More

    ಶಿಷ್ಟಾಚಾರ ಆಧಾರಿತ ಶಿಕ್ಷಣ ವ್ಯವಸ್ಥೆ ಅವಶ್ಯ

    ನಂಜನಗೂಡು: ಸ್ಪರ್ಧಾತ್ಮಕ ಹಾಗೂ ವಿಜ್ಞಾನ ಯುಗದಲ್ಲಿ ಸಂಸ್ಕೃತಿ, ಶಿಷ್ಟಾಚಾರ ಆಧಾರಿತ ಶಿಕ್ಷಣದ ವ್ಯವಸ್ಥೆ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸುತ್ತೂರು ಶ್ರೀಮಠದ ಗುರು ಪರಂಪರೆಯ ಆಶಯದಂತೆ ಜೆಎಸ್‌ಎಸ್ ಕಾಲೇಜು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಕೃಷ್ಣರಾಜನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಹೇಳಿದರು.

    ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಕಲೆಯಲ್ಲಿ ಶ್ರೇಷ್ಠತೆಯನ್ನು ಮೆರೆದು ಸಮಾಜಕ್ಕೆ ಮಾದರಿ ಕಲಾವಿದರಾಗಿದ್ದ ಡಾ.ರಾಜಕುಮಾರ್, ಸಮಾಜಕ್ಕೆ ಶ್ರೇಷ್ಠ ಚಿತ್ರಗಳನ್ನು ನಿರ್ದೇಶಿಸಿದ್ದ ಪುಟ್ಟಣ್ಣ ಕಣಗಾಲ್ ಹಾಗೂ ಇಡೀ ಸಾಹಿತ್ಯ ಬದುಕಿನ ನಿಜವಾದ ಕನ್ನಡಿ ಎಂದು ಸಾಭೀತುಪಡಿಸಿದ ರಾಷ್ಟ್ರಕವಿ ಕುವೆಂಪು ಮುಂತಾದ ಶ್ರೇಷ್ಠ ದಿಗ್ಗಜರ ಜೀವನ ಶೈಲಿಯನ್ನು ವಿದ್ಯಾರ್ಥಿಗಳು ಅಭ್ಯಸಿಸಬೇಕು. ಹೀಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ವ್ಯಾಸಂಗದ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಗಳತ್ತಲೂ ಗಮನ ಹರಿಸಬೇಕು ಎಂದು ತಿಳಿಸಿದರು.

    ಮೈಸೂರಿನ ಸೋಮಾನಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎನ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಂತೆ ಕ್ರೀಡಾ ಚಟುವಟಿಕೆಗಳು ಅತ್ಯವಶ್ಯಕವಾಗಿದ್ದು, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.

    ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡ ಮಾತನಾಡಿ, ಸಂಸ್ಕೃತಿಕ ನೆಲೆಯ ಶಿಕ್ಷಣದ ಅವಶ್ಯಕತೆ ಹಿಂದೆಂದಿಗಿಂತಲು ಇಂದು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರೀಡಾ ವೇದಿಕೆಗಳು ನೆರವಾಗಲಿದೆ ಎಂದರು.

    ಸಮಾರಂಭದಲ್ಲಿ ಪ್ರಥಮ ದರ್ಜೆಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶಿವಕುಮಾರ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಡಾ.ಎ.ಗಾಯತ್ರಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪಿ.ಎಂ.ವಿಕ್ರಂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts