More

    ಜಿಲ್ಲೆಯಲ್ಲಿ ಶೇ. 67.89ರಷ್ಟು ಮತದಾನ

    ಹಾವೇರಿ: ಪ್ರಜ್ಞಾವಂತರ ಚುನಾವಣೆ ಎಂದೇ ಗುರುತಿಸಲ್ಪಟ್ಟಿರುವ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ. 67.89ರಷ್ಟು ಮತದಾನವಾಗಿದೆ.

    ಜಿಲ್ಲೆಯಲ್ಲಿ ಶಾಂತ ಹಾಗೂ ಸುಗಮ ಮತದಾನಕ್ಕಾಗಿ 37 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಹಕ್ಕು ಚಲಾಯಿಸಿದರು. ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಮಂದವಾಗಿ ಸಾಗಿತು. 2014ರ ಚುನಾವಣೆಯಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ವಿಪ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ. 56.62ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 11ರಷ್ಟು ಮತದಾನ ಹೆಚ್ಚಳವಾಗಿದೆ.

    ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿತ್ತು. ಜಿಲ್ಲೆಯಲ್ಲಿ ಒಟ್ಟು 16,052 ಪುರುಷ, 7,218 ಮಹಿಳಾ ಹಾಗೂ ನಾಲ್ಕು ಇತರೆ ಮತದಾರರು ಸೇರಿ 23,274 ಮತದಾರರಿದ್ದರು. ಅದರಲ್ಲಿ 11,699 ಪುರುಷರು, 4,324 ಮಹಿಳೆಯರು ಸೇರಿ ಒಟ್ಟು 16,023 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

    ಹಾವೇರಿ ತಾಲೂಕಿನಲ್ಲಿ ಶೇ. 71.12, ರಾಣೆಬೆನ್ನೂರ 60.89, ಬ್ಯಾಡಗಿ 76.24, ಹಾನಗಲ್ಲ 70.10, ಹಿರೇಕೆರೂರ 71.01, ಸವಣೂರ 82.68, ಶಿಗ್ಗಾಂವಿ ತಾಲೂಕಿನಲ್ಲಿ 66.86ರಷ್ಟು ಮತದಾನವಾಗಿದೆ.

    ಹಾವೇರಿ ತಾಲೂಕಿನಲ್ಲಿ ಹಾವೇರಿ ನಗರದಲ್ಲಿ 4, ಗುತ್ತಲ ಹಾಗೂ ಕರ್ಜಗಿಯಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಮತಗಟ್ಟೆಗಳ ಎದುರು ಕಡ್ಡಾಯವಾಗಿ ಜ್ವರ ತಪಾಸಣೆ ನಡೆಸಿ ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಗುತ್ತಿತ್ತು. ಜ್ವರದ ಲಕ್ಷಣ ಕಂಡುಬಂದವರಿಗೆ ಕೋವಿಡ್ ಟೆಸ್ಟ್ ಸಹ ಮಾಡಿಸಲಾಯಿತು. ಮಾಸ್ಕ್ ಧರಿಸದೇ ಬಂದವರಿಗೆ ಮಾಸ್ಕ್​ಗಳನ್ನು ವಿತರಿಸಲಾಯಿತು. ಮತಗಟ್ಟೆ ಸಿಬ್ಬಂದಿ ಹ್ಯಾಂಡ್​ಗ್ಲೌಸ್ ಹಾಕಿಕೊಂಡು ಕಾರ್ಯನಿರ್ವಹಿಸಿದರು.

    ಮತಗಟ್ಟೆಗೆ ಬಾರದ ಸೋಂಕಿತರು: ವಿಪ ಚುನಾವಣೆಗೆ ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಪ್ರತ್ಯೇಕವಾಗಿ ಸಮಯ ನಿಗದಿಪಡಿಸಿ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಹಾವೇರಿ ಹಾಗೂ ಹಾನಗಲ್ಲ ತಾಲೂಕಿನ ತಲಾ ಇಬ್ಬರು, ರಾಣೆಬೆನ್ನೂರ ತಾಲೂಕಿನ 5 ಜನ ಸೇರಿ ಒಟ್ಟು 9 ಜನ ಸೋಂಕಿತರು ಮತದಾರರ ಪಟ್ಟಿಯಲ್ಲಿದ್ದರು. ಅವರಿಗೆ ಸಂಜೆ 4 ಗಂಟೆಯ ನಂತರ ಪ್ರತ್ಯೇಕವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಯಾರೂ ಮತದಾನಕ್ಕೆ ಬರಲಿಲ್ಲ.

    ವಾಹನಗಳಲ್ಲಿ ಕರೆತಂದರು: ಮತ ಚಲಾಯಿಸಲು ಕೇವಲ ಹೋಬಳಿ ಕೇಂದ್ರದಲ್ಲಿ ಮಾತ್ರ ಮತಗಟ್ಟೆಗಳನ್ನು ಮಾಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ಮತದಾರರನ್ನು ಕರೆತರಲು ಅಭ್ಯರ್ಥಿಗಳು ವಾಹನಗಳ ವ್ಯವಸ್ಥೆ ಮಾಡಿದ್ದರು. ಆಯಾ ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ಆಯಾ ಮಾರ್ಗದಲ್ಲಿನ ಮತದಾರರನ್ನು ವಾಹನಗಳಲ್ಲಿ ಪ್ರತ್ಯೇಕವಾಗಿ ಕರೆತಂದರು. ಮತದಾನದ ನಂತರ ಮರಳಿ ಗ್ರಾಮಕ್ಕೆ ಬಿಟ್ಟು ಬರುತ್ತಿದ್ದರು. ಹೀಗೆ ಕರೆತಂದ ಲೆಕ್ಕಾಚಾರದ ಆಧಾರದ ಮೇಲೆ ನಮ್ಮ ಅಭ್ಯರ್ಥಿಗೆ ಇಷ್ಟು ಮತ ಫಿಕ್ಸ್ ಎಂದು ಮುಖಂಡರುಗಳು ರ್ಚಚಿಸುತ್ತಿದ್ದ ದೃಶ್ಯಗಳು ಮತಗಟ್ಟೆ ಕೇಂದ್ರದ ಹೊರಗೆ ಕಂಡುಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts