More

    ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟನೆ

    ನಾಗಮಂಗಲ: ಭೀಕರ ಬರಗಾಲದ ನಡುವೆಯೂ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಜೀವನ ನಡೆಸಲು ಸಂಕಷ್ಟವಾಗುತ್ತಿತ್ತು. ಆದರೆ ಈಗ ಉಚಿತ ಯೋಜನೆಗಳಿಂದ ಜನರ ಜೀವನ ಸುಧಾರಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

    ತಾಲೂಕಿನ ಬಿಂಡಿಗನವಿಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ರೈತರಿಗೆ ಬರ ಪರಿಹಾರದ ಹಣ ಸೇರಿದಂತೆ ರಾಜ್ಯಕ್ಕೆ ಘೋಷಣೆ ಮಾಡಿರುವ ಯಾವುದೇ ಅನುದಾನವನ್ನು ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ನಾವು ಸಹ 5 ಗ್ಯಾರಂಟಿ ಯೋಜನೆಗಳನ್ನು ಕೊಡದಿದ್ದರೆ ಜನರು ಜೀವನ ನಡೆಸಲು ಎಷ್ಟು ಕಷ್ಟವಾಗುತ್ತಿತ್ತು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದರು.

    ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಏನೆಲ್ಲ ಅನ್ಯಾಯವಾಗುತ್ತಿದೆ ಎಂಬುದು ಜನತೆಗೆ ಗೊತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಲೋಕಸಭೆಯಲ್ಲಿ ಈ ಗ್ಯಾರಂಟಿ ಯೋಜನೆಗಳು ಅವಶ್ಯಕತೆಯಿತ್ತೆ? ಯಾಕೆ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಈ ಯೋಜನೆಗಳನ್ನು ನಾವು ಕೊಡದಿದ್ದರೆ ರಾಜ್ಯದ ಜನರ ಪರಿಸ್ಥಿತಿ ಏನೆಂಬುದನ್ನು ಯೋಚಿಸಬೇಕಲ್ಲವೇ ಎಂದರು.

    ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಕನಿಷ್ಠ ನಾಲ್ಕೈದು ಸಾವಿರ ರೂ. ಸಿಗುತ್ತಿದೆ. ಕೃಷಿ ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಈ ಹಣದಿಂದ ಬಹಳಷ್ಟು ಅನುಕೂಲವಾಗುತ್ತಿದೆ. ಜನಪರ ಆಡಳಿತ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ನೆನಪಿನಲ್ಲಿಟ್ಟುಕೊಂಡು ಮುಂಬರುವ ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆಗಳಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ನೀವೇ ನಿರ್ಧರಿಸಬೇಕು. ಕಳೆದ 2006ರಲ್ಲಿ ಎಂಡಿಸಿಸಿ ಬ್ಯಾಂಕ್ ವತಿಯಿಂದ ತಾಲೂಕಿಗೆ 2 ಕೋಟಿ ರೂ. ಸಾಲ ನೀಡಲಾಗಿತ್ತು. ಆದರೆ ಈಗ ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದಕ್ಕೆ ಬಡ್ಡಿ ರಹಿತವಾಗಿ 14 ಕೋಟಿ ರೂ. ಸಾಲ ನೀಡಲಾಗಿದೆ. ರೈತರಿಗೆ ನೀಡಿರುವ ಈ ಸಾಲದ ಬಡ್ಡಿಯನ್ನು ಕಾಂಗ್ರೆಸ್ ಸರ್ಕಾರ ಪಾವತಿಸುತ್ತಿದೆ ಎಂದು ತಿಳಿಸಿದರು.

    ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜೇಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ್‌ಕುಮಾರ್ ಮಾತನಾಡಿದರು. ದೊಡ್ಡಬಾಲ ಗ್ರಾಪಂ ಅಧ್ಯಕ್ಷೆ ಸಿ.ಲತಾ, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಆರ್.ನಾಗಭೂಷಣ್, ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ತಿಮ್ಮೇಗೌಡ, ಉಪಾಧ್ಯಕ್ಷ ಪುಟ್ಟಸ್ವಾಮಿ, ನಿರ್ದೇಶಕರಾದ ಕೃಷ್ಣೇಗೌಡ, ನಂಜುಂಡೇಗೌಡ, ಕುಮಾರ್ ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts