More

    ಮಾದಪ್ನ ಪೂಜೆಗೆ ಬಂದೋ..

    ಕಿರಣ್ ಮಾದರಹಳ್ಳಿ ಚಾಮರಾಜನಗರ
    ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ..ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ..ಬೆಟ್ಟದ್ಮಾವೇವ ಗತಿ ಎಂದು ಅವರಿನ್ನೂ ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ..

    ಮಲೆ ಮಹದೇಶ್ವರರ ಕುರಿತಾದ ‘ಸೋಜುಗಾದ ಸೂಜು ಮಲ್ಲಿಗೆ’..ಗೀತೆ ಸಾಲುಗಳಂತೆ ಹಟ್ಟಿ ಹಂಬಲವ ಬಿಟ್ಟು ಮಾದಪ್ನ ಪೂಜೆಗೆ ಲಕ್ಷ ಲಕ್ಷ ಭಕ್ತರು ಶ್ರೀಕ್ಷೇತ್ರಕ್ಕೆ ಬರುತ್ತಿದ್ದಾರೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೂನ್‌ನಲ್ಲಿ 4.5 ಲಕ್ಷ ಭಕ್ತರು, ಜುಲೈನಲ್ಲಿ 6.5 ಲಕ್ಷ ಭಕ್ತರು, ಆಗಸ್ಟ್‌ನಲ್ಲಿ 5 ಲಕ್ಷ ಭಕ್ತರು, ಸೆಪ್ಟೆಂಬರ್‌ನಲ್ಲಿ 6 ಲಕ್ಷ ಭಕ್ತರು, ಅಕ್ಟೋಬರ್‌ನಲ್ಲಿ 5 ಲಕ್ಷ ಭಕ್ತರು, ನವೆಂಬರ್‌ನಲ್ಲಿ 5 ಲಕ್ಷ ಭಕ್ತರು ಮಾಯ್ಕರ ಮಾದಪ್ಪನ ದರ್ಶನ ಪಡೆದಿದ್ದಾರೆ. ವರ್ಷಾಂತ್ಯವಾಗಿರುವ ಡಿಸೆಂಬರ್‌ನಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ. ಬಡಭಕ್ತರ ಪಾಲಿನ ದೈವ ಎಂದೇ ಕರೆಸಿಕೊಳ್ಳುವ ಶ್ರೀಮಲೆ ಮಹದೇಶ್ವರರ ಪವಾಡ ಕ್ಷೇತ್ರದತ್ತ ಭಕ್ತರು ಆಕರ್ಷಿತರಾಗಲು ಭಕ್ತಿಯೊಂದೇ ಕಾರಣ. ಸಂಕ್ರಾಂತಿ, ಯುಗಾಗಿ, ಕಾರ್ತಿಕ ಮಾಸ, ಮಹಾ ಶಿವರಾತ್ರಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕ. ವಿಶೇಷ ದಿನಗಳಲ್ಲಂತೂ ನೂರಾರು ಕಿ.ಮೀಗಳಿಂದ ಭಕ್ತರು ಪಾದಯಾತ್ರೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.

    ಮಾದಪ್ನ ಪೂಜೆಗೆ ಬಂದೋ..

    ಮೂರನೇ ದಿನಕ್ಕೆ ಕೋಟಿ ಒಡೆಯ ಮಾದಪ್ಪ:
    ಸಾಲು ಸಾಲು ರಜೆಗಳು ಇರುವ ಕಾರಣ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಗುಲದಲ್ಲಿ ನಡೆಯುವ ಉತ್ಸವ, ಲಾಡು ವಿತರಣೆ ಮತ್ತು ಇತರೆ ಸೇವೆಗಳಲ್ಲಿ 1.29 ಕೋಟಿ ರೂ. ಆದಾಯ ಸಿಕ್ಕಿದೆ.
    ವಿಶೇಷ ಕೌಂಟರ್ ಪ್ರವೇಶ ಶುಲ್ಕದಿಂದ 40,86,150 ರೂ., ಲಾಡು ಪ್ರಸಾದ ಮಾರಾಟದಿಂದ 25,67,650 ರೂ., ಮಾಹಿತಿ ಕೇಂದ್ರದಿಂದ 5,37,200 ರೂ., ಅಕ್ಕಿ ಸೇವೆಯಿಂದ 3,17,900 ರೂ., ವಿವಿಧ ಸೇವೆಗಳಿಂದ 3,05,200 ರೂ., ಪುದುವಟ್ಟುವಿನಿಂದ 3,01,118 ರೂ. ಚಿನ್ನ, ಬೆಳ್ಳಿ ತೇರಿನ ಉತ್ಸವ, ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾದಿಗಳಿಂದ 44,17,445 ರೂ. ಹಾಗೂ ತೀರ್ಥ, ಬ್ಯಾಗ್, ಕ್ಯಾಲೆಂಡರ್ ಮಾರಾಟ ಇನ್ನಿತರ ಮೂಲಗಳಿಂದ ಒಟ್ಟು 1,29,26,708 ರ. ಆದಾಯ ಬೊಕ್ಕಸಕ್ಕೆ ಬಂದಿದೆ.

    ಮಾದಪ್ನ ಪೂಜೆಗೆ ಬಂದೋ..

    ಶಕ್ತಿ ಯೋಜನೆಯೂ ಕಾರಣ:
    ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲು ಶಕ್ತಿ ಯೋಜನೆಯೂ ಕಾರಣವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಸಿಕ್ಕ ಬಳಿಕ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇವುಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ಎಲ್ಲರ ನೆಚ್ಚಿನ ಯಾತ್ರಾ ಸ್ಥಳವಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ ಜಿಲ್ಲೆಗಳಿಂದ ಬರುತ್ತಿರುವ ಮಹಿಳಾ ಭಕ್ತೆಯರು ಮಾದೇವನಿಗೆ ನಮಿಸಿ ಊರುಗಳಿಗೆ ಮರಳುತ್ತಿದ್ದಾರೆ. ತಂಡೋಪ ತಂಡವಾಗಿ ಆಗಮಿಸುತ್ತಿರುವುದು ಭಕ್ತರ ಸಂಖ್ಯೆಯನ್ನು ಹೆಚ್ಚು ಮಾಡಿದೆ. ತುಮಕೂರು, ರಾಮನಗರ, ಬೆಂಗಳೂರು, ಮಂಡ್ಯ ಜಿಲ್ಲೆಗಳಿಗೆ ಕೇಂದ್ರವಾಗಿರುವ ಕೊಳ್ಳೇಗಾಲ ಬಸ್ ನಿಲ್ದಾಣ ರಾತ್ರಿಯಾದರೂ ಪ್ರಯಾಣಿಕರಿಂದ ಗಿಜಿಗುಡುತ್ತಿದೆ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಬಸ್‌ಗಳು ಕೊಳ್ಳೇಗಾಲದಿಂದಲೇ 85 ಟ್ರಿಪ್‌ಗಳನ್ನು ಮಾಡುತ್ತಿವೆ. ಶಕ್ತಿ ಯೋಜನೆ ಜಾರಿಯಾದ ಪ್ರಾರಂಭಿಕ ದಿನಗಳಲ್ಲಿ ಸೀಟಿಗಾಗಿ ಜಗಳ, ಬಸ್ ಹತ್ತಲು ನೂಕುನುಗ್ಗಲು ಉಂಟಾಗುತ್ತಿತ್ತು. ಇಂತಹ ಘಟಕ ಈಗ ಮತ್ತಷ್ಟು ಹೆಚ್ಚಾಗಿದೆ. ಆದರೆ ಇವೆಲ್ಲವೂ ಈಗ ಪ್ರಯಾಣಿಕರಿಗೆ ಸಾಮಾನ್ಯವಾಗಿಬಿಟ್ಟಿವೆ.

    ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇದಕ್ಕೆ ಅಗತ್ಯವಿರುವ ಸಾರಿಗೆ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ನೀಡುತ್ತಿದೆ.
    ಅಶೋಕ್‌ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts