More

    ಇದ್ದೂ ಇಲ್ಲದಂತಾದ ಭೆಂಡವಾಡ ಪಶು ಆಸ್ಪತ್ರೆ

    ರಾಯಬಾಗ: ಪಶುಗಳ ಆಹಾರ, ಔಷಧ ಸಂಗ್ರಹಣೆ, ಆರೋಗ್ಯ ತಪಾಸಣೆಗೆ ಉಪಯೋಗವಾಗಬೇಕಾದ ಪಶು ಆಸ್ಪತ್ರೆ ಕಟ್ಟಡ,
    ಬೇರೊಂದು ಕಟ್ಟಡ ನಿರ್ಮಾಣದ ವಸ್ತುಗಳನ್ನು ಸಂಗ್ರಹಿಸಿಡುವ ಗೋದಾಮಾಗಿರುವುದು ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ.

    ತಾಲೂಕಿನ ಭೆಂಡವಾಡ ಗ್ರಾಮದಲ್ಲಿರುವ ಆಸ್ಪತ್ರೆ ಪಶುಗಳಿಗೆ ಚಿಕಿತ್ಸೆ ನೀಡಲು ಉಪಯೋಗವಾಗುವ ಬದಲಾಗಿ, ಪಶು ಆಸ್ಪತ್ರೆ ಪಕ್ಕದಲ್ಲಿ ಜಿಪಂನಿಂದ ನಿರ್ಮಿಸುತ್ತಿರುವ ಮೇಲ್ಮಟ್ಟದ ಜಲಸಂಗ್ರಹಗಾರ ಸಾಮಗ್ರಿ ಇಡುವ ಸ್ಥಳವಾಗಿ ಬದಲಾಗಿದೆ.

    ಎಲ್ಲದಕ್ಕೂ ಒಂದೇ ಉತ್ತರ: ರೈತರು ಜಾನುವಾರುಗಳಿಗೆ ಆಹಾರ, ಔಷಧ ಕೇಳಲು ಹೋದರೆ ಅಧಿಕಾರಿಗಳು ಸ್ಟಾಕ್ ಖಾಲಿಯಾಗಿದೆ. ಮತ್ತೊಮ್ಮೆ ಬನ್ನಿ ಎನ್ನುತ್ತಾರೆ. ಪ್ರತಿ ಬಾರಿ ಹೋದಾಗ ಈ ಉತ್ತರವನ್ನೇ ಹೇಳುತ್ತಾರೆ. ಸಕಾಲಕ್ಕೆ ಸಿಬ್ಬಂದಿ ಸಹ ಆಸ್ಪತ್ರೆಯಲ್ಲಿರುವುದಿಲ್ಲ ಎನ್ನುವುದು ರೈತರ ಆರೋಪವಾಗಿದೆ. ಒಟ್ಟಿನಲ್ಲಿ ಪಶುಗಳಿಗಾಗಿ ಉಪಯೋಗವಾಗಬೇಕಿದ್ದ ಪಶು ಚಿಕಿತ್ಸಾಲಯ ಈಗ ಬೇರೊಂದು ಕಟ್ಟಡ ನಿರ್ಮಾಣದ ಸಾಮಗ್ರಿ ಇಡುವ ಗೋದಾಮು ಆಗಿ ಮಾರ್ಪಟ್ಟಿರುವುದು ಮಾತ್ರ ವಿಪರ್ಯಾಸ. ಸಂಬಂಧಪಟ್ಟ ಮೇಲಧಿಕಾರಿಗಳು ಗ್ರಾಮೀಣ ಭಾಗದ ರೈತರ ಪಶುಗಳಿಗೆ ಸದುಪಯೋಗವಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.

    ಭೆಂಡವಾಡ ಗ್ರಾಮದ ಪಶು ಆಸ್ಪತ್ರೆಯನ್ನು ಬೇರೆ ಕಟ್ಟಡ ಕಾಮಗಾರಿ ಸಾಮಗ್ರಿ ಇಡಲು ಬಾಡಿಗೆ ಕೊಟ್ಟಂತೆ ಭಾಸವಾಗುತ್ತಿದೆ. ರೈತರ ಪಶುಗಳಿಗೆ ಉಪಯೋಗವಾಗಬೇಕಾದ ಪಶು ಆಸ್ಪತ್ರೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನೀಯ. ಈ ಆಸ್ಪತ್ರೆಯಲ್ಲಿ ಪಶು ಆಹಾರ ಸಿಗುತ್ತಿಲ್ಲ. ಪಶುಗಳಿಗೆ ಬೇಕಾದ ಔಷಧ ಕೇಳಿದರೆ ಲಭ್ಯವಿಲ್ಲ ಎನ್ನುತ್ತಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು.
    | ಮಹಾದೇವ ಹೊಳ್ಕರ್, ಮಾಯಪ್ಪ ಲೋಕೂರೆ
    ರೈತ ಮುಖಂಡರು, ಸವಸುದ್ದಿ

    ಆಸ್ಪತ್ರೆಯಲ್ಲಿ ಬೇರೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಇಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾಳೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವೆ.
    | ಡಾ.ರಾಮು ರಾಠೋಡ ತಾಲೂಕು ಪಶು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts