More

    ಗೃಹಬಂಧನದಲ್ಲಿ ಮಾನಸಿಕ ಅಸ್ವಸ್ಥ

    ಬೆಳಗಾವಿ: ಬೀಗ ಹಾಕಿದ ಪಾಳುಬಿದ್ದ ಮನೆಯಲ್ಲಿಯೇ ಮಾನಸಿಕ ಅಸ್ವಸ್ಥನೋರ್ವನನ್ನು ಕುಟುಂಬ ಸದಸ್ಯರೇ ಎಂಟು ವರ್ಷಗಳಿಂದ ಕೂಡಿ ಹಾಕಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ವಿಠ್ಠಲ್ ಸಿದ್ದಪ್ಪ ಬಳಗಣ್ಣವರ (42) ಬಂಧಿಯಾಗಿರುವ ವ್ಯಕ್ತಿ. ಕೈ-ಕಾಲಿಗೆ ಬೇಡಿ, ಮೈಮೇಲೆ ಬಟ್ಟೆಯಿಲ್ಲದೆ ಕುಂತಲ್ಲಿಯೇ ನಿಸರ್ಗ ಕ್ರಿಯೆ ಮಾಡಬೇಕಿತ್ತು. ಮನೆಯವರು ಇಡೀದಿನ ಕೇವಲ ಎರಡು ಹೊತ್ತು ಮಾತ್ರ ಊಟ ಕೊಡುತ್ತಿದ್ದರಿಂದ ಅಸ್ವಸ್ಥನ ಜೀವನ ನರಕದಂತಾಗಿತ್ತು.

    ಬುದ್ಧಿ ಭ್ರಮಣೆ: ಮಾನಸಿಕ ಅಸ್ವಸ್ಥ ಬೆಳಗಾವಿಯ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತ ಕುಟುಂಬಕ್ಕೆ ಆಧಾರವಾಗಿದ್ದ. ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ವಿಠ್ಠಲ್, ಹೋಟೆಲ್ ಬಿಟ್ಟು ಊರಲ್ಲಿ ಜಮೀನಿನಲ್ಲಿ ಕೆಲಸ ಮಾಡಲಾರಂಭಿಸಿದ. ಬರಬರುತ್ತ ಜನರಿಂದ ದೂರವೇ ಉಳಿದು ಏಕಾಂತವಾಗಿಯೇ ಇರಲಾರಂಭಿಸಿದ. ಬಳಿಕ ಬುದ್ಧಿ ಭ್ರಮಣೆಯಾಗಿ ಜನರ ಮೇಲೆ ಏಕಾಏಕಿ ಹಲ್ಲೆ ಮಾಡಲಾರಂಭಿಸಿದ.

    ಮೊದ ಮೊದಲು ಆಸ್ಪತ್ರೆಗೆ ತೋರಿಸಿದ್ದ ಪಾಲಕರು, ಕಡೆಗೆ ಬೇಸತ್ತು ಕೈ-ಕಾಲಿಗೆ ಬೇಡಿ ಹಾಕಿ ನೋಡಿದರು. ಆದರೂ, ಕಾಟ ತಡೆದುಕೊಳ್ಳಲಾಗದೆ ಯಾರೂ ವಾಸವಿರದಿದ್ದ ಮನೆಯೊಳಗೆ ಕೂಡಿಹಾಕಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬೇಡಿ ತೆಗೆದರೆ ಜನರಿಗೆ ಕಲ್ಲಿನಿಂದ ಹೊಡೆಯುತ್ತಾನೆಂಬ ಭಯ ಕುಟುಂಬಸ್ಥರನ್ನು ಕಾಡುತ್ತಿದೆ.

    ಬೇರೆಯವರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಮನೆಯಲ್ಲಿ ಕೂಡಿಹಾಕಿದ್ದೇವೆ ಎಂದು ತಾಯಿ ಭೀಮವ್ವ ಕಣ್ಣೀರು ಹಾಕುತ್ತಾರೆ. ಈ ಮಾಹಿತಿ ತಿಳಿದ ಅಧಿಕಾರಿಗಳು, ನೇಸರಗಿ ಠಾಣೆ ಪೊಲೀಸರ ಸಹಾಯದಿಂದ ಪಾಳು ಮನೆಯಲ್ಲಿದ್ದ ಬಂಧಿಯಾಗಿದ್ದ ವಿಠ್ಠಲ್‌ನನ್ನು ಬಿಡುಗಡೆಗೊಳಿಸಿ ಧಾರವಾಡ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts