More

    ಆಸ್ತಿ ಕರ ಸಂಗ್ರಹದಲ್ಲಿ ಏರಿಕೆ

    ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲೂ ಹು-ಧಾ ಮಹಾನಗರ ಪಾಲಿಕೆ 2020-21ನೇ ಸಾಲಿನಲ್ಲಿ ಆಸ್ತಿ ಕರ ಸಂಗ್ರಹದಲ್ಲಿ ಏರಿಕೆ ದಾಖಲಿಸಿದೆ.

    2019-20ನೇ ಸಾಲಿನ ಡಿಸೆಂಬರ್ (2019) ಅಂತ್ಯಕ್ಕೆ ಆಸ್ತಿ ತೆರಿಗೆ ಮೂಲಕ 49.55 ಕೋಟಿ ರೂ. ಆದಾಯ ಸಂಗ್ರಹಿಸಲಾಗಿತ್ತು. 2020-21ನೇ ಸಾಲಿನ ಡಿಸೆಂಬರ್ (2020) ಅಂತ್ಯಕ್ಕೆ 57.03 ಕೋ.ರೂ. ಸಂಗ್ರಹಿಸಲಾಗಿದೆ. ಒಟ್ಟಾರೆ 7.48 ಕೋಟಿ ಹೆಚ್ಚಳವಾಗಿದೆ.

    ಇದಕ್ಕೆ ಕಾರಣವಾಗಿದ್ದು ಆಸ್ತಿ ತೆರಿಗೆ ದರ ಹೆಚ್ಚಿಸಿದ್ದು. ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಹು-ಧಾ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯಲ್ಲಿ ವಾಸದ ಕಟ್ಟಡಗಳಿಗೆ ಶೇ. 20ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ. 30ರಷ್ಟು, ವಾಸೇತರ-ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳಿಗೆ ಶೇ. 25ರಷ್ಟು ಹಾಗೂ ಖುಲ್ಲಾ ಜಾಗಗಳಿಗೆ ಶೇ. 30ರಷ್ಟು ಏರಿಕೆ ಮಾಡಿ ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಗೊಂಡಿತ್ತು. ನಾಗರಿಕರಷ್ಟೇ ಅಲ್ಲ, ವರ್ತಕರು, ಉದ್ಯಮಿಗಳು ಆಸ್ತಿ ತೆರಿಗೆ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಆರೇ ದಿನಗಳಲ್ಲಿ ಪಾಲಿಕೆ ಆಯುಕ್ತರು ಹೊಸ ಆದೇಶ ಹೊರಡಿಸಿ ಏರಿಕೆಯನ್ನು ತುಸು ತಗ್ಗಿಸಿದ್ದರು. ಕೊನೆಯಲ್ಲಿ ಹು-ಧಾ ಅವಳಿ ನಗರದಲ್ಲಿ ವಾಸದ ಕಟ್ಟಡಗಳ ಮೇಲೆ ಶೇ. 15ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ. 20, ವಾಸೇತರ ಮತ್ತು ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ. 20 ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25ರಷ್ಟು ಏರಿಕೆ ಅನ್ವಯವಾಗಿದೆ.

    ಈ ಏರಿಕೆಯಿಂದ ಪಾಲಿಕೆ ಪ್ರಸಕ್ತ ಸಾಲಿನ ಮಾರ್ಚ್ (2021) ಅಂತ್ಯದವರೆಗೆ ಆಸ್ತಿ ತೆರಿಗೆಯಿಂದ 93 ಕೋ.ರೂ. ಸಂಗ್ರಹ ಗುರಿ ಇಟ್ಟುಕೊಂಡಿದೆ. ಕಳೆದ ಸಾಲಿನಲ್ಲಿ 78.89 ಕೋಟಿ ಗುರಿ ಇತ್ತು. ವಾಸದ ಕಟ್ಟಡ, ವಾಣಿಜ್ಯ, ವಾಸೇತರ-ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳು ಹಾಗೂ ಖುಲ್ಲಾ ಜಾಗ ಸೇರಿ ಅವಳಿ ನಗರದಲ್ಲಿ ಸುಮಾರು 2.85 ಲಕ್ಷ ಆಸ್ತಿಗಳಿವೆ.

    ಹಿಂದೆಲ್ಲ ಆಯಾ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಅಂತ್ಯದೊಳಗೆ ಪಾವತಿಸಿದರೆ ಶೇ. 5 ರಿಯಾಯಿತಿ ನೀಡಲಾಗುತ್ತಿತ್ತು. ಈ ವರ್ಷ ಕರೊನಾ, ಲಾಕ್​ಡೌನ್ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಶೇ. 45-50ರಷ್ಟು ಆಸ್ತಿ ಮಾಲೀಕರು ರಿಯಾಯಿತಿ ಅವಧಿಯಲ್ಲಿಯೇ ತೆರಿಗೆ ಪಾವತಿಸಿದ್ದಾರೆ.

    ಹು-ಧಾ ಮಹಾನಗರ ಪಾಲಿಕೆಗೆ ಬಹುದೊಡ್ಡ ಆದಾಯ ಮೂಲ ಆಸ್ತಿ ತೆರಿಗೆ. ಇದರಲ್ಲಿ ಹೆಚ್ಚಳ ಕಂಡಿರುವ ಪಾಲಿಕೆ ಉಳಿದ ಆದಾಯ ಮೂಲಗಳಲ್ಲಿ ಹಿನ್ನಡೆ ಅನುಭವಿಸಿದೆ. ಕಟ್ಟಡ ನಿರ್ವಣಕ್ಕೆ ಪರವಾನಗಿ ಹಾಗೂ ಮುಕ್ತಾಯ ಪ್ರಮಾಣ ಪತ್ರ ನೀಡುವ ಯೋಜನಾ ಶಾಖೆಯು 10 ಕೋ. ಗುರಿ ಇಟ್ಟು ಕೊಂಡಿದೆ. ಡಿಸೆಂಬರ್ ಅಂತ್ಯದವರೆಗೆ 8.3 ಕೋ. ಸಂಗ್ರಹಿಸಿದೆ. ಜಾಹೀರಾತು ಕರ 1.45 ಕೋ. ಬರಬೇಕು. ಆದರೆ, ಸಂದಾಯ ಆಗಿರುವುದು 15.64 ಲಕ್ಷ ರೂ. ಮಾತ್ರ. ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳಿಂದ ವಸೂಲಾಗಬೇಕಿರುವ ಸ್ಟಾಲೇಜ್ ಫೀ (ಮಾಸಿಕ ಬಾಡಿಗೆ) ಗುರಿ 6.10 ಕೋ. ಡಿಸೆಂಬರ್ ಅಂತ್ಯಕ್ಕೆ 2.78 ಕೋ. ಸಂಗ್ರಹವಾಗಿದೆ. ಟ್ರೇಡ್ ಲೈಸನ್ಸ್​ನಲ್ಲಿ 1.84 ಕೋ. ಗುರಿ ಇದ್ದು, 1.20 ಕೋ. ವಸೂಲಿಯಾಗಿದೆ.

    ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಲು ತೆರಿಗೆ ದರ ಏರಿಕೆ ಮಾಡಿರುವುದೊಂದೇ ಕಾರಣವಲ್ಲ. ಹಿಂಬಾಕಿ 14 ಕೋಟಿ ರೂ. ಸೇರಿ 2020-21ನೇ ಸಾಲಿನ ಆಸ್ತಿ ತೆರಿಗೆ ಗುರಿ 93 ಕೋ. ಆಗಿರುತ್ತದೆ. ಹೊರಗೆ ಉಳಿದಿದ್ದ ಬಹಳಷ್ಟು ಆಸ್ತಿಗಳನ್ನು ತೆರಿಗೆ ಜಾಲಕ್ಕೆ ತಂದಿದ್ದೇವೆ.

    –ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts