More

    ಪ್ಲಾಸ್ಟಿಕ್ ಹೆಚ್ಚಳ, ನಿರ್ವಹಣೆ ವಿಫಲ, ಮೂಕಪ್ರಾಣಿಗಳ ಪ್ರಾಣಕ್ಕೆ ಸಂಚಕಾರ

    ಹರೀಶ್ ಮೋಟುಕಾನ ಮಂಗಳೂರು

    ನಗರ ಪ್ರದೇಶದಲ್ಲಿ ಎಲ್ಲ ಕಡೆ ಪ್ಲಾಸ್ಟಿಕ್ ಬಳಕೆ ಮತ್ತೆ ಹೆಚ್ಚಾಗಿದೆ. ಆದರೆ ನಿರ್ವಹಣೆ ಸಮಪರ್ಕವಾಗಿ ನಡೆಯುತ್ತಿಲ್ಲ. ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್ ಎಸೆಯುವುದರಿಂದ ಮೂಕಪ್ರಾಣಿಗಳ ಜೀವಕ್ಕೂ ಹಾನಿಯಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ತಿಂದ ದನ, ಕರು, ನಾಯಿ ಮೊದಲಾದ ಪ್ರಾಣಿಗಳ ನರಳಾಟ ಕೇಳುವವರೇ ಇಲ್ಲದಂತಾಗಿದೆ.

    ಮಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆಗೆ ನಿಷೇಧವಿದೆ. ಎರಡು ವರ್ಷದ ಹಿಂದೆ ಕಟ್ಟುನಿಟ್ಟಾಗಿ ಜಾರಿಯಾದ ಆದೇಶ ಈಗ ಸಡಿಲವಾಗಿದೆ. ಸಾಮಗ್ರಿಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿ ಕೊಡುವುದು ಹೆಚ್ಚಳವಾಗಿದೆ. ಬಳಸಿದ ಪ್ಲಾಸ್ಟಿಕ್ ಚೀಲಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇವೆಲ್ಲವೂ ಗೋವುಗಳ ಉದರ ಸೇರಿ ಅವುಗಳ ಪ್ರಾಣ ತೆಗೆಯುತ್ತಿವೆ.
    ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಎಸೆದ ಅನ್ನ, ತಿಂಡಿಯ ಪರಿಮಳಕ್ಕೆ ನಾಯಿ, ಗೋವುಗಳು ಅವನ್ನು ಪ್ಲಾಸ್ಟಿಕ್ ಸಮೇತ ತಿನ್ನುತ್ತವೆ. ಹೀಗೆ ತಿಂದ ಪ್ಲಾಸ್ಟಿಕ್ ಕರಗದೆ ಹೊಟ್ಟೆಯಲ್ಲೇ ಶೇಖರಣೆಯಾಗುತ್ತದೆ. ಕ್ರಮೇಣ ವಿವಿಧ ರೀತಿಯ ಕಾಯಿಲೆಗೆ ಕಾರಣವಾಗುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸುತ್ತಿದ್ದರೂ ಸಂಬಂಧಿತ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ.

    ರೋಗಕ್ಕೆ ತುತ್ತಾಗುವ ಜಾನುವಾರುಗಳು: ಎರಡು ವರ್ಷಗಳ ಹಿಂದೆ ಬೈಕಂಪಾಡಿ, ಪಣಂಬೂರು ಪರಿಸರದಲ್ಲಿ ಸುತ್ತಾಡುತ್ತಿದ್ದ ಗೂಳಿ ಕೊಂಬು ಕ್ಯಾನ್ಸರ್‌ನಿಂದ ಮೃತಪಟ್ಟಿತ್ತು. ಇದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ 20 ಕೆಜಿಗೂ ಅಧಿಕ ಪ್ಲಾಸ್ಟಿಕ್ ಮತ್ತು ಲೋಹದ ವಸ್ತುಗಳು ಪತ್ತೆಯಾಗಿದ್ದವು. ಬೈಕಂಪಾಡಿಯ ಗೂಳಿಯ ಕೊಂಬಿನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್‌ಗೆ ಅದು ತಿಂದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಾಸಾಯನಿಕ ಮಿಶ್ರಿತ ವಸ್ತುಗಳು ಕಾರಣವಾಗಿತ್ತು. ಕಾವೂರು ಬೊಲ್ಪುಗುಡ್ಡೆಯಲ್ಲಿ ಮೂರ್ನಾಲ್ಕು ಕುಟುಂಬದವರು ಸುಮಾರು 50ಕ್ಕೂ ಅಧಿಕ ಗೋವುಗಳನ್ನು ಸಾಕುತ್ತಿದ್ದಾರೆ. ಬೆಳಗ್ಗೆ ಅದನ್ನು ಮೇರಿಹಿಲ್ ಪರಿಸರದಲ್ಲಿ ಮೇಯಲು ಬಿಡುತ್ತಾರೆ. ಅಲ್ಲಿ ರಸ್ತೆ ಬದಿ ಎಸೆದಿರುವ ಪ್ಲಾಸ್ಟಿಕ್ ತ್ಯಾಜ್ಯ ಈ ಗೋವುಗಳು ತಿನ್ನುತ್ತಿವೆ.

    ಮನೆಯ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ರಸ್ತೆಗೆ, ನದಿ, ತೋಡುಗಳಿಗೆ ಎಸೆಯುವ ನಾಗರಿಕರು ಇನ್ನೂ ಮಂಗಳೂರಿನಲ್ಲಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ. ಸಿಸಿ ಕ್ಯಾಮರಾದಲ್ಲಿ ಇಂಥವರನ್ನು ಗುರುತಿಸಿ ಸಂಚಾರ ಉಲ್ಲಂಘನೆ ಮಾದರಿಯಲ್ಲಿ ಅವರಿಗೆ ದುಬಾರಿ ದಂಡ ವಿಧಿಸಬೇಕು. ಆಗ ಮಾತ್ರ ಸ್ವಚ್ಛತೆಯ ಅರಿವು ಮೂಡಬಹುದು.

    ರಘುರಾಜ್ ಕದ್ರಿ, ಉಪನ್ಯಾಸಕ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಬಳಿಕ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದರ ವಿರುದ್ಧ ಕಾರ್ಯಾಚರಣೆ ನಡೆಯದೆ ಒಂದು ವರ್ಷ ಆಗಿದೆ. ಪಾಲಿಕೆ, ಪರಿಸರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆಗೆ ಸೂಚನೆ ನೀಡಲಾಗುವುದು.

    ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts