More

    ಮಳೆಗಾಲದ ವಿಶೇಷ ಖಾದ್ಯ ತಯಾರಿಯ ಈ ವಸ್ತುವಿಗೆ ಹೆಚ್ಚಿದ ಬೇಡಿಕೆ

    ಶೃಂಗೇರಿ: ಆಷಾಢ ಮಾಸದಲ್ಲಿ ನೆಲದಿಂದ ಚಿಗುರೊಡೆದು ಹಸಿರು ಹಾಸುವ ಕೆಸುಗಳು ಒಂದೆಡೆ, ಮರಗಳಲ್ಲಿ ಅಲ್ಲಲ್ಲಿ ಇಣಕುವ ಮರಕೆಸು ಇನ್ನೊಂದೆಡೆ…
    ನೆಲದಲ್ಲಿರುವ ಎಲೆಗಳನ್ನು ಆಯ್ದು ನೀರಿನಲ್ಲಿ ತೊಳೆದು ನೆನಸಿಟ್ಟ ಹೆಸರುಬೇಳೆ, ಅಕ್ಕಿ, ಒಣಮೆಣಸು, ಹುಳಿ, ತೆಂಗಿನ ತುರಿ ಇತ್ಯಾದಿ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ಅರೆದ ಖಾರವನ್ನು ಮಣೆ ಮೇಲಿಟ್ಟು ಒಂದು ಎಲೆ ಬಳಿಕ ಮತ್ತೊಂದು ಎಲೆಗೆ ಖಾರ ಲೇಪಿಸಿ ಅದನ್ನು ಮಡಚಿ ಪತ್ರೊಡೆ ಮಾಡುವಲ್ಲಿ ನಿರತರಾಗುತ್ತಿದ್ದ ಮನೆಯ ಹಿರಿಯಜ್ಜಿ… ಬಿಸಿ ಬಿಸಿಯಾದ ಗಂಜಿ ಜತೆ ಪತ್ರೊಡೆ ಸವಿಯಲು ಕಾದು ಕುಳಿತ್ತಿದ್ದ ಮಕ್ಕಳ ಗುಂಪು… ಸೇವಿಸಿದ ಬಳಿಕ ಕೊಂಚ ಬಾಯಿ ತುರಿಸಿದ್ದರೆ ಬೆಲ್ಲ ಸವಿಯುತ್ತಿದ್ದ ಸಮಯ… ಈಗ ಕಾಲ ಬದಲಾಗಿದ್ದು, ಮಾರುಕಟ್ಟೆಗಳಲ್ಲಿ ಸಿಗುವ ಪತ್ರೊಡೆಗಳಿಗೆ ಬಲು ಬೇಡಿಕೆ ಇದೆ.
    ಕಾಡುಕೆಸು, ಕಪ್ಪುಕೆಸು, ಹಾಲುಕೆಸು, ಬೀಳ್ಗೆಸು, ಮರಗೆಸು, ಕಲ್ಲುಕೆಸು ಸಹಿತ ಒಂಬತ್ತು ವಿಧದ ಕೆಸುಗಳಿವೆ. ಜಗತ್ತಿನಲ್ಲಿ 87 ಬಗೆಯ ಕೆಸುಗಳಿವೆಯಂತೆ. ಮಲೆನಾಡಿನಲ್ಲಿ ಪತ್ರೊಡೆ, ಕೆಸುವಿನ ಸಾರು, ಗೊಜ್ಜು ವಿಶೇಷವಾದ ಅಡುಗೆ. ಕೆಸುವಿನಿಂದ ಮಾಡಿದ ಆಹಾರ ದೇಹದ ಉಷ್ಣ ಹೆಚ್ಚಿಸುತ್ತದೆ.
    ಕೆಸುವಿನ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೋಲೇಟ್, ಮ್ಯಾಂಗನೀಸ್, ತಾಮ್ರ, ಕಬ್ಬಿಣಾಂಶ, ನಾರಿನಾಂಶಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮಧುಮೇಹಿಗಳಿಗೆ, ರಕ್ತದೊತ್ತಡ ಕಡಿಮೆ ಮಾಡಲು ಹಾಗೂ ತ್ವಚೆ ಆರೋಗ್ಯಕ್ಕೆ ಉಪಯುಕ್ತವಾದ ಕೆಸುವನ್ನು ಬಡವರ ಸೊಪ್ಪು ಎಂದೇ ಕರೆಯಲಾಗುತ್ತದೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕಗಳಲ್ಲಿ ಮರಕೆಸುವಿಗೆ ಹೆಚ್ಚು ಬೇಡಿಕೆ ಇದೆ. ವರ್ಷಕ್ಕೆ ಒಂದು ಬಾರಿ ಕೆಸುವಿನಿಂದ ತಯಾರಾಗುವ ಪದಾರ್ಥ ಸೇವಿಸಿದರೆ ಒಳ್ಳೆಯದು.
    ಭೂಮಿಯಲ್ಲಿ ಹುಟ್ಟಿದ ಮೊದಲ ಸಸ್ಯ ಎಂಬ ಪ್ರತೀತಿ ಇರುವ ಕೆಸು ಹವಾಯಿ ದ್ವೀಪವಾಸಿಗಳಿಗೆ ಅತ್ಯಂತ ಪೂಜನೀಯ. ಆಕಾಶ ಪಿತನಿಂದ ನಕ್ಷತ್ರ ಮಾತೆಗೆ ಸಂತಾನ ಪಡೆಯುವ ಅಪೇಕ್ಷೆ ಉಂಟಾಯಿತು. ನಕ್ಷತ್ರ ಮಾತೆ ಗರ್ಭವತಿಯಾದಾಗ ಭೂಮಿತಾಯಿ ಸಿಟ್ಟು ಮಾಡಿಕೊಂಡಾಗ ನಕ್ಷತ್ರ ಮಾತೆ ಗರ್ಭಪಾತವಾಯಿತು. ಸತ್ತ ಭ್ರೂಣವನ್ನು ಸಮಾಧಿ ಮಾಡಿದಾಗ ಅದರ ಮೇಲೆ ಗಿಡ ಹುಟ್ಟಿತ್ತು. ಅದೇ ಕೆಸುವಿನ ಗಿಡ. ನಕ್ಷತ್ರ ಮಾತೆ ಮತ್ತೆ ಗರ್ಭವತಿಯಾದಾಗ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಆಗ ಭೂಮಿ ತಾಯಿ ಕೆಸುವಿನ ಗಿಡದಲ್ಲಿ ಎಲ್ಲ ಸಸ್ಯಗಳ ಸತ್ವ ತುಂಬಿಸಿ ಮಗುವಿಗೆ ನೀಡಿದಾಗ ಮಗು ಸದೃಢವಾಗಿ ಬೆಳೆಯಿತು ಎಂಬುದು ಜನಪದರ ನಂಬಿಕೆ.
    ಆಯುಷ್ ಸಚಿವಾಲಯ ಪ್ರಕಟಿಸಿರುವ ಆಯುಷ್ ವೈದ್ಯ ಪದ್ಧತಿಯ ಆರೋಗ್ಯಪೂರ್ಣ ಆಹಾರ ಪಟ್ಟಿಯ 26 ಸಾಂಪ್ರದಾಯಿಕ ಖಾದ್ಯದಲ್ಲಿ ಪತ್ರೊಡೆ ಸ್ಥಾನ ಪಡೆದಿದೆ. ೆನಾಲ್ಸ್, ಟ್ಯಾನಿನ್, ಬೀಟಾ ಕೆರೋಟಿನ್, ಹಿಮೊಗ್ಲೋಬಿನ್ ಇತ್ಯಾದಿ ದೇಹಕ್ಕೆ ಉಪಯೋಗವಾಗುವ ಕೆಸುಗಳು ಕೇರಳ, ಗುಜರಾತ್, ಗೋವಾ ಇತ್ಯಾದಿ ಪ್ರದೇಶಗಳಲ್ಲಿ ಪಾಥ್ರೋಡ್, ತರೋ, ಅಳುವಡಿ, ಪತ್ರವಡಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts