More

    ಮಕ್ಕಳ ಸಾಹಿತ್ಯ ಸಮ್ಮೇಳನವೆಂಬ ಹೂದೋಟದಲ್ಲಿ…

    ಮಕ್ಕಳ ಸಾಹಿತ್ಯ ಸಮ್ಮೇಳನವೆಂಬ ಹೂದೋಟದಲ್ಲಿ...ಚಿಕ್ಕ ಸಸಿಗಳನ್ನು ನೆಟ್ಟು ಬೆಳೆಸಿ ಸಂತೋಷಿಸುವ ವ್ಯವಧಾನ ಇಲ್ಲದವರಿಗೆ ಮುಂದೆ ಮರಗಳನ್ನು ಟೀಕಿಸುವ ಹಕ್ಕಿಲ್ಲ ಎಂಬ ಮಾತನ್ನು ಆಗಾಗ ಹೇಳುತ್ತಿರುತ್ತೇನೆ. ಕಳೆದ ಮೂವತ್ತೈದು ವರ್ಷಗಳ ಕಾಲೇಜು ಪ್ರಾಧ್ಯಾಪಕ ವೃತ್ತಿಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಸಕ್ತಿಯಿಂದ ತೊಡಗಿಸಿಕೊಂಡ ಪರಿಣಾಮವಾಗಿ ಪ್ರತಿ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯಲ್ಲದೆ ಆತನ/ಆಕೆಯ ನಡವಳಿಕೆ, ಸ್ವಭಾವ, ಬದುಕು ಕಟ್ಟಿಕೊಳ್ಳುವ ಬದ್ಧತೆ ಇತ್ಯಾದಿಗಳನ್ನು ಅಭ್ಯಸಿಸುವ ಅವಕಾಶ ನನಗೆ ಒದಗಿ ಬಂದಿದೆ. ಯಾವ ವಿದ್ಯಾರ್ಥಿಯು ಬಾಲ್ಯದಲ್ಲಿ ಕೇವಲ ಪಠ್ಯಪುಸ್ತಕ, ಪ್ರವಚನಗಳಲ್ಲಿ ಮಾತ್ರ ನಿರತನಾಗಿ ಪಠ್ಯೇತರ ಚಟುವಟಿಕೆಗಳಾದ ಆಟ, ಓಟ, ಸ್ಪರ್ಧೆಗಾಗಿ ಸಮಯ ನೀಡಿರುವುದಿಲ್ಲವೋ ಅಂಥ ವಿದ್ಯಾರ್ಥಿ ಅಂತಮುಖಿಯಾಗಿ ಸೂಕ್ಷ್ಮತೆಗಳನ್ನು ಬೆಳೆಸಿಕೊಳ್ಳದ ಒರಟನಾಗಿಯೂ ರೂಪುಗೊಂಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಬದಲಾಗಿ ಸಾಹಿತ್ಯ, ಸಂಗೀತ, ಕಲೆ ಮೊದಲಾದ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿ ಕಾಲೇಜು ಹಂತಕ್ಕೆ ಬರುವಾಗ ತನ್ನ ಅಭಿವ್ಯಕ್ತಿಯ ಮಾರ್ಗವನ್ನು ಕಂಡುಕೊಂಡು ಸ್ಪಷ್ಟವಾದ ಸನ್ನಡತೆಯಿಂದಾಗಿ ಪ್ರಾಧ್ಯಾಪಕರ ಅಚ್ಚುಮೆಚ್ಚಿನವನಾಗಿ ರೂಪುಗೊಂಡಿದ್ದು ಕೂಡ ಕಂಡು ಬರುತ್ತದೆ.

    ‘ಸಂಗೀತ ಸಾಹಿತ್ಯ ಕಲಾವಿಹೀನಃ ಸಾಕ್ಷಾತ್ ಪಶು ಪುಚ್ಚ ವಿಶಾಣಹೀನಃ’ ಎಂಬ ಸುಭಾಷಿತಕಾರನ ಮಾತನ್ನು ಇಂಥವರ ನಡವಳಿಕೆ ಸಾಬೀತುಗೊಳಿಸುತ್ತಿರುತ್ತದೆ. ಮನುಷ್ಯನ ವ್ಯಕ್ತಿತ್ವಕ್ಕೆ ಮೃದುತ್ವದ ಹೊಳಪನ್ನು ಸುಸಂಸ್ಕೃತ ನಡವಳಿಕೆಯ ಆಕರ್ಷಣೆಯನ್ನು ಒದಗಿಸುವಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳ ಪಾತ್ರ ಬಲು ದೊಡ್ಡದಿದೆ. ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದು ಈ ಕಾರಣಕ್ಕಾಗಿ ನನಗೆ ಸಂತೋಷದ ಸಂಗತಿ.

    ಕಳೆದ ಅನೇಕ ವರ್ಷಗಳಿಂದ ಆದಿಚುಂಚನಗಿರಿಯಲ್ಲಿ ನಡೆಸಲ್ಪಡುವ ಮಕ್ಕಳ ಸಾಹಿತ್ಯ ಸಮ್ಮೇಳನ ಕರ್ನಾಟಕದಲ್ಲಿ ಹುದುಗಿರುವ ವಿದ್ಯಾರ್ಥಿ ಪ್ರತಿಭೆಗಳನ್ನು ಹೊರತಂದು ನಮ್ಮೆದುರು ಪ್ರಸ್ತುತಪಡಿಸಿ ಮಕ್ಕಳ ಸಾಹಿತ್ಯ ಲೋಕಕ್ಕೆ ದೊಡ್ಡ ಉಪಕಾರವನ್ನು ಮಾಡುತ್ತಿದೆ. ಕಳೆದ ತಿಂಗಳು ಆದಿಚುಂಚನಗಿರಿ ಸಂಸ್ಥೆಯಲ್ಲಿ ನಡೆಸಲಾದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪಾಲ್ಗೊಂಡಿದ್ದೆ. ಸಮ್ಮೇಳನದ ಸರ್ವಾಧ್ಯಕ್ಷತೆ, ಸಮಾರೋಪ ಭಾಷಣ, ವಿವಿಧ ಗೋಷ್ಠಿಗಳ ಅಧ್ಯಕ್ಷತೆ ಹಾಗೂ ಪ್ರಬಂಧ ಮಂಡನೆ, ಕಾರ್ಯಕ್ರಮ ನಿರ್ವಹಣೆ ಹೀಗೆ ಇಡೀ ಸಮ್ಮೇಳನವನ್ನು ವಿದ್ಯಾರ್ಥಿಗಳೇ ಪ್ರಸ್ತುತಪಡಿಸುತ್ತಾರೆ. ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಸಮಾರೋಪದಲ್ಲಿ ನಾನು ಆಹ್ವಾನಿತಳಾಗಿದ್ದೆ.

    ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ವಿದ್ಯಾರ್ಥಿನಿಯ ಸ್ಫುಟವಾದ ಮಾತುಗಳಲ್ಲದೆ ವಿವಿಧ ಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿದವರ ಹಾಗೂ ವಿಷಯ ಮಂಡನೆ ಮಾಡಿದ ವಿದ್ಯಾರ್ಥಿಗಳ ಮಾತುಗಾರಿಕೆಗೆ ಮನಸೋತೆ. ಪಾಲಕರು, ಶಿಕ್ಷಕರು ವ್ಯವಧಾನದಿಂದ ಆಸಕ್ತಿ ವಹಿಸಿದರೆ ಸಣ್ಣದೊಂದು ಚೀಟಿಯ ಅಗತ್ಯವೂ ಇಲ್ಲದೆ ಹೀಗೆ ತಮ್ಮ ವಿಚಾರಗಳನ್ನು ಮಂಡಿಸಬಹುದು. ‘ಭವಿಷ್ಯದಲ್ಲಿ ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ ಕನ್ನಡದ ಸೊಗಸನ್ನು ಮರೆಯದಿರಿ, ಬೋಧನೆಗೆ ಇಂಗ್ಲಿಷ್ ಮಾಧ್ಯಮವಾದರೂ ಒಡನಾಟಕ್ಕೆ ಅಭ್ಯಾಸಕ್ಕೆ ಕನ್ನಡ ಮಾತ್ರವಿರಲಿ’ ಎಂದು ಹೇಳಿದೆ.

    ಮಾತು ಸುಮ್ಮನೆ ಬರುವಂಥದ್ದಲ್ಲ. ಅದರ ಹಿಂದೆ ಪರಿಶ್ರಮ ಬೇಕು, ಮಾರ್ಗದರ್ಶನ ಬೇಕು, ಆಸಕ್ತಿ ಬೇಕು. ಮತ್ತು ಅವಕಾಶಗಳು ಒದಗಿ ಬರಬೇಕು. ಇವೆಲ್ಲವನ್ನೂ ವಿದ್ಯಾರ್ಥಿಗಳು ಪೂರ್ತಿಯಾಗಿ ಬಳಸಿಕೊಂಡರು. ಕೆಲ ವರ್ಷಗಳ ಹಿಂದೆ ಮೈಸೂರಿನ ರಂಗಾಯಣ ಸಂಸ್ಥೆ ಸ್ವಿಟ್ಜರ್ಲೆಂಡಿನ ನಾಟಕ ಅಕಾಡೆಮಿಯ ಜತೆ ಮಕ್ಕಳ ನಾಟಕ ರಚನೆಯ ಕಮ್ಮಟವನ್ನು ಆಯೋಜಿಸಿತ್ತು. ಕನ್ನಡದ ಅನೇಕ ಲೇಖಕ-ಲೇಖಕಿಯರ ಜತೆ ನಾನು ಅದರಲ್ಲಿ ಪಾಲ್ಗೊಂಡಿದ್ದೆ. ‘ಪುಟ್ಟಿಯ ಪಟ್ಟೆ ಹುಲಿ’ ಎಂಬ ನನ್ನ ನಾಟಕವನ್ನು ಬರೆದು ಪರಿಷ್ಕರಿಸಿ ಆಡಿಸಿ ಅಭಿನಯಿಸಿ ತೋರಿಸುವ ಅವಕಾಶ ಸಿಕ್ಕಿತ್ತು. ಸ್ವಿಟ್ಜರ್ಲೆಂಡಿನ ನಾಟಕ ಅಕಾಡೆಮಿಯ ಅಧ್ಯಕ್ಷೆ ಲೀನ್ ಹಾಗೂ ಲಿರಿಕ್ ಎಂಬ ವಿದ್ವಾಂಸರ ಜತೆ ಅನೇಕ ಸಂಗತಿಗಳನ್ನು ರ್ಚಚಿಸಿದ್ದೆವು. ಮಕ್ಕಳ ಸಾಹಿತ್ಯ ರಚನೆ ಸುಲಭವಾದ ಕೆಲಸವಲ್ಲ. ಮಕ್ಕಳಿಗೆ ಜ್ಞಾನ, ಕಲ್ಪನಾಶಕ್ತಿ, ಮನರಂಜನೆ, ನೀತಿಬೋಧನೆ ಹೀಗೆ ಹಲವಾರು ಆಯಾಮಗಳಲ್ಲಿ ಸಾಹಿತ್ಯ ಕೃತಿ ಕೆಲಸ ಮಾಡಬೇಕಾಗುತ್ತದೆ. ದೊಡ್ಡ ದೊಡ್ಡ ಪದಗಳನ್ನು ಬಳಸುವಂತಿಲ್ಲ. ಪ್ರಾಣಿಲೋಕ, ಪಕ್ಷಿ, ಪಶು, ಕ್ರಿಮಿಕೀಟಗಳಂಥ ವಿಸ್ಮಯಕಾರಿ ಪ್ರಪಂಚವನ್ನು ಮಕ್ಕಳ ಸಾಹಿತ್ಯ ಕೃತಿಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಬಹುದು. ಮಕ್ಕಳಿಗೆ ಎಟುಕುವ ಸಂಗತಿಗಳನ್ನು ಮಾತ್ರ ಕಥಾವಸ್ತುವಾಗಿ ಬಳಸಿಕೊಳ್ಳಬೇಕು, ಅವರ ಅರಿವಿಗೆ ಮೀರಿದ ಅಗತ್ಯವೂ ಇಲ್ಲದ ಸಿದ್ಧಾಂತಗಳನ್ನೋ ಸಮಸ್ಯೆಗಳನ್ನೋ ಗಡಚಾದ ರಾಜಕೀಯ, ಆರ್ಥಿಕ ವಿದ್ಯಮಾನಗಳನ್ನೋ ರ್ಚಚಿಸುವಂತಿಲ್ಲ. ಹೀಗೆ ಆ ಸ್ವಿಸ್ ನಾಟಕಗಾರ್ತಿ, ಪ್ರಾಧ್ಯಾಪಕಿ ನಮ್ಮೊಂದಿಗೆ ಉಪಯುಕ್ತ ಸಂಗತಿಗಳನ್ನು ರ್ಚಚಿಸಿದ್ದರು. ನಾಟಕದಲ್ಲಿ ಅಡಿಕೆ ತೋಟದ ಬಾವಿಯೊಂದರಲ್ಲಿ ಬಿದ್ದ ಹುಲಿಯನ್ನು ಬೇಟೆಗಾರರು ಕೊಲ್ಲದಂತೆ ಮನವೊಲಿಸಿ ಗೆಲ್ಲುವ ಮಕ್ಕಳ ಚಿತ್ರಣವಿತ್ತು.

    ಕನ್ನಡದಲ್ಲಿ ಅಪೂರ್ವವಾದ ಮಕ್ಕಳ ಸಾಹಿತ್ಯ ರಚನೆಯನ್ನು ಮಾಡಿದ ಅನೇಕ ಕವಿಗಳು ಆಗಿ ಹೋಗಿದ್ದಾರೆ. ಪಂಜೆ ಮಂಗೇಶರಾಯರು, ಜಿ.ಪಿ.ರಾಜರತ್ನಂ ಮೊದಲಾದವರು ಪದ್ಯಗಳನ್ನು ಮಕ್ಕಳಿಗಾಗಿಯೇ ಬರೆದು ಹಾಡಿ ಪ್ರಸಿದ್ಧರಾಗಿದ್ದಾರೆ. ‘ನಾಗರ ಹಾವೆ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ…’ ‘ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ವರಗಿರುತ್ತಲೊಂದು ಕನಸು ಕಂಡನಂತೆನೆ…’ ‘ಟಿಕ್ ಟಿಕ್ ಗೆಳೆಯ’ ಮೊದಲಾದ ಪದ್ಯಗಳು ಪ್ರಾಸಬದ್ಧವಾಗಿ ಮಕ್ಕಳ ನಾಲಿಗೆಯ ಮೇಲೆ ನಲಿಯುತ್ತಿದ್ದ ಒಂದು ಕಾಲವಿತ್ತು. ‘ಸಂತೆಗೆ ಹೋದನು ಭೀಮಣ್ಣ ಹಿಂಡಿಯ ಕೊಂಡನು ಹತ್ತು ಮಣ’ ಎಂಬ ಪದ್ಯದಲ್ಲಿ ‘ನೀ ನನಗಿದ್ದರೆ ನಾ ನಿನಗೆ’ ಎಂಬ ತತ್ತ್ವ ಪ್ರತಿಪಾದಿತವಾಗಿದ್ದು ಪ್ರಾಣಿಗಳ ಸಂಭಾಷಣೆ ಮೂಲಕ ಮಕ್ಕಳ ಮೃದು ಮನಸ್ಸಿನಲ್ಲಿ ಸೌಹಾರ್ದತೆಯ ಪಾಠವನ್ನು ಬಿತ್ತಲಾಗುತ್ತಿತ್ತು. ‘ಚಂದಿರನೇತಕೆ ಓಡುವನಮ್ಮ ನಮ್ಮೊಡನಾಡುವನೆ? ನಾನೂ ಓಡಲು ತಾನೂ ಓಡುವ ಚೆನ್ನಿಗ ಚಂದಿರನೇ’ ಎಂಬ ಚೇತೋಹಾರಿ ಕವಿತೆ ಮಕ್ಕಳಲ್ಲಿ ಪ್ರಕೃತಿಪ್ರೇಮವನ್ನು, ಕಲ್ಪನಾಶಕ್ತಿಯನ್ನು ಚಿಗುರಿಸುವ ಸಾಧನವಾಗಿತ್ತು. ಪಂಚತಂತ್ರದ ಕಥೆಗಳು ಪ್ರಾಣಿಗಳನ್ನು ಬಳಸಿಕೊಂಡು ಮಕ್ಕಳಿಗೆ ನೀತಿ ಬೋಧನೆ ಮಾಡುವ ಉತ್ಕೃಷ್ಟ ಕೆಲಸವನ್ನು ಮಾಡಿವೆ.

    ಕಾಲ ಬದಲಾದಂತೆ ಮುದ್ರಣ ಮಾಧ್ಯಮದಲ್ಲಿ ಓದಿ ಸಂತೋಷಿಸುವ ಸಾಹಿತ್ಯ ಪ್ರಪಂಚವನ್ನು ಶ್ರಾವ್ಯ ಮಾಧ್ಯಮ, ದರ್ಶನ ಮಾಧ್ಯಮಗಳಲ್ಲಿ ನೋಡಿ ರಭಸದ ಪ್ರತಿಕ್ರಿಯೆಗಳಿಗೆ ಕಟ್ಟಿಕೊಳ್ಳುವ ಜಾಯಮಾನ ಪ್ರಾಪ್ತವಾಗಿದೆ. ಮಕ್ಕಳ ಪ್ರತಿಭೆಯನ್ನು ರಿಯಾಲಿಟಿ ಶೋಗಳೆಂಬ ಹುಚ್ಚಾಟದಲ್ಲಿ ಪಣಕ್ಕಿಟ್ಟು ತಂದೆ-ತಾಯಿಗಳು ಸಂಭ್ರಮಿಸುವುದನ್ನು ನೋಡಿದಾಗ ಅಳುವುದೋ ನಗುವುದೋ ತಿಳಿಯದು. ಕೂತು ಓದುವ ಶಾಂತ, ಏಕಾಂತ, ಅದನ್ನು ಒದಗಿಸುವ ವ್ಯವಧಾನ ಪೂರ್ಣ ಪರಿಸರ ಇಂದಿನ ನಾಗರಿಕ ಬದುಕಿನಲ್ಲಿ ಕಾಣೆಯಾಗುತ್ತಿದೆ. ಮಕ್ಕಳ ಆಟೋಟ ಸ್ಪರ್ಧೆಗಳನ್ನು ಪೋ›ತ್ಸಾಹಿಸುವ ವಿರಾಮವೂ ಶೈಕ್ಷಣಿಕ ಬದಲಾವಣೆಯ ಸಂದರ್ಭದಲ್ಲಿ ಕಾಣೆಯಾಗುತ್ತಿದೆ. ಮೊಮ್ಮಕ್ಕಳನ್ನು ಸುತ್ತ ಕೂಡಿಸಿಕೊಂಡು ಕೈತುತ್ತು ಹಾಕುತ್ತ ಕಥೆಗಳನ್ನು ಹೇಳುತ್ತ ಮಕ್ಕಳ ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಬುನಾದಿ ಹಾಕುತ್ತ ತಮ್ಮ ದಿನಗಳನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದ ಹಿರಿಯ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಅಜ್ಜಿಯಂದಿರು ಕಾಣೆಯಾಗಿದ್ದಾರೆ. ಸ್ವಸ್ಥ ಸಮಾಜದ ಅಡಿಪಾಯವಾಗುವ ವ್ಯಕ್ತಿತ್ವ ನಿರ್ವಣದಲ್ಲಿ ಇಂತಹ ಅನೇಕ ಮೌಲ್ಯಗಳನ್ನು ಕಾಪಾಡಿಕೊಂಡು ಬರುವಲ್ಲಿ ಕೆಲವು ಶ್ರೀಮಠಗಳು ಆಸಕ್ತಿ ವಹಿಸುತ್ತಿರುವುದು ಸಮಾಧಾನದ ಸಂಗತಿ.

    ನಾನು ಹೊಸದಾಗಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ನೇಮಕಗೊಂಡಾಗ ಉಜಿರೆಯಲ್ಲಿ ಒಂದು ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿತ್ತು. ಉಜ್ವಲಾ ಎಂಬ ವಿದ್ಯಾರ್ಥಿನಿ ತನ್ನ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ‘ತರಗತಿಗಳಲ್ಲಿ ಅಧ್ಯಾಪಕರ ಮುಖದಲ್ಲಿ ಕೊಂಚ ನಗೆ ಇದ್ದು ಸ್ವಲ್ಪ ಹಾಸ್ಯಮಯವಾಗಿ ಪಾಠ ಮಾಡಿದರೆ ವಿದ್ಯಾರ್ಥಿಗಳಿಗೆ ಇಷ್ಟವಾಗುತ್ತದೆ’ ಎಂದು ಹೇಳಿದ್ದಳು. ಆ ಮಾತು ನನ್ನೊಳಗಿನ ಹಾಸ್ಯ ಲೇಖಕಿಯನ್ನು ತಟ್ಟಿ ನನ್ನ ಅಧ್ಯಾಪನ ವೃತ್ತಿಯುದ್ದಕ್ಕೂ ಪಾಲಿಸಿಕೊಂಡು ಬಂದ ಒಂದು ವೃತ್ತಿಧರ್ಮವೇ ಆಗಿದೆ. ವಿದ್ಯಾರ್ಥಿಗಳ ಮತ್ತು ನನ್ನ ಸಂಬಂಧವನ್ನು ಸುಮಧುರಗೊಳಿಸಿದ ಸಂಗತಿಯನ್ನು ಕಿರಿಯಳೋರ್ವಳ ಬಾಯಲ್ಲಿ ಕೇಳಿ ಅಳವಡಿಸಿಕೊಂಡಿದ್ದು ನನ್ನ ಒಳಗಿನ ಹಾಸ್ಯ ಲೇಖಕಿಯ ಒಂದು ಸ್ಮರಣೀಯ ಸಂಗತಿ. ದೊಡ್ಡವರ ಸಾಹಿತ್ಯ ಸಮ್ಮೇಳನಗಳು ವಾದ-ವಿವಾದಗಳ ನಡುವೆ ಸಾಧಿಸಬಹುದಾದ ತಥಾಕಥಿತ ಕನ್ನಡ ಅಭಿವೃದ್ಧಿಯನ್ನು ಮಕ್ಕಳ ಮುಗ್ಧ ಸಾಹಿತ್ಯ ಸಮ್ಮೆಳನಗಳು ಅತ್ಯಂತ ಉಪಯುಕ್ತವಾದ ನೆಲೆಗಟ್ಟಿನಲ್ಲಿ ಒದಗಿಸಬಲ್ಲವು. ಸಮ್ಮೇಳನದ ಕಾರ್ಯಕ್ರಮಗಳೆಲ್ಲ ಮುಗಿದ ಬಳಿಕ ರಾತ್ರಿ ಆದಿಚುಂಚನಗಿರಿಯ ವಿಶಾಲ ಆವರಣದಲ್ಲಿ ಚಂದ್ರ-ನಕ್ಷತ್ರಗಳ ಬೆಳಕಿನಲ್ಲಿ ಮಕ್ಕಳೊಂದಿಗೆ ಆಡುತ್ತ-ಹಾಡುತ್ತ ಅವರ ಕನಸುಗಳೊಂದಿಗೆ ನನ್ನದನ್ನೂ ಸೇರಿಸಿಕೊಂಡು ಕನ್ನಡ ಸಾಹಿತ್ಯದ ಭವಿತವ್ಯದ ಬದಲು ವರ್ತಮಾನದ ಸೊಗಸನ್ನೇ ಉಸಿರಾಡಿದ ಹಿತಾನುಭವವನ್ನು ಪಡೆದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts