More

    ಸೋಂಕು ಹೆಚ್ಚಿಸುತ್ತಿದೆ ಹೋಮ್ ಐಸೋಲೇಷನ್

    ಹಾವೇರಿ: ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದಲೇ ಸೆಮಿ ಲಾಕ್​ಡೌನ್ ಜಾರಿಯಲ್ಲಿದ್ದರೂ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣವಾಗುತ್ತಿದೆಯಾ ಎಂಬ ಸಂಶಯ ಜನರಲ್ಲಿ ಮೂಡತೊಡಗಿದೆ.

    ಕರೊನಾ ಸೋಂಕು ಪತ್ತೆಯಾದ ಕೂಡಲೆ ಸೋಂಕಿತರನ್ನು ಭೇಟಿಯಾಗಿ ಅವರ ತಪಾಸಣೆ ನಡೆಸಿ ರೋಗದ ಲಕ್ಷಣವುಳ್ಳವರನ್ನು ಆಸ್ಪತ್ರೆ, ಕೇರ್ ಸೆಂಟರ್​ಗೆ ದಾಖಲಿಸುವ ಕೆಲಸವನ್ನು ಕಟ್ಟುನಿಟ್ಟಾಗಿ ಆರೋಗ್ಯ ಇಲಾಖೆ ಮಾಡದೇ ಇರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ.

    ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ವಿಷಯ ಗಮನಕ್ಕೆ ಬಂದಿದೆ. ಅವರು ಸಹ ಹೋಮ್ ಐಸೋಲೇಷನ್​ನಲ್ಲಿರುವ ಕರೊನಾ ಲಕ್ಷಣವುಳ್ಳವರು ಏಕಾಏಕಿ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಈ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ, ಹೋಮ್ ಐಸೋಲೇಷನ್​ನಿಂದ ಸೋಂಕು ಹೆಚ್ಚಲು ಕಾರಣವಾಗಿದೆ. ಆದ್ದರಿಂದ ಹೋಮ್ ಐಸೋಲೇಷನ್​ದಲ್ಲಿದ್ದವರು ಕೂಡಲೆ ಕರೊನಾ ಕೇರ್ ಸೆಂಟರ್​ಗೆ ಬರಬೇಕು. ಅಲ್ಲಿ ಅವರಿಗೆ ರೋಗದ ಲಕ್ಷಣವಿದ್ದರೆ ಚಿಕಿತ್ಸೆ ನೀಡುವ ಕೆಲಸವಾಗುತ್ತದೆ. ಉತ್ತಮ ಆಹಾರ, ಉಳಿದುಕೊಳ್ಳಲು ಬೆಡ್ ಸೇರಿ ಎಲ್ಲ ರೀತಿಯ ವ್ಯವಸ್ಥೆಯನ್ನು ಕರೊನಾ ಕೇರ್ ಸೆಂಟರ್​ನಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

    ಆದರೆ, ಸಚಿವರು ಹೇಳಿದ ವಿಷಯವನ್ನು ಜಿಲ್ಲಾಡಳಿತ ಇನ್ನೂವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಸಚಿವರ ಹೇಳಿ ಹೋದ ನಂತರವೂ ಹೋಮ್ ಐಸೋಲೇಷನ್ ಪ್ರಕರಣಗಳು ಹೆಚ್ಚುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ. ನಿತ್ಯ 200ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅದರಲ್ಲಿ ಗಂಭೀರ ಲಕ್ಷಣವಿದ್ದವರು ತಾವಾಗಿಯೇ ಚಿಕಿತ್ಸೆ ಬಯಸಿ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಯಾವೊಬ್ಬ ಸೋಂಕಿತರನ್ನೂ ಭೇಟಿಯಾಗಿ ಆರೋಗ್ಯ ತಪಾಸಣೆ ಕಾರ್ಯವನ್ನು ಕಟ್ಟುನಿಟ್ಟಾಗಿ ನಡೆಸುತ್ತಿಲ್ಲ. ಶನಿವಾರದ ವೇಳೆಗೆ ಜಿಲ್ಲೆಯಲ್ಲಿ 1,796 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಹೋಮ್ ಐಸೋಲೇಷನ್​ನಲ್ಲಿರುವವರ ಸಂಖ್ಯೆ 930ರಷ್ಟಿದ್ದರೆ, ಕೋವಿಡ್ ಕೇರ್ ಸೆಂಟರ್, ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆ 866ರಷ್ಟಿದೆ.

    ಬೆಡ್​ಗಳ ಕೊರತೆ ಇಲ್ಲ

    ಜಿಲ್ಲಾಸ್ಪತ್ರೆ, 6 ತಾಲೂಕಾಸ್ಪತ್ರೆ, 6 ಖಾಸಗಿ ಆಸ್ಪತ್ರೆ, 7 ಕೋವಿಡ್ ಕೇರ್ ಸೆಂಟರ್ ಸೇರಿ ಒಟ್ಟು 1,493 ಬೆಡ್​ಗಳಿವೆ. ಅದರಲ್ಲಿ ಶನಿವಾರದ ವೇಳೆಗೆ 1,078 ಬೆಡ್​ಗಳು ಮಾತ್ರ ಭರ್ತಿಯಿದ್ದು, ಇನ್ನೂ 415 ಬೆಡ್​ಗಳು ಖಾಲಿ ಇವೆ. ಆದರೂ ಸೋಂಕಿನ ಲಕ್ಷಣವುಳ್ಳವರನ್ನು ಪತ್ತೆ ಮಾಡಿ ಆಸ್ಪತ್ರೆ, ಕೇರ್ ಸೆಂಟರ್​ಗಳಿಗೆ ದಾಖಲಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ.

    ಜಿಲ್ಲೆಯಲ್ಲಿ ಕೆಲವೊಂದು ಪಾಸಿಟಿವ್ ಪ್ರಕರಣಗಳಲ್ಲಿ ಸೋಂಕಿತರಿಗೆ ವಾರ್ ರೂಮ್ಂದ ನಿಮಗೆ ಪಾಸಿಟಿವ್ ಬಂದಿದೆ. ಕರೊನಾ ಲಕ್ಷಣಗಳಿವೆಯಾ ಎಂದು ಕೇಳುತ್ತಾರೆ. ಅವರು ಹೋಮ್ ಐಸೋಲೇಷನ್ ಆಗುತ್ತೇವೆ ಎಂದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ತಪಾಸಣೆ ನಡೆಸಿ ಮೆಡಿಸಿನ್ ಕಿಟ್ ಕೊಡ್ತಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಪಾಸಿಟಿವ್ ಕಂಡುಬಂದ ವ್ಯಕ್ತಿಯ ಮನೆಗೆ ಯಾವ ಸಿಬ್ಬಂದಿಯೂ ಭೇಟಿ ನೀಡುತ್ತಿಲ್ಲ. ಮೆಡಿಸಿನ್ ಕಿಟ್ ಸಹ ಕೊಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಕೊನೆಗೆ ರೋಗ ಉಲ್ಬಣಗೊಂಡ ನಂತರ ರೋಗಿಗಳು ಆಸ್ಪತ್ರೆಯ ಬಾಗಿಲು ತಟ್ಟುತ್ತಿದ್ದಾರೆ. ಹೀಗೆ ತಡವಾಗಿ ಆಸ್ಪತ್ರೆಗೆ ಬಂದ ಅನೇಕ ರೋಗಿಗಳಿಗೆ ಚಿಕಿತ್ಸೆಯೂ ಫಲಿಸುತ್ತಿಲ್ಲ. ಇದರ ಪರಿಣಾಮದಿಂದಲೇ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

    ಹೋಮ್ ಐಸೋಲೇಷನ್​ನವರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ವಾಚ್​ನಲ್ಲಿ ಭೇಟಿ ನೀಡಿದ ಫೋಟೋ ಅಪ್​ಲೋಡ್ ಮಾಡಲು ಎಲ್ಲರೂ ಕ್ರಮ ಕೈಗೊಳ್ಳಲು ಈಗಾಗಲೇ ಟಿಎಚ್​ಒಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಿಇಒ ಅವರು ವಿಡಿಯೋ ಸಂವಾದ ನಡೆಸಿ ಪಾಸಿಟಿವ್ ಬಂದವರ ಮನೆ ಪರಿಶೀಲಿಸಿ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಇದ್ದರೆ ಕೇರ್ ಸೆಂಟರ್​ಗೆ ದಾಖಲಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

    | ಡಾ. ಎಂ. ಜಯಾನಂದ, ಪ್ರಭಾರ ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts