More

    ಕತ್ತಲಲ್ಲೇ ಕಾಲ ಕಳೆಯುತ್ತಿರುವ ನಿವಾಸಿಗಳು

    ಅರಕೇರಾ: ವಿದ್ಯುತ್ ಪರಿವರ್ತಕ ಸುಟ್ಟು 2ವಾರ ಗತಿಸಿದರೂ ರಿಪೇರಿಯಾಗದ ಹಿನ್ನೆಲೆಯಲ್ಲಿ ತಾಲೂಕಿನ ಶಿವಂಗಿ ಗ್ರಾಮದ ಜನತೆ ಕತ್ತಲಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಜನರ ಬೇಡಿಕೆಯಂತೆ 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸಲು ಜೆಸ್ಕಾಂ ಇಲಾಖೆ ಮೀನಾಮೇಷ ಎಣಿಸುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

    ವಿದ್ಯುತ್ ಪರಿವರ್ತಕ

    ಎಸ್ಸಿ ಓಣಿಯಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟು 14 ದಿನ ಕಳೆದಿವೆ. ಗೋಕುಲ್ ಸಾಬ್ ಓಣಿ, ಬಂಡೆ ಹೊಲ ಓಣಿಗಳಲ್ಲಿ ನಿವಾಸಿಗರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. 110 ಕ್ಕೂ ಹೆಚ್ಚು ಕುಟುಂಬಗಳು ಕತ್ತಲಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕಾರ್ಮಿಕರು, ಕೃಷಿಕರೇ ಹೆಚ್ಚು ವಾಸವಿದ್ದು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ತೀವ್ರ ತೊಂದರೆಯಾಗಿದೆ.

    ಇದನ್ನೂ ಓದಿ:ನರೇಗಾ ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

    25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದೆ. ಗ್ರಾಪಂ ಸದಸ್ಯರ ಹಾಗೂ ಗ್ರಾಮಸ್ಥರ ಕರೆಗೆ ಜೆಸ್ಕಾಂ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ವಷರ್ದಿಂದ ವಷರ್ಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಸರಬರಾಜಿನಲ್ಲಿ ವಿದ್ಯುತ್ ಪರಿವರ್ತಕದ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕದ ವೋಲ್ಟೇಜ್ ಸಾಲುತ್ತಿಲ್ಲ. ಇದರಿಂದ ವಿದ್ಯುತ್ ದೀಪಗಳು ಸರಿಯಾದ ಪ್ರಮಾಣದಲ್ಲಿ ಬೆಳಗುತ್ತಿಲ್ಲ. ಆದ್ದರಿಂದ 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅವಶ್ಯಕತೆ ಇದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ವಿದ್ಯುತ್ ಪರಿವರ್ತಕ ಸುಟ್ಟ ಪರಿಣಾಮ ಜೀವನ ನಡೆಸಲು, ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತೊಂದರೆ ಆಗುತ್ತಿದೆ. ಸೊಳ್ಳೆಗಳ ಭೀತಿ ಎದುರಾಗಿದೆ. ಕುಡಿವ ನೀರು ಪೂರೈಕೆಗೂ ಸಮಸ್ಯೆಯಾಗಿದೆ. ಎರಡು ವಾರಗಳಿಂದ ಸತತ ಜೆಸ್ಕಾಂಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಗೆ ಅವಶ್ಯವಿರುವ 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಕ್ರಮ ವಹಿಸಬೇಕು.


    ವೆಂಕಟೇಶ ನಾಯಕ ಕಾವಲಿ ಗ್ರಾಪಂ ಸದಸ್ಯ ಶಿವಂಗಿ


    ಶಿವಂಗಿ ಗ್ರಾಮದ ಎಸ್ಸಿ ಓಣಿಯ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದು, 25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ನೀಡಲು ಅವಕಾಶವಿದೆ. ಈಗಾಗಲೇ ವಿತರಿಸಲು ಕ್ರಮ ವಹಿಸಲಾಗಿದೆ. ಆದರೆ ನಿವಾಸಿಗಳು 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆರ್.ಆರ್ ನಂಬರ್‌ಗಳಿಲ್ಲದೇ ಅನಧಿಕೃತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ನೀಡಲು ಅವಕಾಶವಿಲ್ಲ.


    ನಜೀರ್ ಸಾಬ್

    ಜೆಇ, ಕೆಇಬಿ ಅರಕೇರಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts