More

    ಮಾ.3ರಂದು ಗಾಯತ್ರಿ ದೇಗುಲ ಉದ್ಘಾಟನೆ

    ಎನ್.ಆರ್.ಪುರ: ತಾಲೂಕು ಬ್ರಾಹ್ಮಣ ಮಹಾಸಭಾ ಅಗ್ರಹಾರದಲ್ಲಿ ನಿರ್ಮಿಸಿರುವ ಶ್ರೀ ಗಾಯತ್ರಿ ದೇವಾಲಯ ಮಾ.3ರಂದು ಉದ್ಘಾಟನೆಯಾಗಲಿದ್ದು, ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಗಾಯತ್ರಿ ದೇವಿ ಹಾಗೂ ಶಿಖರದ ಪ್ರತಿಷ್ಠಾನಾ ಮಹಾ ಕುಂಭಾಭಿಷೇಕ ನೆರವೇರಿಸಲಿದ್ದಾರೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ತಿಳಿಸಿದರು.

    ಗಾಯತ್ರಿ ದೇವಸ್ಥಾನದ ಉದ್ಘಾಟನೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮ ಮಾ.1, 2 ಹಾಗೂ 3 ರಂದು ನಡೆಯಲಿದೆ. 1 ಹಾಗೂ 2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 3ರ ಬೆಳಗ್ಗೆ 9 ಗಂಟೆಗೆ ಪುರೋಹಿತ ಶಂಕರ ಭಟ್ ಘನಪಾಟಿ ನೇತೃತ್ವದಲ್ಲಿ ಪ್ರತಿಷ್ಠಾಂಗ ಹೋಮ, 10 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಅವರನ್ನು ಅಗ್ರಹಾರದ ಸುಂಕದಕಟ್ಟೆ ಸಮೀಪದ ಮುಖ್ಯ ದ್ವಾರದ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ನಂತರ ಮೆರವಣಿಗೆಯಲ್ಲಿ ಕರೆತರಲಾಗುವುದು. 10.30ಕ್ಕೆ ಶ್ರೀಗಳು ಗಾಯತ್ರಿ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಅವರಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪಾದ ಪೂಜೆ ನೆರವೇರಿಸಲಾಗುವುದು. ನಂತರ ಶ್ರೀ ಗಾಯತ್ರಿ ದೇವಿ ಹಾಗೂ ದೇವಸ್ಥಾನದ ಶಿಖರದ ಪ್ರತಿಷ್ಠಾನಾ ಮಹಾ ಕುಂಭಾಭಿಷೇಕ ನೆರವೇರಿಸಲಿದ್ದಾರೆ. 12 ಗಂಟೆಗೆ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಗಾಯತ್ರಿ ದೇವಸ್ಥಾನದ ಉದ್ಘಾಟನೆ ಹಾಗೂ ಮಹಾ ಕುಂಭಾಭಿಷೇಕಕ್ಕೆ 5 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನ 3 ಸಾವಿರ ಭಕ್ತರ ಮನೆಗೆ ಆಮಂತ್ರಣ ನೀಡಲಾಗಿದೆ. ಫೆ.28, 29ರಂದು ಹೊರೆ ಕಾಣಿಕೆ ಸ್ವೀಕಾರ ಮಾಡಲಿದ್ದು ಭಕ್ತರು ಹೊರೆ ಕಾಣಿಕೆ ನೀಡಬಹುದು ಎಂದರು.
    ಮಾ.1ರ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಪ್ರತಿಷ್ಠಾಪನೆ ಮಾಡಲಿರುವ ಗಾಯತ್ರಿ ದೇವಿ ವಿಗ್ರಹಕ್ಕೆ ಭಕ್ತರು ಅಭಿಷೇಕ, ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಲ, ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಬಹುದು. 1 ಹಾಗೂ 2 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಭಜನಾ ತಂಡದವರಿಂದ ಭಜನೆ ಹಾಗೂ 3 ದಿನಗಳ ಕಾಲ ಸಂಜೆ 6.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಗಾಯತ್ರಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.
    ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಎಂ.ಆರ್.ರವಿಶಂಕರ್, ತಾಲೂಕು ಘಟಕದ ಕಾರ್ಯದರ್ಶಿ ಎಸ್.ಎನ್.ಸುರೇಶ್, ಖಜಾಂಚಿ ಅಭಿಷೇಕ್, ಕಾರ್ಯಕಾರಿ ಸಮಿತಿ ಸದಸ್ಯ ಎಂ.ವಿ.ರಾಜೇಂದ್ರಕುಮಾರ್, ಸಹ ಕಾರ್ಯದರ್ಶಿ ನಟರಾಜ್, ನಿರ್ದೇಶಕ ಶ್ರೀಹರ್ಷ, ಪೃಥ್ವಿ ದರ್ಶನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts