More

    ಭಾರತದಲ್ಲಿ ಮರೆಯಾಗುತ್ತಿದೆ ಪುರಾತನ ಸಂಸ್ಕೃತಿ

    ಕೊಕಟನೂರ: ಪಾಶ್ಚಿಮಾತ್ಯ, ಮೊಗಲ್ ಸಂಸ್ಕೃತಿಯ ದಾಳಿಯಿಂದಾಗಿ ಋಷಿಮುನಿಗಳು ಹಾಕಿದ ಸನಾತನ ಸಂಸ್ಕೃತಿ ಇಂದು ಭಾರತದಲ್ಲಿ ನಶಿಸುತ್ತಿದೆ ಎಂದು ಕಕಮರಿ ರಾಯಲಿಂಗೇಶ್ವರ ಸಂಸ್ಥಾನ ಮಠದ ಅಭಿನವ ಗುರುಲಿಂಗಜಂಗಮ ಶ್ರೀ ಕಳವಳ ವ್ಯಕ್ತಪಡಿಸಿದ್ದಾರೆ.

    ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ತಾಲೂಕು ಘಟಕದ ಆಶ್ರಯದಲ್ಲಿ ಡಿ. 27 ರಂದು ಅವರಖೋಡದಲ್ಲಿ ಜರುಗಲಿರುವ ಹನುಮ ಮಾಲಾ ಹಾಗೂ ಹೋಮ ಕಾರ್ಯಕ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಬೈಠಕ್‌ನಲ್ಲಿ ಅವರು ಮಾತನಾಡಿದರು.

    ಇಂದು ವಿದೇಶಿ ಶಿಕ್ಷಣ ಪ್ರಭಾವದಿಂದ ಭಾರತೀಯರ ವೇಷ, ಭಾಷೆ, ಆಹಾರ ಪದ್ಧತಿ ಬದಲಾಗುತ್ತಿದೆ. ಯುವಜನತೆ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದಿದ್ದ ಗುರು-ಹಿರಿಯರ ಗೌರವ ಭಾವನೆ ಇಂದು ಮಾಯವಾಗಿದೆ. ಗುರು-ಶಿಷ್ಯರ ಸಂಬಂಧದಲ್ಲಿ ಪೂಜ್ಯ ಭಾವನೆ ಮರೆಯಾಗಿದೆ. ಈ ಹಿಂದೆ ಪ್ರತಿಯೊಂದು ಗ್ರಾಮಗಳಲ್ಲಿ ಗರಡಿ ಮನೆ, ವ್ಯಾಯಾಮ ಶಾಲೆಗಳಿದ್ದವು, ಇಂದು ಬಾರ್ ಮತ್ತು ಹೋಟೆಲ್‌ಗಳು ಕಾಣಸಿಗುತ್ತಿವೆ. ಈ ಪದ್ಧತಿ ಬದಲಾಗಬೇಕು. ಯುವಜನರು ದೇಶದ ಆಸ್ತಿ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರನ್ನು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಗಟ್ಟಿಗೊಳಿಸಬೇಕು. ನಮ್ಮ ದೇಶ, ಭಾಷೆ, ಸಂಸ್ಕೃತಿಯ ಕುರಿತು ಅವರಿಗೆ ಪ್ರಾಥಮಿಕ ಹಂತದಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಪಾಲಕರು, ಶಿಕ್ಷಕರು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದರು.

    ವಿಎಚ್‌ಪಿ ಹಾಗೂ ಬಜರಂಗದಳ ಬೆಳಗಾವಿ ಜಿಲ್ಲಾಧ್ಯಕ್ಷ ಆರ್.ಕೆ.ಬಾಗಿ ಮಾತನಾಡಿ, ಪ್ರತಿವರ್ಷ ಅಂಜನಾದ್ರಿಯಲ್ಲಿ ಸಹಸ್ರಾರು ಮಾಲಾಧಾರಿಗಳು ಸೇರುತ್ತಿರುವುದು ಇತಿಹಾಸ. ಆದರೆ, ಈ ವರ್ಷ ಕರೊನಾ ಕಾರಣ ಪ್ರತಿ ತಾಲೂಕಿನಲ್ಲಿ ಜಾಗೃತ ಹನುಮ ದೇವಸ್ಥಾನದಲ್ಲಿ ಹೋಮ ಹಾಗೂ ಹನುಮ ಮಾಲಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಲ್ಯಾಳದ ಅಭಿನವ ಗುರುಸಿದ್ಧ ಸ್ವಾಮೀಜಿ, ನದಿ ಇಂಗಳಗಾಂವದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಅಲ್ಲದೆ, ಕಾಯಕದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜೀ ಮಾತನಾಡಿದರು.

    ವಿ.ದೇಶಪಾಂಡೆ, ರಮೇಶ ತೇಲಿ, ಜಿಲ್ಲಾ ಮಾತೃಶಕ್ತಿ ಕಮಿಟಿ ಅಧ್ಯಕ್ಷೆ ವೈಷ್ಣವಿ ಕುಲಕರ್ಣಿ, ರಾಜಕುಮಾರ ಜಂಬಗಿ, ಮಹಾಂತೇಶ ಜಿವೋಜಿ, ಸಂತೋಷ ನಾಯಕ, ವೀರೇಶ ಮಡಿವಾಳ, ವಿನಾಯಕ ಕಾವೇರಿ, ಓಂಕಾರ ಮಾಳಿ, ನ್ಯಾಯವಾದಿ ಸತೀಶ ಪಾಟಣಕರ, ಅರುಣ ಕೋಹಳ್ಳಿ, ಶಿವಾಜಿ ಡಂಬಳಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts