸ್ತೆ ನಿರ್ಮಿಸಿ ಎಂದು ಶಾಸಕ ಪಾಟೀಲ ಸಲಹೆ ನೀಡಿದರು.

    ತಾಲೂಕಿನ ವಿವಿಧೆಡೆ ಶಾಲೆ ಮಕ್ಕಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು. ಪುರಸಭೆಯಲ್ಲಿ ಅವ್ಯವಹಾರವಾಗದಂತೆ ನೋಡಿಕೊಳ್ಳಿ. ಆಡಳಿತ ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದಲೇ ಪುರಸಭೆಗೆ ಬೀಗ ಜಡಿಯಲಾಗಿದೆ ಎಂದು ಮುಖ್ಯಾಧಿಕಾರಿ ವಿರುದ್ಧ ಅಸಮಾಧಾನಗೊಂಡರು. ಟ್ರಾಫಿಕ್ ಸಿಗ್ನಲ್, ಸಿಸಿಟಿವಿ ರಿಪೇರಿ ಸೇರಿದಂತೆ ಜಂಟಿಯಾಗಿ ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಶಾಸಕ ಹರಿಹಾಯ್ದರು.
    ಅಂಗನವಾಡಿಗಳಲ್ಲಿ 18 ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಕೂಡಲೇ ಭರ್ತಿ ಮಾಡಬೇಕು ಎಂದು ಸೂಚಿಸಿದರು.

    ಮಸಳಿ ರಸ್ತೆ ಮಾಡಿದ ಗುತ್ತಿಗೆದಾರನ ಪರವಾನಗಿ ಬ್ಲಾಕ್ ಲಿಸ್ಟ್‌ಗೆ ಹಾಕಿ, ರಸ್ತೆ ನಿರ್ಮಿಸುವಾಗ ಇದ್ದ ಮೇಲುಸ್ತುವಾರಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
    ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವರದಿ ವಾಚಿಸಿದರು. ತಹಸೀಲ್ದಾರ್ ಬಸವರಾಜ ಐ.ಈ., ತಾಪಂ ಅಧಿಕಾರಿ ಸುನೀಲ್ ಮದ್ದೀನ್, ಕೆಡಿಪಿ ನಾಮನಿರ್ದೇಶನ ಸದಸ್ಯರಾದ ಅದೃಷ್ಯಪ್ಪ ವಾಲಿ, ಅಣ್ಣಪ್ಪ ಮದರಿ, ಹಣಮಂತ ಚಾಬುಕಸವಾರ ಇದ್ದರು.

    ಬೇರೆ ರಾಜ್ಯಕ್ಕೆ ಅಕ್ಕಿ ಸಾಗಣೆ!
    ಆಹಾರ ಇಲಾಖೆ ಹಾಗೂ ಪೊಲೀಸರು ಕಳ್ಳರೊಂದಿಗೆ ಸೇರಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಬೇರೆ ರಾಜ್ಯಕ್ಕೆ ಸಾಗಿಸುತ್ತಿದ್ದಾರೆ ಎಂಬ ಆರೋಪವಿದೆ. ರಾತ್ರಿ 11 ಗಂಟೆ ನಂತರ ಅಕ್ಕಿ ವಾಹನ ಬೇರೆ ರಾಜ್ಯಕ್ಕೆ ಹೋಗುತ್ತಿದೆ ಎಂದು ಶಾಸಕರು ಆಪಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts