More

    ೨೦೧೬ರ ಕಾಯ್ದೆ ಇನ್ನೂ ಅನುಷ್ಠಾನಗೊಂಡಿಲ್ಲ: ಡಾ.ದೀಪ ಬೇಸರ

    ಮಡಿಕೇರಿ: ವಿಕಲಚೇತನರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ೨೦೧೬ರಲ್ಲಿ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಇಲ್ಲಿಯವರೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದು ವಿಷಾದಕರವೆಂದು ನಗರದ ವೈದ್ಯರಾದ ಡಾ.ವಿ.ದೀಪ ಬೇಸರ ವ್ಯಕ್ತಪಡಿಸಿದರು.


    ನಗರದ ಓಂಕಾರ ಸದನದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಶೇಷಚೇತನರನ್ನು ಹಾಡಿ ಹೊಗಳಲಾಗುತ್ತಿದೆಯೇ ಹೊರತು ಅಗತ್ಯ ಗೌರವ ಮತ್ತು ಸೌಲಭ್ಯಗಳನ್ನು ನೀಡುತ್ತಿಲ್ಲವೆಂದು ಆರೋಪಿಸಿದರು.


    ೨೦೧೬ ರ ಕಾಯ್ದೆಯ ಪ್ರಕಾರ ಎಲ್ಲಾ ಸಾರ್ವಜನಿಕ ಕಟ್ಟಡಗಳಲ್ಲಿ ವಿಕಲಚೇತನರ ಸಂಚಾರಕ್ಕೆ ಅನುಕೂಲವಾಗುವಂತೆ ಇಳಿಜಾರು ದಾರಿ ಮತ್ತು ಹಿಡಿದುಕೊಳ್ಳಲು ನೆರವಾಗುವ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದು ೨೦೨೨ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಬೇಕೆನ್ನುವ ನಿಯಮವಿದೆ. ಆದರೆ ಆಸ್ಪತ್ರೆಗಳು, ಕಾಲೇಜುಗಳು, ವಿಶೇಷಚೇತನರ ಕಚೇರಿ, ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್‌ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಕಟ್ಟಡಗಳು ಈ ನಿಯಮವನ್ನು ಸಂಪೂರ್ಣವಾಗಿ ಪಾಲಿಸುತ್ತಿಲ್ಲ ಎಂದು ದೂರಿದರು.


    ಮಡಿಕೇರಿಯಲ್ಲಿರುವ ಜಿಲ್ಲಾ ವಿಕಲಚೇತನರ ಕಚೇರಿಯಲ್ಲೇ ವಿಶೇಷಚೇತನರಿಗೆ ಅನುಕೂಲಕರ ಪರಿಸ್ಥಿತಿ ಇಲ್ಲ. ಇಲ್ಲಿನ ರ‌್ಯಾಂಪ್ ತುಂಬಾ ಕಡಿದಾಗಿದೆ. ಇಳಿಜಾರು ೧:೧೨ ರಷ್ಟು ಇರಬೇಕು. ಆದರೆ ಈ ವೈಜ್ಞಾನಿಕ ನಿಯಮವನ್ನು ಇಲ್ಲಿ ಪಾಲಿಸಿಲ್ಲ. ಬೇರೆಯವರ ಸಹಾಯವಿಲ್ಲದೆ ವಿಕಲಚೇತನರು ಸಂಚರಿಸಲು ಸಾಧ್ಯವಿಲ್ಲ ಎಂದು ಗಮನ ಸೆಳೆದ ಡಾ.ದೀಪ, ಕಚೇರಿಯ ಸ್ಥಳ ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದರು.


    ಕಟ್ಟಡ ನಿರ್ಮಾಣದ ವಿನ್ಯಾಸಗಾರರು ಕೂಡ ವಿಕಲಚೇತನರ ಆದ್ಯತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ವಿಕಲಚೇತನರ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ. ವಿಶೇಷಚೇತನರಿಗಾಗಿ ಕಾರ್ಯಕ್ರಮವನ್ನು ಆಯೋಜಿಸುವಾಗ ಸಭಾಂಗಣದ ವೇದಿಕೆಗೆ ಇಳಿಜಾರು ಮಾರ್ಗವಿರಬೇಕು ಮತ್ತು ಹಿಡಿದುಕೊಳ್ಳಲು ಅನುಕೂಲವಿರಬೇಕು. ಆದರೆ ಇಂದು ನಡೆದಿರುವ ಕಾರ್ಯಕ್ರಮದಲ್ಲಿ ದಿವ್ಯಾಂಗ ಒಕ್ಕೂಟದ ಅಧ್ಯಕ್ಷರನ್ನು ವೇದಿಕೆಗೆ ಎತ್ತಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರ ತಂದಿದೆ ಎಂದು ಡಾ.ದೀಪ ತಿಳಿಸಿದರು.


    ಸನ್ಮಾನ- ಅಸಮಾಧಾನ: ರಾಷ್ಟ್ರಪತಿಗಳು ಹಾಗೂ ಮುಖ್ಯಮಂತ್ರಿಗಳು ಕೂಡ ವಿಕಲಚೇತನರನ್ನು ಗೌರವಿಸಲು ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಾರೆ ಮತ್ತು ಪ್ರೋತ್ಸಾಹಿಸಿದ್ದಾರೆ. ಆದರೆ ಇಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಸನ್ಮಾನ ಮಾಡುವವರೆಗೆ ಕಾಯದೆ ತಮ್ಮ ಪಾಲಿನ ಭಾಷಣ ಮುಗಿಸಿ ತೆರಳಿದ್ದಾರೆ. ಇದು ಸನ್ಮಾನಿತರಿಗೆ ತುಂಬಾ ನೋವನ್ನುಂಟು ಮಾಡಿದೆ. ನಮ್ಮ ಅಹವಾಲುಗಳನ್ನು ಕೇಳಿಸಿಕೊಳ್ಳಲು ಕೂಡ ಯಾರೂ ಇಲ್ಲದ ಪರಿಸ್ಥಿತಿ ಇದೆ ಎಂದ ಅವರು, ಕಚೇರಿ ಮತ್ತಿತರ ಪ್ರದೇಶಗಳಲ್ಲಿ ವಿಕಲಚೇತನರಿಗೆ ಹ್ಯಾಂಡಿಕ್ಯಾಪ್ ಎಂಬ ಪದ ಬಳಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.


    ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಸಲಹಾ ಸಮಿತಿ ಸದಸ್ಯ ಅಜಯ್ ಸೂದ್, ವಕೀಲ ಮನೋಜ್ ಬೋಪಯ್ಯ, ಜಿಲ್ಲಾ ದಿವ್ಯಾಂಗ ಒಕ್ಕೂಟದ ಅಧ್ಯಕ್ಷರಾದ ಈಶ್ವರಿ, ವಿಕಲಚೇತನರ ವಿವಿಧೋದ್ದೇಶ ಸಹಕಾರ ಸಂಘದ ತಿರುಮಲೇಶ್ವರ, ಜಿಲ್ಲಾ ವಿಕಲಚೇತನ ಸಹಾಯವಾಣಿಯ ಮಾಹಿತಿ ಸಲಹೆಗಾರ ಎಚ್.ಎಸ್.ನವೀನ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts