More

    ರಾಜರಾಜೇಶ್ವರಿ ನಗರದಲ್ಲಿ ಸಹೋದರನ ಪರ ಡಿಕೆಶಿ ಮತಬೇಟೆ

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿ ರಾಜರಾಜರೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸರಣಿ ಸಭೆ ನಡೆಸಿ ಮತ ಯಾಚಿಸಿದರು.
    ಮುಖ್ಯವಾಗಿ ಬಹುಮಹಡಿ ವಸತಿ ಸಮುಚ್ಛಯಗಳ ನಿವಾಸಿಗಳ ಪ್ರತ್ಯೇಕ ಸಭೆಗಳನ್ನು ನಡೆಸಿದ ಅವರು ತಮ್ಮ ಸಹೋದರನಿಗೆ ಮತ ನೀಡುವಂತೆ ಕೋರಿದರು. ಬೆಂಗಳೂರಿನ ಮೂಲ ಸೌಕರ್ಯಕ್ಕೆ ತಮ್ಮ ಸರ್ಕಾರ ನೀಡುತ್ತಿರುವ ಆದ್ಯತೆ, ಕ್ಷೇತ್ರದಲ್ಲಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಈ ಪ್ರಚಾರ ಸಭೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಡಿ.ಕೆ ಸುರೇಶ್ ತೋರಿದ ಮಾನವೀಯತೆ ಹಾಗೂ ಹೃದಯವಂತಿಕೆ ಬೇರೆ ಯಾವುದೇ ನಾಯಕರು ತೋರಿಲ್ಲ. ಕುಮಾರಣ್ಣ ಕೂಡ ಮನೆಯಿಂದ ಆಚೆ ಬರಲಿಲ್ಲ. ಮಾತ್ರವಲ್ಲ ಈ ರೀತಿ ಕೆಲಸ ದೇಶದ ಬೇರೆ ಯಾವುದೇ ನಾಯಕ ಮಾಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
    ಕೇಂದ್ರ ಸಚಿವ ಸುರೇಶ್ ಅಂಗಡಿ ಸತ್ತಾಗ ಅವರ ಮೃತದೇಹವನ್ನು ರಾಜ್ಯಕ್ಕೆ ತರದೆ ದೆಹಲಿಯಲ್ಲೇ ಜೆಸಿಬಿ ಮೂಲಕ ಗುಂಡಿಗೆ ಹಾಕಿದರು. ಆದರೆ ಸುರೇಶ್ ಖುದ್ದಾಗಿ ಆಸ್ಪತ್ರೆಗೆ ಹೋಗಿ ಅವರಿಗೆ ಔಷಧಿ ಕೊಡಿಸಿದ್ದಲ್ಲದೆ ಸೊಂಕಿತರಿಗೆ ಆತ್ಮವಿಶ್ವಾಸ ತುಂಬಿದರು. ಪ್ರತಿ ಮನೆ ಮನೆಗೆ ಔಷಧಿ ಕಿಟ್ ಹಂಚಿದ್ದಾರೆ. ಅನಾಥ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ನೀಡಿದ್ದಾರೆ ಎಂದರಲ್ಲದೇ, ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ ರೈತರನ್ನು ರಕ್ಷಿಸಲು ತಮ್ಮ ಜೇಬಿನಿಂದ ಕೋಟ್ಯಂತರ ರುಪಾಯಿ ಖರ್ಚು ಮಾಡಿ ರೈತರಿಂದ ಹಣ್ಣು, ತರಕಾರಿ ಖರೀದಿಸಿ ಅದನ್ನು ಜನರಿಗೆ ಉಚಿತವಾಗಿ ಹಂಚಿದ್ದಾರೆ ಎಂದರು.
    ನಾವು ಯಾರ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ಅಗತ್ಯವಿಲ್ಲ. ಸುರೇಶ್ ಮಾಡಿರುವ ಕೆಲಸಕ್ಕೆ ಜನ ಮತ ಹಾಕುತ್ತಾರೆ. ಜನ ಉಪಕಾರ ಸ್ಮರಣೆ ಮಾಡುತ್ತಾರೆ ಎಂದ ಅವರು ಮೈತ್ರಿ ಸರ್ಕಾರವನ್ನು ಬೀಳಿಸಿದ ಬಿಜೆಪಿ ನಾಯಕರ ಜತೆಗೆ ಕುಮಾರಣ್ಣ ತಬ್ಬಾಡುತ್ತಿದ್ದಾರೆ. ಇದನ್ನು ಆ ಮತದಾರರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.
    ರಾಜರಾಜೇಶ್ವರಿ ನಗರ ದೇವರ ಹೆಸರಲ್ಲಿದೆ. ಅಲ್ಲಿ ಪ್ರಚಾರ ಆರಂಭಿಸುವ ಮುನ್ನ ಆ ದೇವರ ಹೆಸರಲ್ಲಿ ಪೂಜೆ ಮಾಡುತ್ತೇವೆ. ಆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈಗ ದೊಡ್ಡ ಬದಲಾವಣೆ ಮಾಡಲು ಜನ ಮುಂದಾಗಿದ್ದಾರೆ. ಉಪ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸೋತರೆ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 10 ಸಾವಿರ ಮತಗಳಿಂದ ಸೋತಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25-30 ಸಾವಿರ ಮುನ್ನಡೆ ಪಡೆಯುವ ವಿಶ್ವಾಸವಿದೆ ಎಂದರು.
    ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಜನರಿಗೆ ಅರಿವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಇಲ್ಲಿ ಬದಲಾವಣೆ ತರಲು ಮಾಸ್ಟರ್ ಪ್ಲಾನ್ ಮಾಡಿದ್ದೇನೆ ಎಂದು ತಿಳಿಸಿದರು.
    ಪ್ರಚಾರ ಸಭೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಪಕ್ಷದ ಇತರೆ ಮುಖಂಡರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts