More

    ಕೊಡಿಯಾಲದಲ್ಲಿ ಶ್ರೀರಾಮಮಂದಿರ, ಭಜನಾ ಭವನ ಉದ್ಘಾಟನೆ

    ಶ್ರೀರಂಗಪಟ್ಟಣ: ಕೊಡಿಯಾಲ ಗ್ರಾಮ ಹಾಗೂ ಮೈಸೂರು ಅರಮನೆಗೆ ನೇರ ಸಂಪರ್ಕ ಹಾಗೂ ಹತ್ತಿರದ ಸಂಬಂಧವಿದ್ದು, ಅದೇ ಬಾಂಧವ್ಯ ಮುಂದೆಯೂ ಇರಲಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

    ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಪದ್ಮಶಾಲಿ ಶ್ರೀರಾಮ ಮಂದಿರ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಗೊಂಡಿರುವ ಶ್ರೀರಾಮಮಂದಿರ ಹಾಗೂ ಭಜನಾ ಭವನವನ್ನು ಉದ್ಘಾಟಿಸಿ ಮಾತನಾಡಿದರು.

    ತಾಲೂಕಿನ ಕೊಡಿಯಾಲದಲ್ಲಿ ತಯಾರಾಗುತ್ತಿದ್ದ ವಸ್ತ್ರಗಳ ಮೇಲೆ ಮೈಸೂರು ಮನೆತನದ ಗುರುತಿದೆ. ಹಳೇ ಮೈಸೂರು ಭಾಗದ ಗ್ರಾಮಗಳ ಜನರ ಆಚಾರ, ವಿಚಾರ, ಸಂಸ್ಕೃತಿ-ಪರಂಪರೆ ಮೇಲೆ ರಾಜವಂಶಸ್ಥರಿಗೆ ಗೌರವ ಇತ್ತು. ಅದರಲ್ಲೂ ನಾಲ್ವಡಿ ಅವರ ಸೇವೆಗಳು ಇಂದಿಗೂ ಹೆಗ್ಗುರುತಾಗಿ ಉಳಿದಿದೆ ಎಂದು ತಿಳಿಸಿದರು.

    ಈ ಹಿಂದೆ ಇದ್ದ ಸಂಸ್ಕೃತಿ, ಐಕ್ಯತೆ, ಸಂಭ್ರಮ ಹಾಗೂ ಪರಸ್ಪರ ನೆರವಾಗುತ್ತಿದ್ದ ಗುಣಗಳು ಪ್ರಸ್ತುತ ಆಧುನಿಕ ಜೀವನದ ಹೆಸರಲ್ಲಿ ಮರೆಯಾಗುತ್ತಿದೆ. ಹೀಗಾಗಿ ಸಹೋದರತ್ವ, ಐಕ್ಯತೆ ಮತ್ತು ಭಾವೈಕ್ಯ ಮತ್ತೆ ಹಳ್ಳಿಗಳಿಂದಲೇ ಪ್ರಾರಂಭವಾಗಬೇಕಿದೆ. ಅರಮನೆ ನಮಗೆ ಮಾತ್ರವಲ್ಲ, ನಮ್ಮ ಪ್ರಜೆಗಳಿಗೂ ಮನೆಯಾಗಿದೆ. ವನವಾಸಕ್ಕೆ ಆಗಮಿಸಿದ್ದ ಸೀತೆ, ಶ್ರೀರಾಮ, ಲಕ್ಷ್ಮಣ ನಾಡಿನ ಮೇಲೆ ಅತೀವ ಪ್ರೀತಿ ಗೌರವ ಹಾಗೂ ಭಕ್ತಿ ಹೊಂದಿದ್ದರು. ಆ ಗುಣಗಳು ನಮ್ಮ ಪೂರ್ವಜರಲ್ಲೂ ಇತ್ತು. ಅವು ನಮ್ಮಿಂದ ಮುಂದಿನ ಪೀಳಿಗೆಗೆ ಬಳುವಳಿಯಾಗಬೇಕು ಎಂದರು.

    ಇದಕ್ಕೂ ಮುನ್ನ ವೈದಿಕರು ಶ್ರೀರಾಮ ಮಂದಿರದಲ್ಲಿ ಪುಣ್ಯಾರ್ಚನೆ, ಶ್ರೀರಾಮತಾರಕ ಹೋಮ ನೆರವೇರಿಸಿದರು. ಉಪನ್ಯಾಸಕ ಡಾ.ವಿಜಯ್ ರಾಜ್ ಉಪನ್ಯಾಸ ನೀಡಿದರು. ಪದ್ಮಶಾಲಿ ಶ್ರೀರಾಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ನಾರಾಯಣಯ್ಯ, ಪ್ರಧಾನ ಕಾರ್ಯದರ್ಶಿ ಆರ್.ನರಸಿಂಹಮೂರ್ತಿ, ಖಜಾಂಚಿ ಎಸ್.ಗೋವರ್ಧನ್, ಸಹ ಕಾರ್ಯದರ್ಶಿ ವಿ.ನಾಗಾನಂದ್, ಉಪಾಧ್ಯಕ್ಷ ಡಾ.ಎನ್.ರಾಧಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts