More

    ಜೀವನದಲ್ಲಿ ಅನುಭವವೇ ಬಂಡವಾಳ…

    ಜೀವನದಲ್ಲಿ ಅನುಭವವೇ ಬಂಡವಾಳ...

    ನಮ್ಮೆಲ್ಲರ ಜೀವನದಲ್ಲಿ ಎಷ್ಟೋ ಅವಕಾಶಗಳು ಬರುತ್ತವೆ. ಆಗ ಬಂದಿರೋ ಅಪೂರ್ವ ಅವಕಾಶಾನ ಯಾವುದೇ ಕಾರಣಕ್ಕೂ ಬಿಡಬೇಡಿ. ಮತ್ತೊಂದು ಅವಕಾಶ ಬರಬಹುದು, ಆದರೆ ಕಳೆದುಹೋದ ಅವಕಾಶವೇ ಮತ್ತೊಮ್ಮೆ ಬರಲಾರದು. ನೀವು ವ್ಯಾಪಾರಸ್ಥರೋ, ವೃತ್ತಿಪರರೋ ಆಗೋಕೆ ಹೊರಟಾಗ ಮೊದಮೊದಲು ಹೆಚ್ಚಿನ ಲಾಭ ಇಲ್ಲದ ಕೆಲಸಗಳು ಬರಬಹುದು. ಅದರಿಂದ ಬರೋ ಲಾಭ ಸಾಕಾಗೋದಿಲ್ಲ ಅಂತ ಬಂದ ಅವಕಾಶಗಳನ್ನೆಲ್ಲ ಬಿಟ್ಟು ಬೇರೆ ಅವಕಾಶಕ್ಕಾಗಿ ಕಾಯುತ್ತ ಸುಮ್ಮನೆ ಕೂರೋದು ಬುದ್ಧಿವಂತಿಕೆಯಲ್ಲ. ಯಾವುದಾದರೂ ಕೆಲಸದಿಂದ ಪ್ರಾರಂಭಿಸಿ. ಮುಂದೆ ತನ್ನಿಂದ ತಾನೇ ದಾರಿ ಕಾಣಿಸುತ್ತದೆ. ಥಿಯೇಟರಲ್ಲಿ ಚಿತ್ರ ಪ್ರಾರಂಭವಾದ ನಂತರ ಥಿಯೇಟರ್ ಒಳ ಹೊಕ್ಕರೆ ಕತ್ತಲಲ್ಲಿ ಹೇಗೆ ದಾರಿ ಕಾಣದೇ ನಂತರ ನಿಧಾನವಾಗಿ ಎಲ್ಲ ಗೋಚರಿಸುತ್ತದೋ ಹಾಗೆ ಬದುಕು ಕೂಡ ನಿಧಾನವಾಗಿ ರೂಪಿಸಲ್ಪಡುತ್ತದೆ. ಅನುಭವ ಅನ್ನೋದು ಹಣಕ್ಕಿಂತಲೂ ದೊಡ್ಡದು. ಹಣ ಸಂಪಾದನೆ ಮಾಡುವ ಕೌಶಲ ತಂದುಕೊಡುವುದೇ ಅನುಭವ! ಹಾಗಾಗಿ ಯಾವುದೇ ಕೆಲಸ ಮಾಡಲು ರಾಜಿಯಾಗುವುದು ಒಳ್ಳೆಯದು.

    ಅನುಭವ ಹೇಗೆ ಲಾಭದಾಯಕವಾಗುತ್ತದೆ ಹೇಳ್ತೀನಿ ಕೇಳಿ. ಒಂದ್ಸಲ ಮುಂಬೈಯಲ್ಲಿ ಮ್ಯಾಜಿಕ್ ಶೋ ಕಾಂಪಿಟೇಶನ್ ಇಟ್ಟಿದ್ರು. ಅನೇಕ ಜಾದೂಗಾರರು ಭಾಗವಹಿಸಿದ್ದರು. ಅದ್ರಲ್ಲಿ ಮೊದಲ ವಿಜೇತನಿಗೆ ಬಹುಮಾನ ವಿದೇಶ ಪ್ರಯಾಣ. ಮಾರಿಷಸ್ ದೇಶದ ಉಸ್ತಾದ್ ರಾಜಾ ಎಂಬಾತ ಬಂದಿದ್ದ. ಆತ, ‘ಯಾರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೋ ಅವರನ್ನು ಮಾರಿಷಸ್​ಗೆ ಕರೆದುಕೊಂಡು ಹೋಗ್ತೇನೆ, ಒಂದು ತಿಂಗಳ ಕ್ಯಾಂಪು. ಒಟ್ಟಿಗೆ ನಲವತೆôದು ಶೋ ಕೊಡಬೇಕು’ ಅಂತ ಪ್ರಕಟಣೆ ಕೊಟ್ಟ. ಅದು ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸಂದರ್ಭ. ಎಲ್ಲ ಜಾದೂಗಾರರೂ ಮಾತೇ ಆಡದೆ ಮ್ಯಾಜಿಕ್ ಮಾಡಿದರೆ ನಾನು ಮಾತ್ರ ತಮಾಷೆಯ ಡೈಲಾಗ್​ಗಳನ್ನು ಹೇಳುತ್ತ, ಸ್ಟೈಲಾಗಿ ಡಾನ್ಸ್ ಮಾಡುತ್ತ, ಎಲ್ಲರನ್ನು ನಗಿಸುತ್ತ ಶೋ ಕೊಟ್ಟೆ. ಎಲ್ಲರಿಗೂ ಇದು ಇಷ್ಟವಾಯ್ತು. ನನಗೇ ಪ್ರಥಮ ಬಹುಮಾನ ಬರುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು. ನಾನೂ ನಿರೀಕ್ಷಿಸಿದ್ದೆ. ಆದರೆ ನನಗೆ ಯಾವುದೇ ಬಹುಮಾನ ಬರಲಿಲ್ಲ. ನಿರಾಶೆಯಾಯ್ತು. ಪ್ರಥಮ ಬಹುಮಾನ ಮಹಾರಾಷ್ಟ್ರದ ಅತುಲ್ ಪಾಟೀಲರ ಪಾಲಾಯ್ತು. ಆಗ ರಾಜಾ ವೇದಿಕೆ ಮೇಲೆ ಬಂದು, ‘ಜನ ಉದಯ್ ಜಾದೂಗಾರ್ ಶೋ ಇಷ್ಟ ಪಟ್ಟಿದ್ದಾರೆ. ನಾನಂತೂ ತುಂಬ ಇಷ್ಟಪಟ್ಟಿದ್ದೇನೆ. ಹಾಗಾಗಿ ಅವರನ್ನೇ ಆಹ್ವಾನಿಸುತ್ತೇನೆ’ ಅಂತ ಹೇಳಿದ. ನಾನೂ ಒಪ್ಕೊಂಡು ‘ವ್ಯವಹಾರ ಹೇಗೆ’ ಅಂತ ಕೇಳಿದೆ. ‘ನಾನು ಅಡ್ವಾನ್ಸ್ ಕೊಟ್ಟು ನೀವು ಬಾರದಿದ್ರೆ? ಅದಕ್ಕೆ ನೀವೇ ಮಾರಿಷಸ್​ಗೆ ಬಂದುಬಿಡಿ. ಅಲ್ಲಿ ಬಂದ ಮೇಲೆ ವಿಮಾನದ ಟಿಕೆಟ್ ಖರ್ಚು, ವಸತಿ ಖರ್ಚನ್ನು ನೀವು ಹಿಂದಿರುಗುವಾಗ ಕೊಡ್ತೀನಿ. ಶೋಗೆ ಮಾತ್ರ ನಾನು ಕೊಟ್ಟಷ್ಟು ತಗೋಬೇಕು’ ಅಂತ ಅಂದ.

    ಒಂದು ವೇಳೆ ಆತ ಕೊಡದೇ ಇದ್ದರೆ ಅಂತ ನಾನು ಯೋಚಿಸುತ್ತ ಕುಳಿತಿದ್ದರೆ ವಿದೇಶಗಳಲ್ಲೂ ಶೋ ಕೊಡುವ ಅವಕಾಶ ಕೈತಪ್ಪಿ ಹೋಗ್ತಿತ್ತು. ನನ್ನ ವರ್ಷಗಟ್ಟಲೆ ಶ್ರಮ ವ್ಯರ್ಥ ಆಗ್ತಿತ್ತು. ‘ಅವಕಾಶಗಳನ್ನು ಬಿಟ್ಟವನು ಅದೃಷ್ಟವನ್ನೂ ಬಿಟ್ಟವನು’ ಅಂತ ಧಾರಾಳವಾಗಿ ಹೇಳಬಹುದು. ಇದನ್ನೇ ‘ಅವಕಾಶ ಪದೇಪದೆ ಬಾಗಿಲು ತಟ್ಟುವುದಿಲ್ಲ…’ ಅಂತ ಇಂಗ್ಲಿಷಿನಲ್ಲಿ ಹೇಳ್ತಾರೆ. ಹಾಗಾಗಿ ಸರಿ ಅಂತ ಒಪ್ಪಿಕೊಂಡು ಅಲ್ಲಿಗೆ ನನ್ನ ಖರ್ಚಲ್ಲೇ ಹೋದ ನನ್ನನ್ನು ಕೆಟ್ಟದಾಗಿ ನೋಡಿಕೊಂಡ. ಆತ ಮನೆರಿಪೇರಿ ಮಾಡಿಸ್ತಿದ್ದ. ಅದಕ್ಕೆ ನಾನೇ ಪೇಂಟ್ ಮಾಡಬೇಕಾಗಿತ್ತು. ಇಲ್ಲದಿದ್ದರೆ ಊಟ ಹಾಕುತ್ತಿರಲಿಲ್ಲ. ಅದು ಚೆನ್ನಾಗಿರ್ತಿರಲಿಲ್ಲ. ಅದಕ್ಕೆ ಲೀಚಿ ಹಣ್ಣುಗಳನ್ನು ತಿನ್ನುತ್ತಿದ್ದೆ. ಎಂಥ ಪರಿಸ್ಥಿತಿ ಅಂದ್ರೆ ಬಿಡುವಿಲ್ಲದೆ ಶೋ ಕೊಡೋದಲ್ಲದೆ ಕೆಲವು ಸಲ ಅವನ ಮಕ್ಕಳನ್ನು ನೋಡಿಕೊಳ್ಳೋ ಕೆಲಸಾನೂ ಮಾಡಬೇಕಾಗ್ತಿತ್ತು. ಗ್ರಹಚಾರಕ್ಕೆ ನಾನೇನೂ ಇಲ್ಲಿಂದ ಹೋಗ್ತಾ ದುಡ್ಡು ತೆಗೆದುಕೊಂಡು ಹೋಗಿರಲಿಲ್ಲ, ಹೇಗಿದ್ದರೂ ಅಲ್ಲಿ ಕೊಡ್ತಾನಲ್ಲಾ ಅಂತ. ವಾಪಸ್ಸು ಬರೋಣಾಂದ್ರೆ ನನ್ನ ಪಾಸ್​ಪೋರ್ಟ್​ನ್ನು ಹೋದ ತಕ್ಷಣ ಕಿತ್ತುಕೊಂಡು ತನ್ನ ಹತ್ತಿರ ಇಟ್ಟುಕೊಂಡುಬಿಟ್ಟಿದ್ದ. ಆತ ಒಬ್ಬ ಹುಚ್ಚು ಸ್ವಭಾವದ ಮನುಷ್ಯ. ಆದ್ರೆ ಅವನಿಂದ ಎಷ್ಟೇ ಕಷ್ಟ ಆದ್ರೂ ನನ್ನ ಮ್ಯಾಜಿಕ್ ಶೋ ಮುಗಿಸಿಯೇ ಹೋಗ್ಬೇಕು ಅಂತ ನಿರ್ಧಾರ ಮಾಡಿದೆ. ಶೋಗಳೆಲ್ಲ ಚೆನ್ನಾಗಿ ನಡೆದು ಆತ ಸಕ್ಕತ್ ದುಡ್ಡು ಬಾಚಿದ, ಕೊನೆಗೆ ನನಗೆ ಚಿಕ್ಕಾಸೂ ಕೊಡದೆ ಕೈಕೊಟ್ಟ. ಆ ದೇಶದಲ್ಲಿ ನನಗೆ ಹಣವೇ ಸಿಗಲಿಲ್ಲ ನಿಜ, ಆದರೆ ಅಪಾರ ಅನುಭವ, ಪ್ರಚಾರ ಸಿಕ್ಕಿತು. ಬೇರೆ ದೇಶಗಳಿಗೆ ಹೋದಾಗ ಹೇಗೆ ವ್ಯವಹರಿಸಬೇಕು, ಏನೆಲ್ಲ ಸಮಸ್ಯೆಗಳು ಎದುರಾಗುತ್ತೆ ಅನ್ನೋದು ಸ್ಪಷ್ಟವಾಗಿ ತಿಳಿಯಿತು. ಹೀಗೆ ಅನುಭವವನ್ನೇ ಬಂಡವಾಳ ಮಾಡಿಕೊಂಡು ಎಲ್ಲ ದೇಶಕ್ಕೆ ಹೋಗಿ ಮ್ಯಾಜಿಕ್ ಶೋ ಮಾಡಿ ಬಂದೆ.

    ತೋರಿಕೆಗೆ ಏನೂ ಮಾಡಬೇಡಿ: ಬರೀ ಬಿಜಿನೆಸ್ ಬಗ್ಗೆ ಹೇಳೋಕ್ಕಿಂತ ಸ್ವಲ್ಪ ಬುದ್ಧಿವಾದನೂ ಹೇಳ್ತಿನಿ, ಕೇಳಿ. ನಾನು ಹವಾಯಿ ಚಪ್ಪಲಿ ಹಾಕ್ಕೊಂಡ್ರೆ ಅವರೇನು ಅಂದ್ಕೋತಾರೋ… ನಾನು ಹಳೆಯ ಶರ್ಟ್ ಹಾಕ್ಕೊಂಡ್ರೆ ಇವರೇನು ಅಂದ್ಕೋತಾರೋ ಅಂತೆಲ್ಲ ಭಾವಿಸಿ ಸಾಲಸೋಲ ಮಾಡಿ ದುಬಾರಿ ಬಟ್ಟೆ, ಶೂ ಹಾಕಿಕೊಳ್ಳೋರನ್ನು ನೀವು ನೋಡೇ ಇರ್ತೀರಿ. ನಿಮ್ಮನ್ನು ಅವರು ಏನೇ ಅಂದ್ಕೊಂಡಿದ್ರೂ ಕೊನೆಗೆ ನಿಮ್ಮಲ್ಲಿ ದುಡ್ಡು ಇದೆ ಅಂದ್ರೆ ಮಾತ್ರ ನಿಮಗೆ ಬೆಲೆ ಕೊಡೋದು. ನಿಮ್ಮ ಬಳಿ ದುಡ್ಡಿಲ್ಲ ಅಂತ ಅವರಿಗೆ ಗೊತ್ತಾದ ತಕ್ಷಣ ನೀವು ಎಂಥ ಸೂಟ್ ಹಾಕಿಕೊಂಡಿದ್ರೂ ನಿಮ್ಮ ಮೇಲಿನ ಗೌರವ ಅವರಿಗೆ ಇಲ್ಲವಾಗುತ್ತೆ. ಆದ್ದರಿಂದ ತೋರಿಕೆಗೆ ಏನೂ ಮಾಡಬೇಡಿ. ಇನ್ನೊಬ್ಬರೆದುರಿಗೆ ನಮ್ಮ ಪ್ರತಿಷ್ಠೆ ತೋರಿಸಿಕೊಳ್ಳೋದು ದುಶ್ಚಟ.

    ದುಡ್ಡು ತುಂಬ ಸಲ ಹಾವಿದ್ದಂತೆ. ಅದನ್ನು ಹೆಚ್ಚು ಹೊತ್ತು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಡಿ. ಬ್ಯಾಂಕಿನಿಂದ ದುಡ್ಡು ಡ್ರಾ ಮಾಡೋವಾಗ ತುಂಬ ಕೇರ್​ಫುಲ್ ಆಗಿರಬೇಕು. ಒಂದೇ ಸಲ ಎರಡು-ಮೂರು ಬ್ಯಾಂಕಿನಿಂದ ಹಣ ಡ್ರಾ ಮಾಡಬೇಕಾದಾಗ ಎಲ್ಲ ಹಣ ಒಟ್ಟಿಗೇ ಇಟ್ಟುಕೊಳ್ಳುವುದು ಅಪಾಯ. ಓಡಾಟ ಜಾಸ್ತಿ ಆದರೂ ಪರವಾಗಿಲ್ಲ. ಒಂದು ಬ್ಯಾಂಕಿನಿಂದ ಡ್ರಾ ಮಾಡಿದ ಹಣ ತಂದು ಮನೆಯಲ್ಲೋ, ಆಫೀಸ್​ನಲ್ಲೋ ಇಟ್ಟು ಮತ್ತೆ ಇನ್ನೊಂದು ಬ್ಯಾಂಕಿಗೆ ಹೋಗಿ. ಪೇಪರ್​ಗಳಲ್ಲಿ ಓದ್ತಾ ಇರ್ತೀರಾ… ದರೋಡೆ, ಲೂಟಿ, ಕಳ್ಳತನ ಎಷ್ಟು ಹೆಚ್ಚಾಗಿದೆ ಅಂದ್ರೆ ಬರೀ ವಾಚ್, ಉಂಗುರ ಇಷ್ಟಕ್ಕೇ ಕತ್ತು ಕತ್ತರಿಸಿಬಿಡ್ತಾರೆ. ಶ್ರೀಮಂತರಂತೆ ಪೋಸು ಕೊಡಬೇಡಿ. ರೋಲ್ಡ್ ಗೋಲ್ಡ್ ಒಡವೆ ಹಾಕಿದ ಹೆಂಗಸೊಬ್ಬಳನ್ನು ಆಕೆಯ ಮನೆ ಕೆಲಸದವಳು ‘ಇದು ಬಂಗಾರದ್ದಾ?’ ಎಂದು ಕೇಳಿದಾಗ ‘ಹೌದು’ ಅಂತ ಹೇಳಿದ್ಲು. ತಕ್ಷಣ ಕೆಲಸದವಳು ಆಕೆಯ ಕೊಲೆ ಮಾಡಿ ಒಡವೆ ಒಯ್ದಳು. ಅದು ಬಂಗಾರದ್ದಲ್ಲ ಅಂತ ಹೇಳದೇ ಇದ್ದುದರಿಂದ ಆಕೆಯ ಕೊಲೆಯಾಯ್ತು. ಇನ್ನು ಹಣ ಅಥವಾ ಬೆಲೆಬಾಳುವ ಒಡವೆಗಳನ್ನು ಮನೇಲಿ ಇಡಲೇಬೇಡಿ. ಈಗಿನ ಕಾಲದಲ್ಲಿ ಯಾರನ್ನೂ ಪೂರ್ತಿಯಾಗಿ ನಂಬಲಾಗುವುದಿಲ್ಲ. ನೀವೊಬ್ಬರೇ ಇರುವ ಸಮಯದಲ್ಲಿ ನಿಮ್ಮ ಮನೆ ಕೆಲಸದವರೋ ಅಥವಾ ನಿಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತಿರೋ ಅಂಥವರೇ ನಿಮ್ಮ ತಲೆ ಒಡೆದು ಸಂಪತ್ತನ್ನು ದೋಚಬಹುದು. ಬ್ಯಾಂಕಿನ ಸೇಫ್ ಡೆಪಾಸಿಟ್ ಲಾಕರ್​ನಲ್ಲಿ ಒಡವೆ ಇಡೋದು ಜಾಣತನ. ಹಾಗೇ ಇನ್ನೊಬ್ಬರನ್ನ ಮೆಚ್ಚಿಸೋಕೆ ಅಂತ ಮನೆ ತುಂಬ ಅನಗತ್ಯವಾದ ಸಾಮಾನು ತುಂಬಿಕೋಬೇಡಿ. ಅವಶ್ಯಕತೆ ಇರುವಷ್ಟು ಮಾತ್ರ ಕೊಂಡುಕೊಂಡು ಬಳಸಿ. ಜನರನ್ನ ಮೆಚ್ಚಿಸೋದಕ್ಕೆ ಹೋಗಿ ಹಣವನ್ನು ದುಂದುವೆಚ್ಚ ಮಾಡಿದರೆ ಒಂದಿನ ನಿಮ್ಮ ಕೈ ಖಾಲಿ ಆಗಿರುತ್ತೆ. ಆ ದಿನ ನಿಮ್ಮನ್ನ ಮೆಚ್ಚಿದ್ದ ಜನ ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಯಾರೋ ದುಡ್ಡು ಕೊಳೀತಾ ಇರೋ ಅಂಥವು› ಲಕ್ಷುರಿಯಾಗಿ ಬಂಗಲೆ ಕಟ್ಟಿಸಿಕೊಂಡಾಗ ಅವರ ಪ್ರತಿಷ್ಠೆಗೆ ತಕ್ಕಂತೆ ಅವರಿಗೆ ಬೇಡದಿದ್ದರೂ ಹೊಸ ಹೊಸ ಐಟಂಗಳನ್ನು ತಂದು ತುಂಬಿಕೊಳ್ತಾರೆ. ಆದರೆ ಕಷ್ಟಪಟ್ಟು ಬೆವರು ಸುರಿಸಿ ದುಡಿದ ನಿಮ್ಮ ಹಣವನ್ನು ಹಾಗೆಲ್ಲ ವೇಸ್ಟ್ ಪದಾರ್ಥಗಳಿಗಾಗಿ ಕರಗಿಸಿಕೊಳ್ಳಬೇಡಿ. ‘ಆಪತ್ತಿನಲ್ಲಿ ಆಗುವವ ನೆಂಟ’ ಅನ್ನೋದೊಂದು ಗಾದೆಯಿದೆ. ಆದರೆ ಆಪತ್ತಿನಲ್ಲಿ ಆಗುವ ಆ ನೆಂಟನ ಬಳಿಯೂ ‘ಹಣ’ ಇದ್ದರೆ ಮಾತ್ರ ಅವನು ನಿಮಗೆ ನೆರವಾಗಲು ಸಾಧ್ಯ ಅನ್ನೋದನ್ನು ನೆನಪಿನಲ್ಲಿಡಿ. ನೆಂಟನ ನಂಬೋ ಬದಲು ಬ್ಯಾಂಕಿನಲ್ಲಿ ಇಟ್ಟಿರೋ ಗಂಟನ್ನು ನಂಬುವುದು ಒಳ್ಳೆಯದಲ್ಲವೇ?

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts