More

    ಬೇಸಿಗೆಯಲ್ಲಿ ಸಿರಗುಪ್ಪ ನಗರ, ತಾಲೂಕಿನಲ್ಲಿ ಜಲದ ಬವಣೆ

    ಕೆ.ಹುಸೇನಿ ನಾಯಕ ಸಿರಗುಪ್ಪ
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕಾಗಿ ಕೋಟ್ಯಂತರ ರೂ. ವ್ಯಯಿಸಿದರೂ ಉದ್ದೇಶಿತ ಕಾರ್ಯ ಈಡೇರುತ್ತಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷೃವೋ, ನಿರ್ವಹಣೆ ಕೊರತೆಯೋ ಗೊತ್ತಿಲ್ಲ. ಆದರೆ, ಇದರ ಪರಿಣಾಮ ಎದುರಿಸುತ್ತಿರುವುದು ಮಾತ್ರ ನಗರ ಹಾಗೂ ತಾಲೂಕಿನ ಜನರು. ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಬವಣೆ ಸಾಮಾನ್ಯವಾಗಿದ್ದು, ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.

    ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಲವು ಕೆರೆಗಳನ್ನು ನಿರ್ಮಿಸಲಾಗಿದೆ. ಅದೂ ಸಾಲದೆಂಬಂತೆ ಶುದ್ಧ ಕುಡಿಯುವ ನೀರಿನ ಘಟಕಗಳೂ ಇವೆ. ಆಗಾಗ ದುರಸ್ತಿಗೆ ಬರುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಾರ್ವಜನಿಕರಿಗೆ ಸರಿಯಾಗಿ ನೀರು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನೇಕ ವರ್ಷಗಳಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಕುಡಿಯುವ ನೀರಿಗಾಗಿ ಹಣ ತೆತ್ತು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನೇ ಅವಲಂಬಿಸಬೇಕಾಗಿದೆ.

    ಬೇಸಿಗೆಯಲ್ಲಿ ಸಿರಗುಪ್ಪ ನಗರ, ತಾಲೂಕಿನಲ್ಲಿ ಜಲದ ಬವಣೆ
    ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿಟ್ಟೂರು ರಸ್ತೆಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ 6-7 ತಿಂಗಳಿನಿಂದ ಉದ್ಘಾಟನೆಗೆ ಕಾಯುತ್ತಿರುವುದು.

    ಸಿರಗುಪ್ಪ ನಗರ ದಿನೇದಿನೆ ಬೆಳೆಯುತ್ತಿದೆ. ಗ್ರಾಮಾಂತರ ಪ್ರದೇಶದಿಂದ ವಿವಿಧ ವ್ಯವಹಾರ, ಮಕ್ಕಳ ವಿದ್ಯಾಭ್ಯಾಸಕ್ಕೆ ನಗರವನ್ನು ಸೇರುತ್ತಿರುವುದರಿಂದ ಜನಸಂಖ್ಯೆಯೂ ಅಧಿಕವಾಗುತ್ತಿದೆ. ನಗರಸಭೆ ತುಂಗಭದ್ರಾ ನದಿಯಿಂದ ನಗರದ ಜನರಿಗೆ ನೀರು ಪೂರೈಸುತ್ತಿದ್ದು, ನದಿ ಬತ್ತಿಹೋದರೆ ನಗರದ ಜನರ ಪರಿಸ್ಥಿತಿ ಹೇಳತೀರದಾಗಿದೆ. ಹಳೇ ಪೈಪ್‌ಲೈನಗಳ ಮೂಲಕ ಸುಮಾರು 30 ವರ್ಷಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ ನೀರು ಸರಬರಾಜು ಮಾಡುತ್ತಿದ್ದು, ಪ್ರಸ್ತುತ ಜನಸಂಖ್ಯೆಗೆ ಸಾಲುತ್ತಿಲ್ಲ.5 ದಿನಕ್ಕೊಮ್ಮೆ ಇಲ್ಲವೇ ವಾರಕ್ಕೊಮ್ಮೆ ನೀರು ಬಿಡುತ್ತಿರುವುದರಿಂದಾಗಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.

    ಸದಸ್ಯ ನದಿಯಲ್ಲಿ ನೀರಿದೆ. ಮುಂದಿನ ದಿನಗಳಲ್ಲಿ ನೀರು ಹೋಗುತ್ತದೆ. ಇದರಿಂದ ನಗರಕ್ಕೆ ನೀರಿನ ಪೂರೈಕೆ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ನಗರದ ವಿವಿಧೆಡೆ ನಗರಸಭೆಯಿಂದ ಕೊರೆಸಲಾಗಿರುವ ಬೋರ್‌ವೆಲ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದರೆ , ಅಂತರ್ಜಲ ಕುಸಿಯುತ್ತಿರುವುದರಿಂದ ಬೋರ್‌ವೆಲ್‌ಗಳ ನೀರೂ ಸಾಲುತ್ತಿಲ್ಲ.

    ಬೇಸಿಗೆಯಲ್ಲಿ ಸಿರಗುಪ್ಪ ನಗರ, ತಾಲೂಕಿನಲ್ಲಿ ಜಲದ ಬವಣೆ
    ಸಿರಗುಪ್ಪ ತಾಲೂಕಿನ ದೊಡ್ಡರಾಜ ಕ್ಯಾಂಪ್‌ನಲ್ಲಿ ಜೆಜೆಎಂ ಯೋಜನೆಯಡಿ ಬೇಕಾಬಿಟ್ಟಿ ನಿರ್ಮಿಸಿದ ನಳ.

    ಕೆಲ ಶ್ರೀಮಂತರು ತಮ್ಮ ಮನೆಗಳಲ್ಲಿ ಬೋರ್‌ವೆಲ್ ಕೊರೆಸಿ ಮನೆ ಬಳಕೆಯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿಕೊಂಡಿದ್ದರಿಂದ ಅವರಿಗೇನು ತೊಂದರೆ ಕಂಡುಬರುತ್ತಿಲ್ಲ. ಆದರೆ, ನಗರದಲ್ಲಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗದವರಿದ್ದು, ನಗರಸಭೆ ಪೂರೈಸುವ ನೀರನ್ನೇ ಅವಲಂಬಿಸಬೇಕಾಗಿದೆ. ಸರಿಯಾಗಿ ನೀರು ಸಿಗದೆ ಕುಡಿಯಲು ಮತ್ತು ಬಳಕೆಗೆ ಬೇಸಿಗೆ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
    ಸರ್ಕಾರ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ. ವ್ಯಯಿಸಿ, ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದು, ಬೆರಳೆಣಿಕೆಯಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಕೆಟ್ಟು ನಿಂತಿರೆ, ಇನ್ನೂ ಕೆಲವು ಘಟಕಗಳಲ್ಲಿ ಸಲಕರಣೆಗಳು ಸಂಪೂರ್ಣ ಹಾಳಾಗಿವೆ.

    ಲೋಕಾರ್ಪಣೆಗೆ ಕಾಯುತ್ತಿದೆ ಕೆರೆ
    ನಗರದಲ್ಲಿನ ಪ್ರಸ್ತುತ ಜನಸಂಖ್ಯೆಗನುಣವಾಗಿ ಜನರ ಅನೇಕ ವರ್ಷಗಳ ಬೇಡಿಕೆಯಂತೆ ಶಾಸಕ ಎಂ.ಎಸ್.ಸೋಮಲಿಂಗಪ್ಪ 2008ರಿಂದ ಕೆರೆ ನಿರ್ಮಿಸಲು ಪ್ರಯತ್ನಿಸಿದರೂ ಭೂಮಿ ನೀಡಲು ರೈತರು ನಿರಾಕರಿಸಿದ್ದರಿಂದ ಮತ್ತು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕೆರೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. 2013ರಲ್ಲಿ ಬಿ.ಎಂ.ನಾಗರಾಜ ಶಾಸಕರಾದ ಬಳಿಕ 2018ರಲ್ಲಿ ಕೆರೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿತು. ಅಂದಿನ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಕಾಮಗಾರಿ ಮಂದಗತಿಯಲ್ಲಿ ಸಾಗಿತು. ನಂತರ ಶಾಸಕರಾಗಿ ಮರು ಆಯ್ಕೆಯಾದ ಎಂ.ಎಸ್.ಸೋಮಲಿಂಗಪ್ಪ ವಿಶೇಷ ಕಾಳಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಶೀಘ್ರ ಲೋಕಾರ್ಪಣೆ ಮಾಡಿದರೆ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೆ, ಈ ವರ್ಷವೂ ತೊಂದರೆ ನಿಶ್ಚಿತ.

    ಬೇಸಿಗೆಯಲ್ಲಿ ಸಿರಗುಪ್ಪ ನಗರ, ತಾಲೂಕಿನಲ್ಲಿ ಜಲದ ಬವಣೆ
    ಸಿರಗುಪ್ಪ ನಗರದ ಸಿಂಧನೂರು ಬೈಪಾಸ್ ರಸ್ತೆಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಮಿಷನರಿ ಉಪಕರಣಗಳು ಹಾಳಾಗಿರುವುದು.

    ಬೇಸಿಗೆಯಲ್ಲಿ ಹಳ್ಳಿಗರಿಗೆ ಹಾಹಾಕಾರ
    ಸಿರಗುಪ್ಪ ತಾಲೂಕಿನ ವಿವಿಧ ಹಳ್ಳಿಗಳಿಗೆ ಸಂಬಂಧಿಸಿ ಬಹುತೇಕ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಸುಮಾರು ನದಿ ಮೂಲದಿಂದ 3 ಕೆರೆಗಳು, 32 ಕಾಲುವೆ ನೀರಿನಿಂದ ತುಂಬಿಸಲು ಕೆರೆಗಳನ್ನು ನಿರ್ಮಿಸಲಾಗಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಳ್ಳಿಗಳ ಜನ ಬೇಸಿಗೆಯಲ್ಲಿ ಜೀವ ಜಲಕ್ಕೆ ಹಾಹಾಕಾರ ಪಡುವಂತಾಗಿದೆ. ವಿವಿಧ ಯೋಜನೆಗಳಡಿ 114 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದರೂ, ಗ್ರಾಮಾಂತರ ಪ್ರದೇಶದ ಜನರು ಕೊಳವೆ ಬಾವಿಗಳನ್ನೋ ಅಥವಾ ಹಗರಿ ಹಳ್ಳದಲ್ಲಿನ ನೀರನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಮಾತ್ರ ದೂರವಾಗಿಲ್ಲ.

    ಮಂದಗತಿಯಲ್ಲಿ ಸಾಗಿದ ಜೆಜೆಎಂ
    ಸಿರಗುಪ್ಪ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ಗಂಗೆ ನೀಡುವ ಉದ್ದೇಶದಿಂದ ಜೆಜೆಎಂ ಯೋಜನೆಯಡಿ ಕಾರ್ಯಾರಂಭ ಮಾಡಿದ್ದು, ಬೆರಳೆಣಿಕೆಯಷ್ಟು ಗ್ರಾಮಗಳಿಗೆ ಮಾತ್ರ ನೀರು ಸರಬರಾಜಾಗುತ್ತಿದೆ. ಈ ಬಗ್ಗೆ ಅಧಿಕಾಗಳನ್ನು ಕೇಳಿದರೆ ಕೆಲಸಗಳು ನಡೆಯುತ್ತಿವೆ ಕೆಲವೇ ದಿನಗಳಲ್ಲಿ ನೀರು ಪೂರೈಸಲಾಗುವುದೆಂಬ ಹಾರಿಕೆ ಉತ್ತ ನೀಡುತ್ತಿದ್ದಾರೆ. ಗ್ರಾಮಸ್ಥರು ಮಾತ್ರ ಜೆಜೆಎಂ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಇವರು ನಮ್ಮ ಗ್ರಾಮಕ್ಕೆ ನೀರು ಕೊಡುವುದು ಯಾವಾಗ? ಪ್ರಶ್ನಿಸುತ್ತಿದ್ದಾರೆ. ನಮಗೆ ಹಳ್ಳ, ಬೋರ್‌ವೆಲ್, ನದಿ ನೀರೇ ಗತಿಯಾಗಿದ್ದು, ಇರುವ ಕೆರೆಗಳ ನಿರ್ವಹಣೆ ಕೂಡ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಅಧಿಕಾರಿಗಳು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆಂಬುದು ಗ್ರಾಮಸ್ಥರ ಆರೋಪ.

    ಬೇಸಿಗೆಯಲ್ಲಿ ಸಿರಗುಪ್ಪ ನಗರ, ತಾಲೂಕಿನಲ್ಲಿ ಜಲದ ಬವಣೆ
    ಸಿರಗುಪ್ಪ ನಗರಕ್ಕೆ ನೀರು ಸರಬರಾಜು ಮಾಡುವ ತುಂಗಭದ್ರಾ ನದಿಯಲ್ಲಿನ ಪಂಪ್‌ಹೌಸ್.

    ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರ ದೇವಸ್ಥಾನದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ಅದು ಕೂಡ ಆಗಾಗ ಕೆಟ್ಟು ನಿಲ್ಲುತ್ತಿದೆ. ಪ್ರಸ್ತುತ ಕೆಟ್ಟು ನಿಂತು ಹಲವು ದಿನಗಳೇ ಕಳೆದರೂ ದುರಸ್ತಿ ಮಾಡಿಲ್ಲ. ಗ್ರಾಮಸ್ಥರು ಶುದ್ಧ ನೀರು ತರಲು ಗ್ರಾಮದಿಂದ 3 ಕಿ.ಮೀ ದೂರದ ರಾರಾವಿ ಗ್ರಾಮಕ್ಕೆ ತೆರಳಬೇಕು. ಜೆಜೆಎಂ ಯೋಜನೆಯಡಿ ಮನೆ ಮನೆಗೆ ನಳಗಳನ್ನು ಹಾಕಿದ್ದರೂ ನೀರು ಪೂರೈಕೆಯಾಗಿಲ್ಲ. ನೀರು ಪೂರೈಕೆಯಾದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ.
    ಕೆ.ಪಂಪನಗೌಡ
    ಬಗ್ಗೂರು ಗ್ರಾಮಸ್ಥ

    ಪ್ರಸ್ತುತ ತುಂಗಭದ್ರಾ ನದಿಯಲ್ಲಿ ನೀರಿದ್ದು, ಅಲ್ಲಿಂದಲೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರು ಸರಬರಾಜು ಮಾಡುತ್ತಿದ್ದೇವೆ. ನಗರದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾ.22ರಂದು ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಕೆರೆ ಲೋಕಾರ್ಪಣೆಯಾದರೆ ನಗರದ ಜನರ ಕುಡಿಯುವ ನೀರಿನ ಅಭಾವ ನೀಗಲಿದೆ.
    ಜೀವನ್ ಕಟ್ಟಿಮನಿ
    ಪೌರಾಯುಕ್ತ

    ತಾಲೂಕಿನಲ್ಲಿ ಕೆರೆಗಳ ನಿರ್ವಹಣೆ ಸಮರ್ಪಕವಾದೆ. ಜೆಜೆಎಂ ಯೋಜನೆಯಡಿ ಮನೆಮನೆಗೆ ಗಂಗೆ ಕಾರ್ಯಕ್ರಮದಡಿ ಬ್ಯಾಚ್ 1ರಲ್ಲಿ 56 ಕೆಲಸ ಕೈಗೆತ್ತಿಕೊಂಡಿದ್ದು, 52 ಪೂರ್ಣಗೊಂಡಿವೆ. ಬ್ಯಾಚ್ 2 ರಲ್ಲಿ 52 ಕೆಲಸಗಳ ಪೈಕಿ 30 ಪೂರ್ಣ, ಬ್ಯಾಚ್ 3ರಲ್ಲಿ 29 ಕೆಲಸಗಳಲ್ಲಿ 1 ಪೂರ್ಣ, ಬ್ಯಾಚ್ 4ರಲ್ಲಿ 28 ಕೆಲಸಗಳು ಪ್ರಗತಿಯಲ್ಲಿವೆ. ಬೇಸಿಗೆ ಸಮೀಪಿಸಿದ್ದರಿಂದಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
    ರವೀಂದ್ರ ನಾಯಕ್
    ಗ್ರಾಮೀಣ ಕುಡಿಯುವ ನೀರು ಮತ್ತು ನೌರ್ಮಲ್ಯ ಇಲಾಖೆಯ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts